ಕೆಂಪುಕೋಟೆ ದಾಳಿ: ಕೆಲವು ದಿನಗಳ ಕಾಲ ಪ್ರವೇಶಕ್ಕೆ ನಿರ್ಬಂಧ, 500ಕ್ಕೂ ಹೆಚ್ಚು ಟ್ವಿಟರ್ ಖಾತೆಗಳು ಅಮಾನತು
ಕೆಂಪುಕೋಟೆಯ ಪ್ರದೇಶವನ್ನು ಮತ್ತೆ ಸುಸ್ಥಿತಿಗೆ ತರಲು ಕಾಲಾವಕಾಶ ಬೇಕು. ಹೀಗಾಗಿ ಕೆಲವು ದಿನಗಳ ಕಾಲ ಕೆಂಪುಕೋಟೆಗೆ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ದೆಹಲಿ: ಕೆಂಪುಕೋಟೆ ಮೇಲೆ ಕಿಡಿಗೇಡಿಗಳ ದಾಳಿ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಕೆಂಪುಕೋಟೆಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೆಂಪುಕೋಟೆಯ ಟಿಕೆಟ್ ಕೌಂಟರ್, ಸೆಕ್ಯೂರಿಟಿ ಕೌಂಟರ್, ಮೆಟಲ್ ಡಿಟೆಕ್ಟರ್, ಸ್ಕ್ಯಾನಿಂಗ್ ಯಂತ್ರವನ್ನು ಆಕ್ರೋಶಗೊಂಡ ಪ್ರತಿಭಟನಾ ನಿರತರು ಧ್ವಂಸಗೊಳಿಸಿದ್ದರು. ನಿನ್ನೆ ನಡೆದ ಧರಣಿ ಹಿಂಸಾತ್ಮಕ ರೂಪವನ್ನು ತಾಳಿದ ಕಾರಣ, ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಕೋಟೆಯ ಭಾಗಗಳಲ್ಲಿ ರೋಷಾವೇಶ ತೋರಿದ್ದರು.
ಇಂದು ಬೆಳಗ್ಗೆ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈಗ ಕೆಂಪುಕೋಟೆಯ ಪ್ರದೇಶವನ್ನು ಮತ್ತೆ ಸುಸ್ಥಿತಿಗೆ ತರಲು, ಎಲ್ಲವನ್ನೂ ಮೊದಲಿನಂತೆ ಮಾಡಲು ಕಾಲಾವಕಾಶ ಬೇಕು. ಹೀಗಾಗಿ ಕೆಲವು ದಿನಗಳ ಕಾಲ ಕೆಂಪುಕೋಟೆಗೆ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಹಿಂಸೆ ಪ್ರಚೋದಿಸುವ ಮಾಹಿತಿ ಪೋಸ್ಟರ್ ಹಂಚಿಕೊಂಡ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಟ್ವಿಟರ್ ಖಾತೆಗಳನ್ನು ಅಮಾನತು ಮಾಡಲಾಗಿದೆ. ಟ್ವಿಟರ್ ಖಾತೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಟ್ವಿಟರ್ ಸಂಸ್ಥೆ ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡಿದ 500ರಷ್ಟು ಟ್ವಿಟರ್ ಖಾತೆಗಳನ್ನು ಅಮಾನತುಗೊಳಿಸಲಾಗಿದೆ.
37 ರೈತ ಮುಖಂಡರ ವಿರುದ್ಧ ಎಫ್ಐಆರ್ ದಾಖಲು ನಿನ್ನೆ ನಡೆದ ವಿಧ್ವಂಸಕಾರಿ ಕೃತ್ಯಕ್ಕೆ ಸಂಬಂಧಿಸಿ, ದೆಹಲಿ ಪೊಲೀಸರು 37 ರೈತ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಮೇಧಾ ಪಾಟ್ಕರ್, ಬೂಟಾ ಸಿಂಗ್, ಯೋಗೇಂದ್ರ ಯಾದವ್ ಅವರ ವಿರುದ್ಧ ನಿನ್ನೆ ನಡೆದ ಘಟನಾವಳಿಗಳಿಗೆ ಹೊಣೆಯಾಗಿಸಿ ಎಫ್ಐಆರ್ ದಾಖಲಿಸಲಾಗಿದೆ. ಒಪ್ಪಿತವಾಗಿದ್ದ ಮಾರ್ಗದಲ್ಲಿ ಚಳುವಳಿ ನಡೆಸದ ಕಾರಣ ಹಾಗೂ ಸೂಚಿತ ಸಮಯ ಪಾಲಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಪುಕೋಟೆಯಲ್ಲಿ ನಡೆದ ಘಟನಾವಳಿಗಳಿಂದ ಮನನೊಂದು ಎರಡು ರೈತ ಸಂಘಟನೆಗಳು ಚಳುವಳಿಯಿಂದ ಹಿಂದೆ ಸರಿಯುವುದಾಗಿ ಈಗಾಗಲೇ ಮಾಹಿತಿ ನೀಡಿವೆ. ಹೀಗಾಗಿ, ದೆಹಲಿ ಗಡಿಭಾಗದಲ್ಲಿ ಬೀಡುಬಿಟ್ಟಿದ್ದ ರೈತರು ತಮ್ಮ ಟೆಂಟ್ ಬಿಚ್ಚುತ್ತಿರುವ ದೃಶ್ಯ ಕಂಡುಬಂದಿದೆ.
ರೈತರು ದೆಹಲಿ ಗಡಿಭಾಗದ ಪ್ರತಿಭಟನಾ ಸ್ಥಳದಿಂದ ಟೆಂಟ್ ಬಿಚ್ಚುತ್ತಿರುವುದು
#WATCH: Some farmers seen taking off their tents at Chilla border following announcement of Thakur Bhanu Pratap Singh, president of Bharatiya Kisan Union (Bhanu), that the organisation is ending the protest in the light of violence during farmers' tractor rally y'day.#FarmLaws pic.twitter.com/wgDIeKnUMf
— ANI UP/Uttarakhand (@ANINewsUP) January 27, 2021
Published On - 6:45 pm, Wed, 27 January 21