ಜೈಲಿನಿಂದ ಹೊರ ಬಂದ ಶಶಿಕಲಾ ಎದುರು ಹಲವು ದಾರಿಗಳು; ಜಯಲಲಿತಾ ಸಮಾಧಿಯೆದುರು ಮಾಡಿದ್ದ ಶಪಥದಂತೆ ನಡೆಯುತ್ತಾರಾ?

ಜಯಲಲಿತಾ ಅವರ ಆಪ್ತವಲಯದಲ್ಲೇ ಪ್ರಮುಖರಾಗಿ, ಸರ್ಕಾರ ತೆಗೆದುಕೊಳ್ಳುತ್ತಿದ್ದ ನಿರ್ಣಯಗಳಲ್ಲಿ ಪ್ರಭಾವ ಬೀರುವಷ್ಟು ಬೆಳೆದಿದ್ದ ಶಶಿಕಲಾ ಜೈಲಿನಿಂದ ಹೊರಬಂದ ನಂತರ ಏನು ಮಾಡಲಿದ್ದಾರೆ ಎನ್ನುವುದು ಕುತೂಹಲ ಹುಟ್ಟಿಸಿದೆ

ಜೈಲಿನಿಂದ ಹೊರ ಬಂದ ಶಶಿಕಲಾ ಎದುರು ಹಲವು ದಾರಿಗಳು; ಜಯಲಲಿತಾ ಸಮಾಧಿಯೆದುರು ಮಾಡಿದ್ದ ಶಪಥದಂತೆ ನಡೆಯುತ್ತಾರಾ?
ವಿ ಕೆ ಶಶಿಕಲಾ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 10, 2021 | 3:05 PM

ಕೊವಿಡ್-19 ಸೋಂಕಿಗೊಳಗಾಗಿರದಿದ್ದರೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ ವಿ ಶಶಿಕಲಾ ಬುಧವಾರದಂದು ಜೈಲಿನಿಂದ ಹೊರಬಂದು ಚೆನೈನೆಡೆ ಪ್ರಯಾಣ ಬೆಳೆಸಿರುತ್ತಿದ್ದರು. ಅವರನ್ನು ಬೆಂಗಳೂರಿನಲ್ಲಿರುವ ಕೊವಿಡ್ ಕೇರ್ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಇನ್ನೂ ಮುಗಿದಿಲ್ಲವಾದ್ದರಿಂದ ಬಿಡುಗಡೆ ಪ್ರಕ್ರಿಯೆ ಕೊಂಚ ವಿಳಂಬಗೊಳ್ಳಲಿದೆ. ಒಂದು ಕಾಲದಲ್ಲಿ ದಿವಂಗತ ಜೆ. ಜಯಲಲಿತಾ ಅವರ ಆಪ್ತವಲಯದಲ್ಲೇ ಪ್ರಮುಖರಾಗಿ, ತಮಿಳುನಾಡು ಸರ್ಕಾರದ ತೆಗೆದುಕೊಳ್ಳುತ್ತಿದ್ದ ನಿರ್ಣಯಗಳಲ್ಲಿ ಪ್ರಭಾವ ಬೀರುವಷ್ಟು ಬೆಳೆದಿದ್ದ ಶಶಿಕಲಾ ಜೈಲು ಸೇರುವಂತಾಗಿದ್ದು ನಿಜಕ್ಕೂ ಒಂದು ಅಚ್ಚರಿಯ ಸಂಗತಿಯೇ!

ಆಕೆ ಮತ್ತು ಜಯಲಲಿತಾ ನಡುವಿನ ಸಂಬಂಧ ಕುರಿತು ಹಲವಾರು ಕತೆಗಳಿವೆ. ಆದರೆ, ಜಯಾ ಅವರ ಸಾಕುಮಗಳು ಅಂತ ಹೇಳಿಕೊಂಡಿರುವ ಮಹಿಳೆಯೊಬ್ಬರು ಮದ್ರಾಸ್ ಹೈಕೋರ್ಟ್​ನಲ್ಲಿ ಪ್ರಕರಣವೊಂದನ್ನು ದಾಖಲಿಸಿರುವುದರಿಂದ ಆ ವಿಷಯವನ್ನು ಇಲ್ಲಿ ಚರ್ಚಿಸುವುದು ತಪ್ಪಾಗುತ್ತದೆ.

