ದೇವರಿಗೆ ರಕ್ಷಣೆ ಇಲ್ಲ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟ ಭಕ್ತರು..!
15 ಅಡಿ ಎತ್ತರದ ಏಕ ಶಿಲಾ ಮೂರ್ತಿಯಾಗಿ ನಿಂತಿರುವ ಶ್ರೀ ವಿಷ್ಣುವಿನ ಅವರಾತ ವರದರಾಜಸ್ವಾಮಿಗೆ ಬರೋಬ್ಬರಿ 15 ವರ್ಷಗಳಿಂದ ರಕ್ಷಣೆಯೇ ಇಲ್ಲದಂತಾಗಿದೆ.

ಹಾಸನ: ಜಿಲ್ಲೆಯ ಬಾಹುಬಲಿ ಮೂರ್ತಿ ಬಿಟ್ಟರೆ ನಂತರ ಸ್ಥಾನ 15 ಅಡಿ ಎತ್ತರದ ಶ್ರೀ ಲಕ್ಷ್ಮಿವರದರಾಜಸ್ವಾಮಿ ದೇವರ ಮೂರ್ತಿಗೆ ಸಲ್ಲಬೇಕು. ಇಂತಹ ವಿಶಿಷ್ಟ ವಾಸ್ತುಶಿಲ್ಪದ ದೇಗುಲಕ್ಕೆ ಕನಿಷ್ಠ ಕಿಟಕಿ ಬಾಗಿಲುಗಳಿಲ್ಲ. ಜೀರ್ಣೋದ್ಧಾರಕ್ಕೆಂದು 15 ವರ್ಷಗಳ ಹಿಂದೆ ಕೆಡವಿದ ಕಟ್ಟಡ ಹಾಳು ಬಿದ್ದಿದೆ. ಸಕಲ ಜೀವರಾಶಿಗಳನ್ನು ಕಾಯುತ್ತಾನೆಂದು ನಂಬುವ ವಿಷ್ಣುವಿನ ಅವತಾರವಾದ ವರದರಾಜಸ್ವಾಮಿಗೇ ಇಲ್ಲಿ ರಕ್ಷಣೆ ಇಲ್ಲದಂತಾಗಿರುವ ಬಗ್ಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶೀಘ್ರವೇ ದೇಗುಲಕ್ಕೆ ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ.
ಹಾಸನದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿರುವ ಕೊಂಡಜ್ಜಿ ಗ್ರಾಮದ ಐತಿಹಾಸಿಕ ಹಾಗು ಬರೊಬ್ಬರಿ 900 ವರ್ಷಗಳಷ್ಟು ಪುರಾತನ ಹೊಯ್ಸಳರ ಕಾಲದ ದೇವಾಲಯದ ಗರ್ಭಗುಡಿ ಬಾಗಿಲಿನೊಳಗೆ 15 ಅಡಿ ಎತ್ತರದ ಏಕ ಶಿಲಾ ಮೂರ್ತಿಯಾಗಿ ನಿಂತಿರುವ ಶ್ರೀ ವಿಷ್ಣುವಿನ ಅವತಾರ ವರದರಾಜಸ್ವಾಮಿಗೆ ಬರೋಬ್ಬರಿ 15 ವರ್ಷಗಳಿಂದ ರಕ್ಷಣೆಯೇ ಇಲ್ಲದಂತಾಗಿದೆ.
₹25 ಲಕ್ಷ ಬಿಡುಗಡೆ ಜೀರ್ಣೋದ್ದಾರಕ್ಕಾಗಿ ಹಳೆ ದೇವಾಲಯ ಕೆಡವಿದ ಬಳಿಕ 2010ರಲ್ಲಿ ಸಿಎಂ ಯಡಿಯೂರಪ್ಪರವರು ₹25 ಲಕ್ಷ ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ ಹಣದಲ್ಲಿ ನಡೆದ ಅರ್ಧಂಬರ್ಧ ಕಾಮಗಾರಿಯಿಂದ ದೇವಾಲಯಕ್ಕೆ ಕಿಟಕಿ, ಬಾಗಿಲುಗಳಿಲ್ಲ, ನೆಲಕ್ಕೆ ಪ್ಲಾಸ್ಟರಿಂಗ್ ಮಾಡಲಾಗಿಲ್ಲ, ದೇಗುಲದ ಗರ್ಭಗುಡಿ ಬಾಗಿಲೂ ಭದ್ರವಾಗಿಲ್ಲ. ಹತ್ತಾರು ವರ್ಷಗಳಿಂದ ಅಲೆದು ಸುಸ್ತಾಗಿ ಕೈಚೆಲ್ಲಿ ಕೂತಿದ್ದ ಭಕ್ತರು, ಕಳೆದ ಸಂಕ್ರಾಂತಿ ಹಬ್ಬದ ದಿನ ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದರು. ರಾಜ್ಯದ ಅತ್ಯಂತ ಪುರಾತನ ಕಾಲದ ದೇಗುಲದ ದುಸ್ಥಿತಿ ಬಗ್ಗೆ ಜನರು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗು ಸ್ಥಳೀಯ ಶಾಸಕರು ಪರಿಶೀಲನೆ ನಡೆಸಿದರು.
