ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ

|

Updated on: Jul 15, 2024 | 1:14 PM

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಆದಾಯ ಮೀರಿ ಆಸ್ತಿ ಗಳಿಸಿದ್ದ ಆರೋಪಕ್ಕೆ ಸಂಬಂಧಿಸಿ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ಗೆ ಸುಪ್ರೀಂ ಕೋರ್ಟ್​ನಲ್ಲಿ ತೀವ್ರ ಹಿನ್ನಡೆಯಾಗಿದೆ. ಪ್ರಕರಣವನ್ನು ರದ್ದುಗೊಳಿಸುವಂತೆ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ತಿರಸ್ಕೃತಗೊಂಡಿದೆ.

ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ
ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ರದ್ದತಿಗೆ ಸುಪ್ರೀಂ ಕೋರ್ಟ್ ನಕಾರ
Follow us on

ನವದೆಹಲಿ, ಜುಲೈ 15: ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣವನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ಸಿಬಿಐ ದಾಖಲಿಸಿದ್ದ ಪ್ರಕರಣ ರದ್ದು ಕೋರಿ‌ ಡಿಕೆ ಶಿವಕುಮಾರ್ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಮನವಿಯನ್ನು ಸುಪ್ರೀಂಕೋರ್ಟ್​​ನ ನ್ಯಾ. ಬೇಲಾ ತ್ರಿವೇದಿ ಪೀಠ ತಿರಸ್ಕರಿಸಿದೆ. ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣ ರದ್ದುಗೊಳಿಸುವ ಸಂಬಂಧ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು 2023 ರ ಅಕ್ಟೋಬರ್ 19 ರಂದು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿತ್ತು. ಈ ಆದೇಶದ ವಿರುದ್ಧ ಶಿವಕುಮಾರ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಮೂರು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸಲು ನಿರ್ದೇಶನ

ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬೇಲಾ ತ್ರಿವೇದಿ ಪೀಠ, ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದ್ದು ಮಾತ್ರವಲ್ಲದೆ ಮೂರು ತಿಂಗಳೊಳಗೆ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿದೆ.

ಏನಿದು ಪ್ರಕರಣ?

ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾಗ, 2013 ರ ಏಪ್ರಿಲ್ 1 ರಿಂದ 2018 ರ ಏಪ್ರಿಲ್ 30 ಅವಧಿಯಲ್ಲಿ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ. 74.93 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಗಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.

2017 ರಲ್ಲಿ ಶಿವಕುಮಾರ್ ಮನೆ ಮತ್ತು ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧ ಕಾರ್ಯಾಚರಣೆಗಳ ಆಧಾರದ ಮೇಲೆ, ಜಾರಿ ನಿರ್ದೇಶನಾಲಯ ಕೂಡ ವಿರುದ್ಧ ಡಿಕೆ ಶಿವಕುಮಾರ್ ವಿರುದ್ಧ ತನಿಖೆಯನ್ನು ಪ್ರಾರಂಭಿಸಿತ್ತು. ಇ.ಡಿ ತನಿಖೆಯ ಆಧಾರದ ಮೇಲೆ ಸಿಬಿಐ ಅವರ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರದಿಂದ ಅನುಮತಿ ಕೋರಿತ್ತು. ರಾಜ್ಯ ಸರ್ಕಾರವು 2019 ರ ಸೆಪ್ಟೆಂಬರ್ 25 ರಂದು ಅನುಮತಿ ನೀಡಿತ್ತು. ಅದರಂತೆ, ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ 2020 ರ ಅಕ್ಟೋಬರ್ 3 ರಂದು ಎಫ್ಐಆರ್ ದಾಖಲಿಸಿತ್ತು.

ಇದನ್ನೂ ಓದಿ: ಬೆಂಗಳೂರು: ವೈಟ್ ಟಾಪಿಂಗ್ ಕಾಮಗಾರಿ ಚಾಲನೆ ವೇಳೆ ಡಿಕೆ ಶಿವಕುಮಾರ್​​ ಶೂ ಕಳವು!

ಡಿಕೆ ಶಿವಕುಮಾರ್ ಪರ ವಕೀಲರ ವಾದವೇನು?

ಡಿಕೆ ಶಿವಕುಮಾರ್ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಕಾಯ್ದೆಯಡಿ ಈಗಾಗಲೇ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸಿಬಿಐ ಕೂಡ ಅದರ ವಿಚಾರಣೆ ನಡೆಸುವುದು ಹೇಗೆ? ಇದು ಅಕ್ರಮ ಎಂದು ಅವರು ವಾದ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಪೀಠ, ನಿಮ್ಮ ಮೇಲೆ ಪಿಸಿ ಆ್ಯಕ್ಟ್ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪಿಸಿ ಆ್ಯಕ್ಟ್ ಅಡಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇದರಲ್ಲಿ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ, ಕ್ಷಮಿಸಿ ಎಂದಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Mon, 15 July 24