ಜಯಾ ಗತಿಸಿದ ನಂತರ ಮತ್ತು ಜೈಲು ಸೇರುವ ಮೊದಲು ಅಕ್ಷರಶ: ತಮಿಳುನಾಡಿನ ಸಾಮ್ರಾಜ್ಞಿಯಂತೆ ಮೆರೆಯುತ್ತಿದ್ದ ಶಶಿಕಲಾ ಚೆನೈಗೆ ವಾಪಸ್ಸಾದ ನಂತರ ಏನು ಮಾಡಲಿದ್ದಾರೆ ಎನ್ನುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಆಕೆಯ ಮುಂದಿರುವ ದಾರಿಗಳ್ಯಾವು? ಇಷ್ಟಕ್ಕೂ ಆಕೆ ಸಕ್ರಿಯ ರಾಜಕಾರಣಕ್ಕೆ ವಾಪಸ್ಸಾಗುತ್ತಾರಾ ಅಥವಾ ಅದರಿಂದ ದೂರವೇ ಉಳಿದು ಬಿಡುತ್ತಾರಾ?

ಹಾಗೆ ನೋಡಿದೆರೆ ಶಶಿಕಲಾ ಮುಂದೆ ನಾಲ್ಕು ದಾರಿ ಅಥವಾ ಆಯ್ಕೆಗಳಿವೆ. ಅವು ಯಾವವು ಅಂತ ನೋಡೋಣ.

ದಿವಂಗತ ಜಯಲಲಿತಾ ಮತ್ತು ಶಶಿಕಲಾ

ಎಐಎಡಿಎಮ್​ಕೆ ಪಕ್ಷಕ್ಕೆ ವಾಪಸ್ಸಾಗುವುದು

ಇದು ಶಶಿಕಲಾ ಮುಂದಿರುವ ಮೊದಲ ಆಯ್ಕೆ. ಎಡಪ್ಪಾಡಿ ಪಳನಿಸ್ವಾಮಿ ಆವರ ಸರ್ಕಾರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಯಲು ಬಿಟ್ಟು ತಾನು ಪಕ್ಷದ ಉಸ್ತುವಾರಿಯನ್ನು ವಹಿಸಿಕೊಂಡು ಮೊದಲಿನ ಹಾಗೆ ಕಿಂಗ್ ಮೇಕರ್ ಆಗುವುದು. ಆದರೆ, ಅವರನ್ನು ಈಗಾಗಲೇ ಎಐಎಡಿಎಮ್​ಕೆ ಪಕ್ಷದಿಂದ ಉಚ್ಚಾಟಿಸಲಾಗಿರುವುದರಿಂದ ಅದು ಅಷ್ಟು ಸುಲಭವಲ್ಲ. ಆಕೆಯ ನಿಷ್ಠರಾಗಿದ್ದ ಪನ್ನೀರ್ ಸೆಲ್ವಂ ಆಕೆಯನ್ನು ಪಕ್ಷಕ್ಕೆ ಸ್ವಾಗತಿಸಬಹುದು, ಆದರೆ ಪಳನಿಸ್ವಾಮಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಮ್​ಕೆ ಸೋತರೆ, ಆಕೆಯ ಕೈಕೆಳಗೆ ಕೆಲಸ ಮಾಡಬೇಕಾಗುತ್ತದೆ, ತಾನು ಆಕೆಯನ್ನು ಪಕ್ಷದಿಂದ ಉಚ್ಚಾಟಿಸಿದ ಕೋಪ ಇನ್ನೂ ಆರಿರದಿದ್ದರೆ ಸೇಡು ತೀರಿಸಿಕೊಳ್ಳುವ ಪ್ರಯತ್ನ ಮಾಡಬಹುದು ಎಂಬ ಭೀತಿ ಮತ್ತು ಆತಂಕ ಅವರನ್ನು ಕಾಡುತ್ತಿದೆ. ಹಾಗಾಗಿ, ಮೊದಲ ದಾರಿ ಆಯ್ದುಕೊಳ್ಳುವುದು ಆಕೆಗೆ ಕಷ್ಟವಾಗಬಹುದು.

