ಯೋಗೀಶ್ ಗೌಡ ಹತ್ಯೆ ಪ್ರಕರಣ: ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿ ಬಿಡುಗಡೆ ಇಂದು ಅನುಮಾನ

| Updated By: ganapathi bhat

Updated on: Aug 20, 2021 | 6:51 AM

Vinay Kulkarni: ಶುಕ್ರವಾರ ವಿನಯ್ ಕುಲಕರ್ಣಿ ಬಿಡುಗಡೆ ಎಂದು ಅಭಿಮಾನಿಗಳು ಸಂಭ್ರಮಾಚರಣೆಗೆ ತಯಾರಾಗಿದ್ದರು. ಈ ಮಧ್ಯೆ ಬಿಡುಗಡೆ ಇಂದೇ ಆಗುವುದು ಅನುಮಾನ ಎನ್ನಲಾಗುತ್ತಿದೆ.

ಯೋಗೀಶ್ ಗೌಡ ಹತ್ಯೆ ಪ್ರಕರಣ: ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿ ಬಿಡುಗಡೆ ಇಂದು ಅನುಮಾನ
ವಿನಯ್ ಕುಲಕರ್ಣಿ (ಸಂಗ್ರಹ ಚಿತ್ರ)
Follow us on

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ (ಆಗಸ್ಟ್ 19) ಜಾಮೀನು ನೀಡಿದೆ. ಆದರೆ, ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿ ಬಿಡುಗಡೆ ಇಂದು ಆಗುವುದು ಅನುಮಾನವಾಗಿದೆ. ತಾಂತ್ರಿಕ ಕಾರಣಗಳಿಂದ ವಿನಯ್ ಕುಲಕರ್ಣಿ ಇಂದು ಬಿಡುಗಡೆ ಇಲ್ಲ ಎಂದೇ ಹೇಳಲಾಗುತ್ತಿದೆ. ಒಂಭತ್ತೂವರೆ ತಿಂಗಳಿನಿಂದ ವಿನಯ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಶುಕ್ರವಾರ ವಿನಯ್ ಕುಲಕರ್ಣಿ ಬಿಡುಗಡೆ ಎಂದು ಅಭಿಮಾನಿಗಳು ಸಂಭ್ರಮಾಚರಣೆಗೆ ತಯಾರಾಗಿದ್ದರು. ಈ ಮಧ್ಯೆ ಬಿಡುಗಡೆ ಇಂದೇ ಆಗುವುದು ಅನುಮಾನ ಎನ್ನಲಾಗುತ್ತಿದೆ.

ವಿನಯ ಬಿಡುಗಡೆ ಇಂದು ಎಂದು ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಎಲ್ಲರೂ ಹಿಂಡಲಗಾ ಜೈಲಿಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಕಾಂಗ್ರೆಸ್ ಕಾರ್ಯಕರ್ತರಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್​ಗಳು ಹರಿದಾಡಿದ್ದವು. ‘ಆರೋಪಮುಕ್ತರಾಗಿ ಹೊರ ಬರುತ್ತಿರೋ ಅಣ್ಣ’ ಎಂದು ಕೆಲವರು ಪೋಸ್ಟ್ ಮಾಡಿದ್ದರು. ‘ವರಮಹಾಲಕ್ಷ್ಮೀ ಪೂಜೆಯ ದಿನ ಹೊರಬರುತ್ತಿರೋ ವಿನಯ’ ಅಂತಾ ಮತ್ತೆ ಕೆಲವರ ಹಂಚಿಕೊಂಡಿದ್ದರು. ವಿನಯ್ ಕುಲಕರ್ಣಿ ಪತ್ನಿ, ಶಿವಲೀಲಾ ಪತಿಯೊಂದಿಗೆ ನಿಂತಿರೋ ಫೋಟೋ ಪೋಸ್ಟ್ ಮಾಡಿದ್ದರು.

ಇವೆಲ್ಲದರ ಮಧ್ಯೆ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿ ಬಿಡುಗಡೆ ಇಂದೇ ಆಗುವುದು ಅನುಮಾನ ಎಂಬಂತಾಗಿದೆ. ಜಾಮೀನು ನಂತರದ ಪ್ರಕ್ರಿಯೆಗಳು ಬಾಕಿ ಇರುವ ಹಿನ್ನೆಲೆ ಹಾಗೂ ಇಂದು ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆ ಕೋರ್ಟ್​ಗೆ ರಜೆ ಇರುವ ಕಾರಣದಿಂದ, ಬಿಡುಗಡೆ ಪ್ರಕ್ರಿಯೆ ನಾಳೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ, ವಿನಯ್ ಕುಲಕರ್ಣಿ ಶನಿವಾರ ಜೈಲಿನಿಂದ ಬಿಡುಗಡೆ ಸಾಧ್ಯತೆ ಎಂದು ಅಂದಾಜಿಸಲಾಗಿದೆ.

ಬೆಂಬಲಿಗರ ಸಂಭ್ರಮಾಚರಣೆ
ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು ಮಂಜೂರಾದ ಹಿನ್ನೆಲೆ ನಿನ್ನೆ (ಆಗಸ್ಟ್ 19) ಧಾರವಾಡದಲ್ಲಿ ಅವರ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದರು. ಧಾರವಾಡದ ಶಿವಗಿರಿ ಬಡಾವಣೆಯಲ್ಲಿನ ನಿವಾಸದ ಎದುರು ವಿಜಯೋತ್ಸವ ನಡೆಸಲಾಗಿತ್ತು. ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಮತ್ತು ಬಿಜೆಪಿ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನದಲ್ಲಿದ್ದರು. ಕೊಲೆ ಪ್ರಕರಣದಲ್ಲಿ ಆಗಸ್ಟ್ 11ರಂದು ಸುಪ್ರೀಂಕೋರ್ಟ್​ ಜಾಮೀನು ನೀಡಿತ್ತು. ಅದರೆ ಸಾಕ್ಷಿನಾಶ ಪ್ರಕರಣ ಬಾಕಿಯಿದ್ದ ಕಾರಣ ಬಿಡುಗಡೆ ಸಾಧ್ಯವಾಗಿರಲಿಲ್ಲ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿತ್ತು. ಇದೀಗ ಸಾಕ್ಷ್ಯನಾಶ ಪ್ರಕರಣದಲ್ಲಿಯೂ ಜಾಮೀನು ದೊರೆತಿದ್ದು ವಿನಯ ಕುಲಕರ್ಣಿ ಅವರ ಬಿಡುಗಡೆ ಸಾಧ್ಯವಾಗಲಿದೆ.

ಇದನ್ನೂ ಓದಿ: ಜಾಮೀನು ಆದೇಶಕ್ಕೆ ಕಾಯುತ್ತಿರುವ ಹಿಂಡಲಗ ಜೈಲು ಸಿಬ್ಬಂದಿ: ಧಾರವಾಡದಲ್ಲಿ ವಿನಯ್ ಕುಲಕರ್ಣಿ ಬೆಂಬಲಿಗರ ಸಂಭ್ರಮಾಚರಣೆ

ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಜಾಮೀನು