ವಸತಿ ಯೋಜನೆಯಡಿ ಅಕ್ರಮಗಳ ಕರಾಮತ್ತು; ಗ್ರಾಮ ಪಂಚಾಯತಿ ಪಿಡಿಓಗಳ ಅಮಾನತ್ತು

| Updated By: ಸಾಧು ಶ್ರೀನಾಥ್​

Updated on: Feb 02, 2021 | 1:30 PM

ವಸತಿ ಯೋಜನೆ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಹಾಕಿದ ಅಂಶಗಳು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. 2020 ಜನವರಿ 10 ರಂದು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೆಷನ್ ಅಧಿಕಾರಿಗಳು ಭಾಲ್ಕಿ ತಾಲೂಕಿನ ಸುಮಾರು 14000ಕ್ಕೂ ಹೆಚ್ಚು ಮನೆಗಳನ್ನ ತನಿಖೆ ಮಾಡಿದ್ದಾರೆ.

ವಸತಿ ಯೋಜನೆಯಡಿ ಅಕ್ರಮಗಳ ಕರಾಮತ್ತು; ಗ್ರಾಮ ಪಂಚಾಯತಿ ಪಿಡಿಓಗಳ ಅಮಾನತ್ತು
ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗ್ಯಾನೇಂದ್ರ ಕುಮಾರ್ ಗಂಗ್ವಾರ್
Follow us on

ಬೀದರ್: ಉಪ್ಪು ತಿಂದ‌ ಮೇಲೆ ‌ನೀರು ಕುಡಿಯಲೇ ಬೇಕು. ತಪ್ಪು‌ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎನ್ನುವ ಮಾತಿನಂತೆ ಆಗಿದ್ದು, ಒಂದು‌ ವರ್ಷದಿಂದ ವಿವಿಧ ವಸತಿ ಯೋಜನೆಯಡಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಒಂದು ಹಂತದ ತನಿಖೆಯಲ್ಲಿ ಬರೋಬ್ಬರಿ 7 ಜನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಮಾನತ್ತಾಗಿದ್ದಾರೆ. ಇನ್ನೂ ಕೆಲವರ ಮೇಲೆ ಇಲಾಖಾ ತನಿಖೆ ಚುರುಕುಗೊಂಡಿದ್ದು ಅವರು ಕೂಡ ಅಮಾನತ್ತಾಗುವ ಸಾಧ್ಯತೆಯಿದೆ.

ಸದ್ಯ ಬೀದರ್ ಜಿಲ್ಲೆಯಲ್ಲಿ 7 ಜನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನ (ಪಿಡಿಓ) ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ವಿವಿಧ ವಸತಿ ಯೋಜನೆಯಡಿ ಅನರ್ಹ ಫಲಾನುಭವಿಗಳನ್ನ ಆಯ್ಕೆ ಮಾಡುವುದರ ಮೂಲಕ ಕರ್ತವ್ಯ ಲೋಪ ಎಸಗಿರುವ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ಪಿಡಿಓಗಳನ್ನ ಅಮಾನತ್ತು ಮಾಡಿ ಆದೇಶಿಸಿದ್ದಾರೆ.

2015-16 ರಿಂದ 2018-19ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ ನಿಯಮ ಉಲ್ಲಂಘನೆ, ಒಂದೇ ಮನೆಗೆ ಇಬ್ಬಿಬ್ಬರು ಫಲಾನುಭವಿಗಳನ್ನ ಆಯ್ಕೆ ಮಾಡುವುದರ ಮೂಲಕ ಸರಕಾರಕ್ಕೆ ಲಕ್ಷಾಂತರ ರೂಪಾಯಿ ಗೋಲ್ ಮಾಲ್ ಮಾಡಿರುವ ಪರಿಣಾಮ ಜನವರಿ 15 ರಂದು 7 ಜನ ಪಿಡಿಓಗಳನ್ನು ಅಮಾನತ್ತು ಮಾಡಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಕ್ರಮ ಮನೆ ಹಂಚಿಕೆ ಯೋಜನೆ ಅಡಿ ಪಿಡಿಒ ಅಮಾನತ್ತು