ಎಎಮ್​ಎಮ್​ಕೆ ಪಕ್ಷವನ್ನು ಎಐಎಡಿಎಮ್​ಕೆಯೊಂದಿಗೆ ವಿಲೀನಗೊಳಿಸುವುದು

ಶಶಿಕಲಾ ಸಹೋದರನ ಮಗ, ಟಿಟಿವಿ ದಿನಕರನ್ ಅವರು ಹುಟ್ಟುಹಾಕಿರುವ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಮ್​ಎಮ್​ಕೆ) ಪಕ್ಷವನ್ನು ಎಐಎಡಿಎಮ್​ಕೆ ಪಕ್ಷದೊಂದಿಗೆ ವಿಲೀನಗೊಳಿಸಿ ಯಾವುದಾದರೂ ಉನ್ನತ ಸ್ಥಾನವನ್ನು ಆಕ್ರಮಿಸಿಕೊಳ್ಳುವುದು ಆಕೆಯೆದಿರಿರುವ ಎರಡನೇ ದಾರಿ. ಎಐಎಡಿಎಮ್​ಕೆ ಪಕ್ಷದ ಹಲವಾರು ನಾಯಕರು ಈ ಸಾಧ್ಯತೆಯನ್ನು ಬೆಂಬಲಿಸುತ್ತಿದ್ದಾರೆ. ಅದರೆ, ಪಳನಿ ಸ್ವಾಮಿಗೆ ಶಶಿಕಲಾ ಪಕ್ಷಕ್ಕೆ ವಾಪಸ್ಸಾಗುವುದು ಇಷ್ಟವಿಲ್ಲದಿರುವುದರಿಂದ, ಆಕೆಗೆ ನಿರಾಶೆ ಕಾದಿದೆ ಎಂದು ತಮಿಳುನಾಡಿನ ರಾಜಕೀಯ ಪರಿಣಿತರು ಹೇಳುತ್ತಿದ್ದಾರೆ.

ತೃತೀಯ ರಂಗ ರೂಪಿಸುವುದು

ದಿನಕರನ್ ಅವರ ಎಎಮ್​ಎಮ್​ಕೆ ಪಕ್ಷವನ್ನು ನಿರ್ಲಕ್ಷಿಸುವಂತಿಲ್ಲ ಅಂತ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸಾಬೀತಾಗಿದೆ. ಆ ಚುನಾವಣೆಯಲ್ಲಿ ಈ ಪಕ್ಷ ಶೇಕಡಾ 4ರಷ್ಟು ಮತ ಬಾಚಿಕೊಂಡಿತ್ತು. ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಎಐಎಡಿಎಮ್​ಕೆ ಪಕ್ಷಗಳಿಸಿದ ಮತಗಳ ಶೇಕಡಾ 15 ರಷ್ಟು ವೋಟುಗಳನ್ನು ಎಎಮ್​ಎಮ್​ಕೆ ಪಕ್ಷ ಆಗ ಗಳಿಸಿತ್ತು.

ಎಎಮ್​ಎಮ್​ಕೆ ಮತ್ತು ಎಐಎಡಿಎಮ್​ಕೆ-ಎರಡೂ ಪಕ್ಷಗಳೊಂದಿಗೆ ಸಂಪರ್ಕವಿಟ್ಟುಕೊಂಡಿರುವ ಕೆಲವರ ಪ್ರಕಾರ ಎಎಮ್​ಎಮ್​ಕೆ ತೃತೀಯ ರಂಗ ಸ್ಥಾಪಿಸುವ ಸಾಧ್ಯತೆ ಜಾಸ್ತಿಯಿದೆ. ಎಸ್. ರಾಮದಾಸ್ ಅವರ ಪಿಎಮ್​ಕೆ ಮತ್ತು ಕ್ಯಾಪ್ಟನ್ ವಿಜಯಕಾಂತ್ ಅವರ ಡಿಎಮ್​ಡಿಕೆ ತೃತೀಯ ರಂಗದ ಬಗ್ಗೆ ಒಲವು ತೋರಿದ್ದಾರೆ. ಹಾಗಾದಲ್ಲಿ ಎಐಎಡಿಎಮ್​ಕೆ ಪಕ್ಷದಲ್ಲಿ ಆಕೆ ವಂಚಕರೆಂದು ಪರಿಗಣಿಸುವ ಕೆಲವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿವುದು ಸುಲಭವಾಗುತ್ತದೆ. ಎಎಮ್​ಎಮ್​ಕೆ ನೇತೃತ್ವದ ತೃತೀಯ ರಂಗ ಅಸ್ತಿತ್ವಕ್ಕೆ ಬಂದರೆ ಅದು ಸರ್ಕಾರದ ಪರವಿರುವ ವೋಟುಗಳನ್ನು ವಿಭಜಿಸಿ ಎಐಎಡಿಎಮ್​ಕೆ ಪಕ್ಷಕ್ಕೆ ಭಾರಿ ಹಾನಿ ಉಂಟುಮಾಡಲಿದೆ. ಸ್ಟಾಲಿನ್ ಅವರ ಡಿಎಮ್​ಕೆ ಪಕ್ಷದಲ್ಲಿ ಟಿಕೆಟ್ ಹಂಚುವಾಗ ಭಿನ್ನಮತ ಎದುರಾದರೆ, ಅಂಥವರಿಗೆ ತೃತೀಯ ರಂಗ ಮಣೆ ಹಾಕಲಿದೆ.

