Budget 2021 ನಿರೀಕ್ಷೆ: ಸಣ್ಣ ಉದ್ಯಮ ಬೆಳೆಯಲು ಕಚ್ಚಾವಸ್ತುಗಳ ಬೆಲೆ ಇಳಿಯಬೇಕು
ಕಾಗದ ಪತ್ರಗಳ ನವೀಕರಣ, ನಿರಾಕ್ಷೇಪಣಾ ಪ್ರಮಾಣಪತ್ರದಂತಹ ದಾಖಲೆಗಳಿಗಾಗಿ ಅಧಿಕಾರಿಗಳು ಪದೇಪದೇ MSMEಗಳನ್ನು ಬೆನ್ನತ್ತಬಾರದು. ಅಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಸರಳಗೊಳ್ಳಬೇಕು.
ಸಂಕಷ್ಟ ಕಾಲದಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಬಗ್ಗೆ ಹತ್ತಾರು ವಲಯಗಳಲ್ಲಿ ನೂರಾರು ನಿರೀಕ್ಷೆಗಳು ಮನೆಮಾಡಿವೆ. ಈ ಲೇಖನದಲ್ಲಿ ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಬಿ.ಮುರಳೀಧರ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಕ್ಷೇತ್ರದ ನಿರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ.
ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು. ಗರಿಷ್ಠ ₹ 10 ಕೋಟಿ ಬಂಡವಾಳ ಗಾತ್ರ ಹೊಂದಿರುವ ಉದ್ಯಮಗಳು ಈ MSME (Micro Small & Medium Enterprices) ವ್ಯಾಖ್ಯಾನದ ವ್ಯಾಪ್ತಿಗೆ ಬರುತ್ತವೆ. ಇಬ್ಬರಿಂದ 500 ಮಂದಿಗೆ ಉದ್ಯೋಗ ಒದಗಿಸುವ ಉದ್ಯಮಗಳನ್ನೂ ಇದೇ ಚೌಕಟ್ಟಿನಲ್ಲಿ ನೋಡುವುದು ವಾಡಿಕೆ.
ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲೆಂದು ಘೋಷಿಸಿದ ಲಾಕ್ಡೌನ್ ಪರಿಣಾಮಗಳಿಂದ ಎಂಎಸ್ಎಂಇ ಉದ್ಯಮಗಳು ನಜ್ಜುಗುಜ್ಜಾದವು. ಈ ಉದ್ಯಮಗಳನ್ನು ಉಳಿಸಿಕೊಳ್ಳುವುದು ಈ ಕ್ಷಣದ ಸವಾಲು. ಸರ್ಕಾರಕ್ಕಿಂತ MSME ಆರಂಭಿಸಿದ ವ್ಯಕ್ತಿಗಳಿಗೆ ಇದರ ಅಗತ್ಯ ಅತ್ಯಂತ ಹೆಚ್ಚು. ತಮ್ಮ ಉದ್ಯಮಗಳೇ ಅವರ ಬದುಕು. ದೇಶದ ಶೇ 40ರಿಂದ 45ರಷ್ಟು ಉದ್ಯೋಗ ಸೃಷ್ಟಿ ಇದೇ ಕ್ಷೇತ್ರದಿಂದ ಆಗುತ್ತದೆ ಎಂಬುದನ್ನು ಸದಾ ಗಮನದಲ್ಲಿಡಬೇಕು. ಈ ಕ್ಷೇತ್ರಕ್ಕೆ ಪುಷ್ಟಿ ನೀಡಲು ಬಜೆಟ್ನಲ್ಲಿ ಆದ್ಯತೆ ಸಿಗಬೇಕಿದೆ.
ಒಂದು ದೇಶದ ಆರ್ಥಿಕ ಮಟ್ಟ ಹೆಚ್ಚಲು ದೇಶದ ಒಳಗೆ ವಹಿವಾಟು ನಡೆದರೆ ಸಾಲದು. ರಫ್ತು ಹೆಚ್ಚಬೇಕು. ಉತ್ಪನ್ನಗಳ ರಫ್ತು ಹೆಚ್ಚಿಸಲು ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಯಸುತ್ತೇನೆ.
