ತುಮಕೂರು: ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C.Nagesh) ಅವರ ಮನೆಗೆ ಮುತ್ತಿಗೆ ಹಾಕಿ ಬಂಧಿತರಾಗಿರುವವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು ಭೇಟಿಯಾಗಿ ಹಣ್ಣುಗಳನ್ನು ನೀಡಿದರು. ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎನ್ಎಸ್ಯುಐ (NSUI) ಕಾರ್ಯಕರ್ತರನ್ನು ಪೊಲೀಸರ ಬಂಧಿಸಿ ತುಮಕೂರು ಹೊರವಲಯದ ಊರುಕೆರೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕಳುಹಿಸಿದ್ದಾರೆ. ಅದರಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್, ಶಾಸಕ ಡಾ ರಂಗನಾಥ್ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ವಿಚಾರಿಸಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರು ಕಾರ್ಯಕರ್ತರಿಗೆ ಬಾಳೆಹಣ್ಣು ಸೇರಿದಂತೆ ಇತರೆ ಹಣ್ಣುಗಳನ್ನು ವಿತರಿಸಿದರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿವಾದ: ತಪ್ಪು ಮಾಹಿತಿಗಳನ್ನು ಪಟ್ಟಿ ಮಾಡಿದ ಬರಗೂರು ರಾಮಚಂದ್ರಪ್ಪ
ರಾಜ್ಯದಲ್ಲಿ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಸಮಿತಿಯಲ್ಲಿ ನಡೆದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಎದಿದ್ದು, ಇದಕ್ಕೆ ರಾಜಕೀಯ ಬೆರೆತು ವಿವಾದ ತಾರಕಕ್ಕೇರಿದೆ. ಈ ನಡುವೆ ಪಠ್ಯ ಪರಿಷ್ಕರಣೆ ವಿವಾದ ಸಂಬಂಧ ಜೂನ್ 01ರಂದು NSUI ಸಂಘಟನೆ ಕಾರ್ಯಕರ್ತರು ಶಿಕ್ಷಣ ಸಚಿವರ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಅವರ ಮನೆ ಮುಂದೆ ಆರ್ಎಸ್ಎಸ್ನ ಖಾಕಿ ಚಡ್ಡಿಯನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಕೆಲವು ಕಾರ್ಯಕರ್ತರನ್ನ ತಿಪಟೂರು ಪೊಲೀಸರು ಬಂಧಿಸಿದ್ದರು. ಅಲ್ಲದೆ ಸಚಿವರ ನಿವಾಸಕ್ಕೆ ಭೇಟಿ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ ಪರಿಶೀಲನೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಲಾಗುತ್ತಿದೆ: ರೋಹಿತ್ ಚಕ್ರತೀರ್ಥ
ಬೇಲ್ ಸಿಗಲೇಬಾರದು ಎಂದು ಸೆಕ್ಷನ್ಗಳನ್ನ ಹಾಕಿದ್ದಾರೆ