ಜೈಲಿನಲ್ಲಿ ಶಶಿಕಲಾ

ಒಂದು ವೇಳೆ ಈ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಮ್​ಕೆ ಪಕ್ಷ ಸೋತು ತೃತೀಯ ರಂಗ ಅಧಿಕಾರಕ್ಕೇನಾದರೂ ಬಂದರೆ, ಶಶಿಕಲಾರನ್ನು ಯಾರೂ ತಡೆಯದಂಥ ಸ್ಥಿತಿ ನಿರ್ಮಾಣವಾಗುವುದು ನಿಶ್ಚಿತ. ಆಕೆ ಕಿಂಗ್ ಮೇಕರ್ ಆಗಬಹುದು ಅಥವಾ ಮುಖ್ಯಮತ್ರಿಯಾದರೂ ಸೋಜಿಗವಿಲ್ಲ.

ರಜನೀಕಾಂತ್ ರೀತಿ ರಾಜಕೀಯಕ್ಕೆ ವಿದಾಯ ಹೇಳುವುದು!

ಚೆನೈಗೆ ವಾಪಸ್ಸಾದ ಮೇಲೆ ಶಶಿಕಲಾ ಮೆಗಾಸ್ಟಾರ್ ರಜನಿಕಾಂತ್ ಅವರಂತೆ ರಾಜಕೀಯದ ಸಹವಾಸವೇ ಬೇಡ ಅಂತ ದೂರವುಳಿಯಲಿದ್ದಾರೆ ಎಂದು ಹೇಳುವ ಗುಂಪೊಂದಿದೆ. ಹಾಗೆ ನೋಡಿದರೆ, ಶಶಿಕಲಾಗೆ ಆರೋಗ್ಯ ಸಮಸ್ಯೆಗಳು ರಜನಿಗಿಂತ ಹೆಚ್ಚು.

ಆದರೆ ಶಶಿಕಲಾರೊಂದಿಗೆ ಕೆಲಸ ಮಾಡಿರುವ ಮತ್ತು ಹತ್ತಿರದಿಂದ ಬಲ್ಲ ಜನ ಆಕೆ ಮಹಾ ಗಟ್ಟಿಗಿತ್ತಿ, ಸುಲಭವಾಗಿ ಸೋಲೊಪ್ಪಿಕೊಳ್ಳಲಾರಳು ಅಂತ ಹೇಳುತ್ತಾರೆ. ಸೆರೆವಾಸಕ್ಕೆ ತೆರಳುವ ಮೊದಲು ಆಕೆ ಜಯಲಲಿತಾ ಸಮಾಧಿ ಮುಂದೆ ಭೂಮಿಯನ್ನು ಮೂರು ಬಾರಿ ಗಟ್ಟಿಯಾಗಿ ಬಾರಿಸಿ ತನ್ನ ವೈರಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದ್ದನ್ನು ಬಹಳಷ್ಟು ಜನ ನೋಡಿದ್ದಾರೆ. ಹಾಗಾಗಿ, ಆಕೆ ರಾಜಕೀಯದಿಂದ ದೂರವುಳಿಯುವುದು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

ಚೆನ್ನೈಗೆ ಮರಳಿದ ಬಳಿಕ ಎಲ್ಲಿಗೆ ಹೋಗ್ತಾರೆ ಶಶಿಕಲಾ? ಜಯಲಲಿತಾ ನಿವಾಸಕ್ಕಂತೂ ಕಾಲಿಡುವಂತಿಲ್ಲ!

Published On - 8:36 pm, Wed, 27 January 21

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