ಕಚ್ಚಾ ವಸ್ತುಗಳ ಬೆಲೆ ಇಳಿಯಲಿ ಕಳೆದ ಕೆಲ ತಿಂಗಳಿಂದ ಉಕ್ಕು ಸೇರಿದಂತೆ ಹಲವು ಪ್ರಮುಖ ಕಚ್ಚಾವಸ್ತುಗಳ ಬೆಲೆ ಗಗನಕ್ಕೇರಿದೆ. MSME ಕ್ಷೇತ್ರದ ಮೇಲೆ ಇದು ಬೀರಿದ ಪರಿಣಾಮ ಅಂಥಿಂಥದ್ದಲ್ಲ. ಕಚ್ಚಾವಸ್ತುಗಳ ಬೆಲೆಯು ಸಿದ್ಧ ಉತ್ಪನ್ನಗಳ ಬೆಲೆಯನ್ನೂ ನಿರ್ಧರಿಸುತ್ತವೆ. ಕಚ್ಚಾವಸ್ತುಗಳ ಬೆಲೆ ಏರಿಕೆಯಾದರೆ ತಯಾರಿಕೆ ಘಟಕಗಳ ನಿರ್ವಹಣಾವೆಚ್ಚವೂ ದುಬಾರಿಯಾಗಿ, ಉದ್ಯಮಿಗಳ ಜೇಬಿಗೂ ಹೊರೆಯಾಗುತ್ತದೆ. ಕಚ್ಚಾವಸ್ತುಗಳ ಯೋಗ್ಯದರದಲ್ಲಿ ಉದ್ಯಮಿಗಳಿಗೆ ತಲುಪುವಂತೆ ಆಗಲು ಈ ಬಾರಿಯ ಬಜೆಟ್ನಲ್ಲಿ ಯೋಜನೆ ಘೋಷಿಸಬೇಕು.
ಆರ್ಥಿಕ ವಹಿವಾಟು ಕ್ಷೀಣಿಸಿರುವುದರಿಂದ ಸಾಲ ತೀರಿಸಲು ಎಂಎಸ್ಎಂಇ ಉದ್ಯಮಿಗಳು ಪರದಾಡುತ್ತಿದ್ದಾರೆ. ಲಾಕ್ಡೌನ್ ಇದಕ್ಕೆ ಕಾರಣ ಎಂದು ಮತ್ತೊಮ್ಮೆ ಹೇಳಬೇಕಿಲ್ಲ ತಾನೆ. ಪರಿಸ್ಥಿತಿ ಇನ್ನೂ ತಿಳಿಗೊಂಡಿಲ್ಲ. ಸಮಾಜದಲ್ಲಿ ಸಹಜ ಸ್ಥಿತಿ ನೆಲೆಸಿದ ನಂತರವೂ ಕನಿಷ್ಠ 6 ತಿಂಗಳಾದರೂ ಈ ಉದ್ಯಮಗಳು ಚೇತರಿಸಿಕೊಳ್ಳಲು ಸಮಯ ನೀಡಬೇಕಿದೆ. ಎಂಎಸ್ಎಂಇ ವಲಯದ ಉದ್ಯಮಿಗಳು ಸಾಲ ಮರುಪಾವತಿ ಮಾಡಲು ಸಮಯಾವಕಾಶವನ್ನು ಈ ಬಾರಿಯ ಬಜೆಟ್ನಲ್ಲಿ ಘೋಷಿಸಬೇಕೆಂದು ನಿರೀಕ್ಷಿಸುತ್ತಿದ್ದೇನೆ.
ಬಡ್ಡಿದರ ಕಡಿಮೆಯಾಗಲಿ ಬಡ್ಡಿದರದ ವಿಷಯವನ್ನೂ ಇಲ್ಲಿ ಪ್ರಸ್ತಾಪಿಸಲೇಬೇಕು. ಉದ್ಯಮಿಗಳು ಪಡೆಯುವ ಸಾಲಕ್ಕೆ ಅತಿ ಹೆಚ್ಚು ಬಡ್ಡಿದರ ವಿಧಿಸುವ ಕೆಲವೇ ದೇಶಗಳಲ್ಲಿ ನಮ್ಮ ದೇಶವೂ ಒಂದು. ಮೊದಲು ಈ ಬಡ್ಡಿದರದ ಪ್ರಮಾಣ ಕಡಿಮೆಯಾಗಬೇಕು. ಎಂಎಸ್ಎಂಇಗಳು ಉಳಿಯಲು ಇದು ಅತ್ಯಗತ್ಯ.