ಅಮಾನತ್ತಾದ ಪಿಡಿಓಗಳ ವಿವರ:
ಭಾಲ್ಕಿ ತಾಲೂಕಿನ ಬಾಳೂರು ಪಂಚಾಯತಿಯ ಸಂಗಮೇಶ್ ಸಾವಳೆ, ಬಿರಿ(ಬಿ) ಪಂಚಾಯತಿಯ ಮಲ್ಲೆಶ್ ಮಾರುತಿ, ಜಾಂತಿ ಪಂಚಾಯತಿಯ ರೇವಣ್ಣಪ್ಪ, ಮೊರಬಿ ಪಂಚಾಯತಿಯ ರೇಖಾ, ತಳವಾಡ (ಕೆ) ಪಂಚಾಯಾತಿಯ ಚಂದ್ರೇಶೇಕರ್ ಗಂಗಶೆಟ್ಟಿ, ವರವಟ್ಟಿ ಪಂಚಾಯತಿಯ ಸಂತೋಷ್ ಸ್ವಾಮಿ, ಎಣಕೂರು ಪಂಚಾಯತಿಯ ಪ್ರವೀಣಕುಮಾರ್ ಸದ್ಯ ಎಲ್ಲಾ ಪಿಡಿಓಗಳು ಬೆರೆ ಬೆರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲರನ್ನು ಅಮಾನತು ಗೊಳಿಸಿ ಮುಂದಿನ ತನಿಖೆಯನ್ನ ಕೈಗೊಳ್ಳಲಾಗಿದೆ.

ಹೌದು ಬೀದರ್ ಜಿಲ್ಲೆ ಭಾಲ್ಕಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷದಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಮನೆ ಹಂಚಿಕೆಯಲ್ಲಿ ಬಾರೀ ಹೇರಾಫೇರಿ ನಡೆಸಿದ್ದು, ಮನೆ ಹಂಚಿಕೆ ಕುರಿತ ದೂರಿನ ಅನ್ವಯ ಸರ್ಕಾರದ ಹಿರಿಯ ಅಧಿಕಾರಿಗಳ ನಡೆಸಿದ ತನಿಖೆಯಿಂದ ಮನೆ ಹಂಚಿಕೆಯಲ್ಲಿ ನಡೆದಿರುವ ಗೋಲ್ ಮಾಲ್ ಪತ್ತೆಯಾಗಿದೆ.

ಸರ್ಕಾರದ ನೀತಿ ನೀಯಮಗಳನ್ನ ಇಲ್ಲಿ ಗಾಳಿಗೆ ತೂರಿ ವಸತಿ ಹಂಚಿಕೆ ಮಾರ್ಗಸೂಚಿಗಳನ್ನ ಮಣ್ಣುಪಾಲು ಮಾಡಿರುವುದು ತನಿಖೆ ವೇಳೆ ಸ್ಪಷ್ಟವಾಗಿದೆ. ಅನರ್ಹರ ಆಯ್ಕೆ, ಒಂದೇ ಮನೆಗೆ ಇಬ್ಬಿಬ್ಬರಿಂದ ಜಿಪಿಎಸ್ ಮಾಡಿಸಿ ಬಿಲ್ ಎತ್ತಲಾಗಿದೆ. ಜೊತೆಗೆ ಪರಿಶಿಷ್ಟರಿಗೆ ಮೀಸಲಾದ ಮನೆಗಳನ್ನ ಸಾಮಾನ್ಯ ವರ್ಗದವರಿಗೆ ಹಂಚಿಕೆ ಮಾಡಲಾಗಿದೆ. ಇನ್ನೂ ಸರ್ಕಾರದ ನಿಯಮದ ಪ್ರಕಾರ ಇಂತಿಷ್ಟು ಚದರ ಅಡಿ ಜಾಗದಲ್ಲಿ ಮೆನೆಗಳನ್ನ ನಿರ್ಮಾಣ ಮಾಡಬೇಕು ಎನ್ನುವ ನೀಯಮವಿದೆ ಆದರೇ ಇಲ್ಲಿ ಅದನ್ನ ಪಾಲಿಸಿಲ್ಲ.