ಸಚಿವ ಬಿ.ಸಿ. ನಾಗೇಶ್ ಮನೆಗೆ ಎನ್ಎಸ್ಯುಐ ಕಾರ್ಯಕರ್ತರ ಮುತ್ತಿಗೆ ಯತ್ನದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಕರ್ನಾಟಕ ರಾಜ್ಯ ಇತಿಹಾಸವನ್ನು ತಿರುಚಲು ನಾಗೇಶ್ ನೇತೃತ್ವದ ಇಲಾಖೆ ಹೊರಟಿದೆ. ಕುವೆಂಪು, ಬಸವಣ್ಣರಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ. ಯುವಕರು, ವಿದ್ಯಾರ್ಥಿಗಳು, ಶ್ರೀಗಳು ಧರಣಿ ಮಾಡುತ್ತಿದ್ದಾರೆ. ಧಿಕ್ಕಾರ ಕೂಗಿದ್ದಾರೆ. ಅವರೇನು ಯಾರ ಮನೆಗೂ ಹೋಗಿಲ್ಲ. ನಾಗೇಶ್ ಹಾಕಿದ್ದ ಚಡ್ಡಿಯನ್ನೇನು ಅವರು ಸುಟ್ಟು ಹಾಕಿಲ್ಲ. ಬೇಲ್ ಸಿಗಲೇಬಾರದು ಎಂದು ಸೆಕ್ಷನ್ಗಳನ್ನ ಹಾಕಿದ್ದಾರೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಸಾಂವಿಧಾನಿಕ ಹಕ್ಕಿದೆ. ಮೊನ್ನೆ ರೈತ ನಾಯಕ ಟಿಕಾಯತ್ ಅವರ ಮೇಲೆ ಬೆಂಗಳೂರಿನಲ್ಲಿ ಕೆಲವರು ಮೋದಿ ಅವರಿಗೆ ಜೈಕಾರ ಕೂಗುತ್ತಾ ಹಲ್ಲೆ ಮಾಡಿದ್ದಾರೆ. ಸರ್ಕಾರ ಇವರ ವಿರುದ್ಧ ಯಾವ ಸೆಕ್ಷನ್ ಹಾಕಿದೆ? ನಮ್ಮ ವಿದ್ಯಾರ್ಥಿ ನಾಯಕರಿಗೆ ಜಾಮೀನು ಸಿಗಬಾರದು ಎಂದು 143, 147, 448, 443, 332 ಸೇರಿದಂತೆ ಹಲವು ಗಂಭೀರ ಸೆಕ್ಷನ್ ಹಾಕಿ ಪ್ರಕರಣ ದಾಖಲಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಇಂತಹ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.
ಈ ಜಿಲ್ಲೆಯಲ್ಲಿ ಇಬ್ಬರು ದಲಿತರು ಸತ್ತಾಗ ಸಚಿವರು, ಶಾಸಕರು ಎಲ್ಲಿಗೆ ಹೋಗಿದ್ದರು? ಯಾರಾದ್ರೂ ದಲಿತರಿಗೆ ರಕ್ಷಣೆ ಕೊಡುವುದಕ್ಕೆ ಹೋಗಿದ್ದಾರಾ? ಈಗ ಮನೆಮನೆಗೆ ಹೋಗಿ ಸಿಕ್ಕಸಿಕ್ಕವರನ್ನ ತಂದು ಜೈಲಿಗೆ ಹಾಕಿದ್ದಾರೆ. ಬೇಲ್ ರಿಜೆಕ್ಟ್ ಆಗಿದೆ, ಮೇಲಿನ ಕೋರ್ಟ್ಗೆ ಹೋಗುತ್ತಾರೆ. ಇದು ಅವರಿಗೇನು ಅವಮಾನ ಅಲ್ಲಾ ಎಂದರು.
ಒಂದು ದಿನ ಅಧಿಕಾರಿಗಳು ಅನುಭವಿಸುತ್ತಾರೆ
ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಸಚಿವರು ಶವಯಾತ್ರೆ ಮಾಡಿದ್ದರು, ಬಿಜೆಪಿ ನಾಯಕರು ಜನರನ್ನು ಸೇರಿಸಿ ಜಾತ್ರೆ, ಹುಟ್ಟುಹಬ್ಬ ಆಚರಿಸಿದ್ದರು. ಆದರೆ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ನಾವು ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ. ರಾಜಕಾರಣಿಗಳ ಮಾತು ಕೇಳಿ ಅನಗತ್ಯವಾಗಿ ಸೆಕ್ಷನ್ ಹಾಕುತ್ತಿರುವ ಅಧಿಕಾರಿಗಳು ಒಂದು ದಿನ ಇದಕ್ಕೆಲ್ಲಾ ಉತ್ತರ ನೀಡಿ, ಇದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದರು.
ವಿಡಿಯೋ ವೀಕ್ಷಿಸಿ:
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:56 pm, Sat, 4 June 22