ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಕ್ಷಣ ತಮ್ಮನ್ನು ಸ್ಪೀಕರ್ ಅನರ್ಹಗೊಳಿಸಿಬಿಟ್ಟಿದ್ದಾರೆ. ಅದನ್ನು ಅನೂರ್ಜಿತಗೊಳಿಸಬೇಕು ಮತ್ತು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ತಮಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸುಪ್ರೀಂಕೋರ್ಟ್ ಮೊರೆಹೋಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಇಂದು ಕೋರ್ಟ್ ತೀರ್ಪು ಸಮಾಧಾನ ತಂದಿದೆ.
ಈ ಕುರಿತು ಅನರ್ಹತೆಗೊಳಗಾಗಿದ್ದ ಶಾಸಕರು ಮನಸೋಇಚ್ಛೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದ್ರೆ ಎಲ್ಲರೂ ಡಿಸೆಂಬರ್ 5ಕ್ಕೆ ನಿಗದಿಯಾಗಿರುವ ಉಪ ಚುನಾವಣೆ ಮೇಲೆಯೇ ಕಣ್ಣಿಟ್ಟಿದ್ದಾರೆ. ಮತದಾರರನ್ನು ಹೇಗೆ ತಮ್ಮತ್ತ ಸೆಳೆಯಬೇಕು ಎಂಬುದೇ ಎಲ್ಲರ ಗುರಿಯಾಗಿದೆ.
ಅತ್ತ ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ಇತ್ತ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದಲ್ಲಿ ದಿಢೀರನೆ ಭಿತ್ತಿ ಪತ್ರಗಳು, ಬ್ಯಾನರ್ಗಳು ರಾರಾಜಿಸಲಾರಂಭಿಸಿವೆ. ಅದರಲ್ಲೊಂದು ಮತದಾರರ ಗಮನಸೆಳೆಯುತ್ತಿದೆ.
ದೇವರ ಅನುಗ್ರಹದಿಂದ ಟಾಸ್ ಗೆದ್ದಿದ್ದೇವೆ. ಕ್ಷೇತ್ರದ ಮತದಾರರು ಒಗ್ಗಟ್ಟಿನಿಂದ ಕೈ ಹಿಡಿದು ಮ್ಯಾಚ್ ಗೆಲ್ಲಿಸಿಕೊಡಿ ಎಂದು ಕ್ಷೇತ್ರದ ಮತದಾರರಲ್ಲಿ ಅನರ್ಹ ಶಾಸಕರ ಮನವಿ ಮಾಡಿಕೊಂಡಿದ್ದಾರೆ.