ವಸತಿ ಯೋಜನೆ ಮೂಲ ಉದ್ದೇಶಕ್ಕೆ ಕೊಡಲಿ ಪೆಟ್ಟು ಹಾಕಿದ ಅಂಶಗಳು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. 2020 ಜನವರಿ 10ರಂದು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೆಷನ್ ಅಧಿಕಾರಿಗಳು ಭಾಲ್ಕಿ ತಾಲೂಕಿನ ಸುಮಾರು 14000ಕ್ಕೂ ಹೆಚ್ಚು ಮನೆಗಳನ್ನ ತನಿಖೆ ಮಾಡಿದ್ದಾರೆ. ಇದರಲ್ಲಿ ಸುಮಾರು 6000ಕ್ಕೂ ಹೆಚ್ಚು ಮನೆಗಳು ನಿಯಮ ಪಾಲಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಸಿಇಓ ಗ್ಯಾನೇಂದ್ರಕುಮಾರ ಗಂಗ್ವಾರ್ ಹೇಳಿದ್ದಾರೆ.

ಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕ್ಷೇತ್ರದಲ್ಲಿ ವಿವಿಧ ವಸತಿ ಯೋಜನೆಗಳ ಮನೆ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಅಕ್ರಮ ಎಸಗಿದ್ದಾರೆ ಎಂದು ಬೀದರ್ ಸಂಸದ ಭಗವಂತ್ ಖೊಬಾ ಈಶ್ವರ್ ಖಂಡ್ರೆ ವಿರುದ್ಧ ಆರೋಪ ಮಾಡುತ್ತಲ್ಲೇ ಬಂದಿದ್ದರು. ಈ ಕುರಿತು ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ರಾಜೀವ್ ಗಾಂಧಿ ಹೌಸಿಂಗ್​ ಕಾರ್ಪೋರೆಷನ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸತತ ತನಿಖೆ ನಡೆಸಿದ್ದು, ಭಾಲ್ಕಿ ಪಟ್ಟಣದಲ್ಲಿ 1ಮನೆ ತೋರಿಸಿ 2 ಮನೆಗಳ ಬಿಲ್‌ಗಳನ್ನು ಪಡೆದುಕೊಂಡಿರುವುದು ಜೊತೆಗೆ ಅಹನರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿರುವುದು ಸಾಬೀತಾಗಿದೆ.

ಗ್ರಾಮಸಭೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಸಹ ಸರಿಯಾಗಿ ಪರಿಶೀಲನೆ ಮಾಡದೆ ಮನೆ ಸುಳ್ಳು ಪಟ್ಟಿ ನೀಡಿದ್ದಾರೆ. ಇದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಸಹ ಹೊಣೆಯಾಗಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೆಷನ್ ಅಧಿಕಾರಿಗಳು ತನಿಖೆ ನಡೆಸಿದ್ದರು.

ತನಿಖೆಯಲ್ಲಿ ಮೇಲ್ನೋಟಕ್ಕೆ ಪಿಡಿಓ ಅಧಿಕಾರಿಗಳು ವಾಮ ಮಾರ್ಗದ ಮೂಲಕ ಉಳ್ಳವರಿಗೆ ಮನೆ ಹಂಚಿಕೆ ನೀಡಿದ್ದಾರೆ ಎನ್ನುವುದು ಸಾಬೀತಾಗಿದೆ. ಹೀಗಾಗಿ 7 ಜನ ಪಿಡಿಓಗಳನ್ನ ಅಮಾನತ್ತು ಮಾಡಲಾಗಿದೆ ಎಂದು ಬೀದರ್ ಸಿಇಓ ಗ್ಯಾನೇಂದ್ರಕುಮಾರ ಗಂಗ್ವಾರ್ ಹೇಳಿದ್ದಾರೆ. ಒಟ್ಟಿನಲ್ಲಿ ಬಡವರಿಗೆ ಸೇರಬೇಕಾದ ಮನೆಗಳು ಅಧಿಕಾರಿಗಳು ಹಣದ ದಾಹಕ್ಕೆ ಉಳ್ಳವರಿಗೆ ಮನೆ ಹಂಚಿಕೆ ಮಾಡಿದ್ದು ಒಂದು ವಿಪರ್ಯಾಸವೆ ಸರಿ.

THO ಸಾವು: ಮೈಸೂರು ಜಿ.ಪಂ. CEO ವಿರುದ್ಧ FIRಗೆ ಐಎಎಸ್ ಆಫೀಸರ್ಸ್‌ ಗರಂ

Published On - 1:29 pm, Tue, 2 February 21