MSMEಗಳನ್ನು ಉತ್ತೇಜಿಸುವ ಯೋಜನೆಗಳಿಗೆ ಇನ್ನಷ್ಟು ಬಲ ತುಂಬಬೇಕು. ಅದರಲ್ಲೂ ರಫ್ತು ಮಾಡುವ ಉತ್ಪನ್ನಗಳನ್ನು ಉತ್ಪಾದಿಸುವ ಘಟಕಗಳ ಬಗ್ಗೆ ಸರ್ಕಾರ ಹೆಚ್ಚು ಗಮನನೀಡಬೇಕಿದೆ. ನಮ್ಮ ಕಾರ್ಖಾನೆಗಳು ರಫ್ತು ಮಾಡಬಲ್ಲ ವಸ್ತುಗಳನ್ನು ಎಂದು ಖುಷಿಯಿಂದ ಉತ್ಪಾದಿಸುತ್ತವೆಯೋ ಆಗಲೇ ನಾವು ಆರ್ಥಿಕ ಚೇತರಿಕೆ ಕಾಣಲು ಸಾಧ್ಯ.
ಸಂಶೋಧನೆಗೆ ಹಣ ವಿನಿಯೋಗಿಸಲಿ ಆರ್ಥಿಕವಾಗಿ ಸಬಲವಾಗಿರುವ ದೇಶಗಳು ಸಂಶೋಧನೆಗಾಗಿ ಅಪಾರ ಹಣ ವಿನಿಯೋಗಿಸುತ್ತವೆ. ಇದರಿಂದಲೇ ಹೊಸ ತೆರನಾದ ವಸ್ತುಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಸಂಶೋಧನೆಗೆ ಹಣ ತೊಡಗಿಸುವ ಉಮೇದು ಸರ್ಕಾರಕ್ಕೆ ಬರಬೇಕು. ಈ ಬಾರಿಯ ಬಜೆಟ್ ಈ ಉಮೇದಿನ ಬೀಜ ಬಿತ್ತಲಿ ಎಂದು ಆಶಿಸುವೆ.
ಕಾಗದ ಪತ್ರಗಳ ನವೀಕರಣ, ನಿರಾಕ್ಷೇಪಣಾ ಪ್ರಮಾಣಪತ್ರದಂತಹ ದಾಖಲೆಗಳಿಗಾಗಿ ಅಧಿಕಾರಿಗಳು ಪದೇಪದೇ MSMEಗಳನ್ನು ಬೆನ್ನತ್ತಬಾರದು. ಅಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಸರಳಗೊಳ್ಳಬೇಕು. ಕೇಂದ್ರ-ರಾಜ್ಯ ಸರ್ಕಾರಗಳು ಇದಕ್ಕಾಗಿ ಜೊತೆಗೂಡಿ ಕೆಲಸ ಮಾಡಬೇಕು.
ಅತ್ಯುತ್ತಮ ಆರ್ಥಿಕ ಮಟ್ಟ ಹೊಂದಿರುವ ದೇಶಗಳ ಪಟ್ಟಿಯಲ್ಲಿ ನಿಧಾನವಾಗಿ ನಮ್ಮ ದೇಶದ ಹೆಸರು ಕಾಣಿಸುತ್ತಿದೆ. ವಿಶ್ವದ 10 ಅತ್ಯುತ್ತಮ ಆರ್ಥಿಕತೆ ಹೊಂದಿರುವ ದೇಶಗಳ ಸಾಲಲ್ಲಿ ನಾವು ಕಾಣಬೇಕು. ಈ ವರ್ಷ ಇದನ್ನು ಸಾಧಿಸಬಲ್ಲ ಬಜೆಟ್ ಅನ್ನು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಬೇಕು ಎಂಬ ನಿರೀಕ್ಷೆ ನನ್ನದು.
Budget 2021-22: ಚೇತರಿಸಿಕೊಳ್ಳುತ್ತಾ ಆರ್ಥಿಕತೆ? ದೇಶದ ಜನರ ನಿರೀಕ್ಷೆಗಳೇನು?
Published On - 7:24 pm, Wed, 27 January 21