ಇತಿಹಾಸವೇನು? 900 ವರ್ಷಗಳ ಹಿಂದೆ ಬೇಲೂರಿನ ವಿಶ್ವ ವಿಖ್ಯಾತ ಚೆನ್ನಕೇಶವ ದೇವಾಲಯ ನಿರ್ಮಾಣ ಮಾಡಿ ಅಲ್ಲಿಗೆ ದೇವರ ವಿಗ್ರಹ ಪ್ರತಿಷ್ಠಾಪಿಸಲು ಕೃಷ್ಣ ಶಿಲೆಯ ಈ ಬೃಹತ್ ಮೂರ್ತಿಯನ್ನು ಇದೇ ಕೊಂಡಜ್ಜಿ ಮಾರ್ಗದಲ್ಲಿ ಸಾಗಿಸಲಾಗುತ್ತಿತ್ತಂತೆ. ದಾರಿ ಮಧ್ಯೆ ಈ ಗ್ರಾಮದಲ್ಲಿ ವಿಶ್ರಾಂತಿ ಪಡೆದು ಇನ್ನೇನು ಬೇಲೂರಿಗೆ ತೆರಳಬೇಕೆನ್ನುವ ವೇಳೆಗೆ ಅಲ್ಲಿ ಗರ್ಭಗುಡಿ ನಿರ್ಮಾಣವಾಗಿತ್ತು. ಜೊತೆಗೆ ನಿರ್ಮಾಣವಾದ ಆ ಗರ್ಭಗುಡಿಗೆ ಈ ವಿಗ್ರಹ ದೊಡ್ಡದಾಯಿತೆಂದು ಇದನ್ನು ಇಲ್ಲಿಯೇ ಬಿಟ್ಟು ಹೋಗಿದ್ದರಂತೆ. ಆಗ ಇಲ್ಲಿನ ಜನರು ಈ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿದರೆಂಬುದು ಐತಿಹ್ಯ.
ಭಕ್ತರು ಮಾಡಿದ್ದ ವಿಡಿಯೊ ನೋಡಿದ ರಾಜ್ಯದ ಬೇರೆ ಬೇರೆ ಸಚಿವರು, ಶಾಸಕರು ನನ್ನ ಗಮನಕ್ಕೆ ತಂದರು. ಆದರೆ ಮೂರು ತಿಂಗಳ ಹಿಂದೆಯೇ ನಾನು ಗ್ರಾಮಕ್ಕೆ ಭೇಟಿ ನೀಡಿ ಈ ದೇವಾಲಯ ಅಭಿವೃದ್ದಿ ಬಗ್ಗೆ ಚರ್ಚೆಮಾಡಿ ಹೋಗಿದ್ದೆ. ಈಗ ಭಕ್ತರ ಆಸಕ್ತಿ ನೋಡಿ ನನಗೂ ಖುಷಿಯಾಗಿದೆ. ಮುಂದಿನ ಗಣರಾಜ್ಯೋತ್ಸವದ ಒಳಗಾಗಿ ದೇಗುಲದ ಸಂಪೂರ್ಣ ಜೀರ್ಣೋದ್ಧಾರ ಪೂರೈಸಿ ಸಿಎಂ ಯಡಿಯೂರಪ್ಪನವರಿಂದಲೇ ದೇವಾಲಯ ಉದ್ಘಾಟನೆ ಮಾಡಿಸಲಾಗುತ್ತದೆ ಎಂದು ಶಾಸಕ ಪ್ರೀತಂಗೌಡ ಹೇಳಿದ್ದಾರೆ.
Ram Temple Construction Fund ರಾಮ ಮಂದಿರ ನಿರ್ಮಾಣ ನಿಧಿ ಅಭಿಯಾನ: RSSಗೆ ಸಾಥ್ ನೀಡಿದ ಸುಮಲತಾ