ಬೆಂಗಳೂರು: ಸರ್ಕಾರದ ಹುದ್ದೆಗಾಗಿ ಶ್ರಮಿಸುವವರು ಹಲವರು. ಬಡವರು, ಮಧ್ಯಮ ವರ್ಗದ ಜನರು ಸರ್ಕಾರ ಹುದ್ದೆಯ ಕನಸನ್ನು ಹೊತ್ತು ಅದಕ್ಕೆ ಬೇಕಾಗುವ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ. ಜನರ ಸೇವೆಯೇ ಜನಾರ್ದನ ಸೇವೆ ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಆದರೆ ಕಂಡ ಕನಸು ಚಿಗುರೊಡೆಯುವ ಮೊದಲೇ ನಾಶವಾಗುವುದು ಅಘಾತದ ವಿಷಯ.
ಜ.24ರಂದು ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ಎಲ್ಲರಿಗೂ ಅಘಾತ ಉಂಟುಮಾಡಿದೆ. ಸುಮಾರು 3.5 ಲಕ್ಷಕ್ಕೂ ಹೆಚ್ಚು ಜನರು ಬರೆಯಬೇಕಿದ್ದ ಪರೀಕ್ಷೆಯನ್ನು ಇದೀಗ ಪ್ರಶ್ನೆಪತ್ರಿಕೆ ಸೋರಿಕೆ ಕಾರಣದಿಂದ ಮುಂದೂಡಲಾಗಿದೆ. ಸದ್ಯ ಇನ್ನು ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿಲ್ಲ. ಇದು ಸರ್ಕಾರಿ ಹುದ್ದೆಯ ಆಕಾಂಕ್ಷಿಗಳ ಪರಿಶ್ರಮಕ್ಕೆ ದೊಡ್ಡ ಮೋಸವಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ಈ ಸೋರಿಕೆಯಲ್ಲಿ ಅಧಿಕಾರಿ ಕೈ ಜೋಡಿಸಿರುವುದು ದುರಂತ. ಇದಕ್ಕೆ ಪರಿಹಾರಗಳೇನು ಎನ್ನುವ ಪ್ರಶ್ನೆಯನ್ನು ಆಧರಿಸಿ ಟಿವಿ9 ಡಿಜಿಟಲ್ ಲೈವ್ನಲ್ಲಿ ಚರ್ಚೆ ಮಾಡಲಾಯಿತು. ಈ ಚರ್ಚೆಯನ್ನು ನಿರೂಪಕಿ ಸೌಮ್ಯಾ ಹೆಗಡೆ ನಡೆಸಿಕೊಟ್ಟರು. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಹಾಗೂ ಪರೀಕ್ಷೆ ವಂಚಿತ ಸುರೇಶ್ ನಾಯ್ಕ್ ಭಾಗಿಯಾಗಿದ್ದರು.
ಚರ್ಚೆಯಲ್ಲಿ ಮೊದಲಿಗೆ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಪ್ರಶ್ನೆಪತ್ರಿಕೆ ಸೋರಿಕೆಯಿಂದ ಆಕಾಂಕ್ಷಿಗಳಿಗೆ ಅಘಾತವುಂಟಾಗಿರುವುದು ನಿಜ. ಭ್ರಷ್ಟಾಚಾರ ವ್ಯಾಪಕವಾಗಿದೆ. ಭ್ರಷ್ಟಾಚಾರದ ಮೂಲಕವೇ ಬಹಳಷ್ಟು ಅಧಿಕಾರಿಗಳು ಸರ್ಕಾರ ಕೆಲಸವನ್ನು ತೆಗೆದುಕೊಂಡಿರುತ್ತಾರೆ. ಈ ಭ್ರಷ್ಟಾಚಾರವೆಂಬ ದೊಡ್ಡ ಭೂತದಿಂದ ಕೆಪಿಎಸ್ಸಿ ಉದ್ಯೋಗದ ಬಗ್ಗೆ ಕನಸು ಕಂಡ ಬಹಳಷ್ಟು ಜನರು ಅನ್ಯಾಯಕ್ಕೊಳಗಾಗಿದ್ದಾರೆ. ಜಾತಿ, ಹಣ ಹಲವು ಕಾರಣಗಳಿಂದಲೂ ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ ಆಗಿದೆ. ಗ್ರಾಮೀಣ, ನಗರ ಪ್ರದೇಶದಲ್ಲಿನ ಅಭ್ಯರ್ಥಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಇಂತಹ ಅಘಾತಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು. ವಕೀಲರನ್ನು ಹಿಡಿದು ಹೊರಬರಬಾರದು. ಈ ನಿಟ್ಟಿನಲ್ಲಿ ಶಿಕ್ಷೆಯಾದಾಗ ಮುಂದೆ ಇಂತಹ ಕೆಟ್ಟ ಪದ್ಧತಿ ತಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಚರ್ಚೆಯ ಮುಂದಿನ ಭಾಗವಾಗಿ ಮಾತನಾಡಿದ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಭ್ರಷ್ಟಾಚಾರದ ಮೂಲಕವೇ ಬಹಳಷ್ಟು ಜನರು ಸರ್ಕಾರದ ಕೆಲಸಕ್ಕೆ ಬರುತ್ತಾರೆ ಎಂದು ಹೇಳಿಕೆ ನೀಡಿದ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ಅವರ ಮಾತನ್ನು ಒಪ್ಪಿಕೊಳ್ಳುವ ಜೊತೆಗೆ ಇತ್ತೀಚಿನ ದಿನಗಳಲ್ಲಿ ಇಂತಹ ಭ್ರಷ್ಟಾಚಾರದಿಂದ ಬಹಳಷ್ಟು ಜನರ ಆಸೆಗಳು ನುಚ್ಚುನೂರಾಗಿವೆ. ಆದರೆ ಹಿಂದಿನಿಂದ ನೇಮಕವಾದ ಎಲ್ಲ ಅಧಿಕಾರಿಗಳೂ ಭ್ರಷ್ಟರು ಎನ್ನಲಾಗದು. ಈ ಮೊದಲು ಇದಕ್ಕೆ ಅವಕಾಶಗಳಿರಲಿಲ್ಲ. ನ್ಯಾಯದಿಂದ ಅಧಿಕಾರಕ್ಕೆ ಕಾಲಿಡುತ್ತಿದ್ದರು. ಕಾಲಕಾಲಕ್ಕೆ ಕೆಲ ವಿಚಾರಗಳಲ್ಲಿ ಬದಲಾವಣೆ ಕಂಡಂತೆ ಇಂತಹ ಅಚಾತುರ್ಯಗಳು ನಡೆಯುತ್ತವೆ ಎಂದರು.
ನಿಯಮಬದ್ಧವಾಗಿ ಪರೀಕ್ಷೆ ನಡೆಯುತ್ತಿದೆ. ಕೆಲವು ವರ್ಷಗಳ ಈಚೆಗೆ ಇಂತಹ ಸಮಸ್ಯೆಗಳು ಹುಟ್ಟುಕೊಳ್ಳುತ್ತಿವೆ. ಇದರ ಬಗ್ಗೆ ಸರ್ಕಾರ ಬೇಜವಾಬ್ದಾರಿ ತೋರದೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೋಸದಿಂದ ಹಣ ಸಂಪಾದಿಸುವ ಭ್ರಷ್ಟರಿಗೆ ತಕ್ಕ ಶಿಕ್ಷೆ ನೀಡುವ ನಿಟ್ಟಿನಲ್ಲಿ ಸರ್ಕಾರ ಜವಾಬ್ದಾರಿ ವಹಿಸಬೇಕೆಂದು ಒತ್ತಿ ಹೇಳಿದರು. ಕೆಪಿಎಸ್ಸಿ ಮೌಲ್ಯವನ್ನು ಕಾಪಾಡುವ ದೃಷ್ಟಿಯಲ್ಲಿ ನಿಷ್ಪಕ್ಷಪಾತವಾಗಿ ಇತರರಿಂದ ಕೆಲವು ಸಲಹೆಗಳನ್ನು ಸಂಗ್ರಹಿಸಿ, ಚರ್ಚೆ ನಡೆಸಿ ಅಂತಿಮ ನಿರ್ಧಾರದ ಬಗ್ಗೆ ಸರ್ಕಾರ ಗಮನಹರಿಸುವುದು ಸೂಕ್ತವಾಗಿದೆ ಹೊರತು ಈ ರೀತಿಯ ಕೆಟ್ಟ ಹೆಸರು ಬಂದಾಗ ಸರ್ಕಾರ ಕಣ್ಮುಚ್ಚಿ ಕೂರಬಾರದು ಎಂದು ಹೇಳಿದರು.
ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಪರೀಕ್ಷೆ ಮುಂದೂಡಲಾಗಿದೆ ಎಂದು ತಿಳಿದಾಗ ಪರೀಕ್ಷೆ ಬರೆಯಲು ಸಜ್ಜಾಗಿದವರಿಗೆ ಎದುರಾದ ಸವಾಲುಗಳೇನು ಎಂದು ಪರೀಕ್ಷೆ ವಂಚಿತ ಸುರೇಶ್ ನಾಯ್ಕ್ ಅವರಲ್ಲಿ ಕೇಳಿದಾಗ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಹೆಚ್ಚಿನ ಸಮಯವನ್ನು ಪರೀಕ್ಷೆ ಸಿದ್ಧತೆಗೆ ಮೀಸಲಿಡುತ್ತಾರೆ. ಸರ್ಕಾರಿ ಉದ್ಯೋಗ ಪಡೆಯಲು ಹೆಚ್ಚು ಶ್ರಮಿಸುತ್ತಾರೆ. ಆದರೆ ನ್ಯಾಯವಾಗಿ ಪರೀಕ್ಷೆಗೆ ಸಿದ್ಧರಾಗುವವರಿಗೆ ಈ ರೀತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಅರಗಿಸಿಕೊಳ್ಳಲಾಗದ ನೋವು. ಅದೆಷ್ಟೋ ಬಡ ಜನರು ಜೀವನದಲ್ಲಿ ಏನಾದರೂ ಸಾಧಿಸಬೇಕೆಂದು ಹಗಲು ರಾತ್ರಿ ಎನ್ನದೇ ಓದುತ್ತಿರುತ್ತಾರೆ. ಆದರೆ ಭ್ರಷ್ಟಾಚಾರವು ಇದಕ್ಕೆ ಮುಳುವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.