ಸಾಮಾಜಿಕ ನ್ಯಾಯ! ಸಿದ್ದರಾಮಯ್ಯ ಸಂಪುಟ ಸಚಿವರ ಸರಾಸರಿ ಆದಾಯ 119 ಕೋಟಿ ರೂ, 24 ಮಂದಿಗೆ ಕ್ರಿಮಿನಲ್ ಹಿನ್ನೆಲೆ

|

Updated on: May 29, 2023 | 3:37 PM

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ 34 ಮಂದಿಯ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದ್ದು, ತಡರಾತ್ರಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಸಂಪುಟದಲ್ಲಿರುವ ಸಚಿವರ ಆಸ್ತಿ, ವಯಸ್ಸು, ಅಪರಾಧ ಮತ್ತು ಶೈಕ್ಷಣಿಕ ವಿವರ ಬಹಿರಂಗಗೊಂಡಿದೆ.

ಸಾಮಾಜಿಕ ನ್ಯಾಯ! ಸಿದ್ದರಾಮಯ್ಯ ಸಂಪುಟ ಸಚಿವರ ಸರಾಸರಿ ಆದಾಯ 119 ಕೋಟಿ ರೂ, 24 ಮಂದಿಗೆ ಕ್ರಿಮಿನಲ್ ಹಿನ್ನೆಲೆ
ಡಿಸಿಎಂ ಡಿಕೆ ಶಿವಕುಮಾರ್​
Follow us on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ನೇತೃತ್ವದ 34 ಮಂದಿಯ ಸಂಪೂರ್ಣ ಸಚಿವ ಸಂಪುಟ ರಚನೆಯಾಗಿದ್ದು, ತಡರಾತ್ರಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಸಂಪುಟದಲ್ಲಿರುವ ಸಚಿವರ ಆಸ್ತಿ (Property), ವಯಸ್ಸು (Age), ಅಪರಾಧ (criminal) ಮತ್ತು ಶೈಕ್ಷಣಿಕ ವಿವರ ಬಹಿರಂಗಗೊಂಡಿದೆ. ವರದಿಯ ಪ್ರಕಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಎಲ್ಲಾ ಸಚಿವರ ಪೈಕಿ ಅತ್ಯಂತ ಶ್ರೀಮಂತರಾಗಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಿಕೆ ಶಿವಕುಮಾರ್ ಅವರು ಬರೊಬ್ಬರಿ 1,413.80 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮುಧೋಳ ಮೀಸಲು ಕ್ಷೇತ್ರದ ತಿಮ್ಮಾಪುರ ರಾಮಪ್ಪ ಬಾಳಪ್ಪ ಅವರು 58.56 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ ಬಡ ಸಚಿವ ಎನ್ನಲಾಗುತ್ತಿದೆ.

ಸಂಪುಟದ 34 ಸಚಿವರ ಪೈಕಿ 32 ಮಂದಿ ಸಚಿವರು ನಾಮಪತ್ರ ಸಲ್ಲಿಕೆ ವೇಳೆ ಸ್ವಯಂ ಪ್ರೇರಿತವಾಗಿ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಸಚಿವ ಕೆ.ಜೆ ಜಾರ್ಜ್​​ ಮತ್ತು ಎನ್​ಎಸ್​ ಬೋಸರಾಜು ಅವರ ಆಸ್ತಿ ವಿವರ ಚುನಾವಣಾ ಆಯೋಗದ ವೆಬ್​ಸೈಟ್​​ನಲ್ಲಿ ದೊರೆತಿಲ್ಲ. ಇನ್ನು ಎನ್​ಎಸ್​ ಬೋಸರಾಜು ಅವರು ರಾಜ್ಯ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಎರಡೂ ಸದನಗಳ ಸದಸ್ಯರಲ್ಲವಾದರೂ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದು ವಿಶೇಷವಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ?

ಕರ್ನಾಟಕ ಸಂಪುಟದಲ್ಲಿ ಒಟ್ಟು 31 (ಶೇ. 97ರಷ್ಟು) ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ 119.06 ಕೋಟಿ ರೂ. ಆಗಿದೆ. 32 ಸಚಿವರ ಪೈಕಿ ಡಿಕೆ ಶಿವಕುಮಾರ್ ಅಗ್ರಸ್ಥಾನದಲ್ಲಿದ್ದಾರೆ.

ಸಂಪುಟದ 24 ಕ್ಯಾಬಿನೆಟ್ ಸಚಿವರು ಕ್ರಿಮಿನಲ್ ಹಿನ್ನಲೆ ಹೊಂದಿದ್ದು, ಅವರಲ್ಲಿ 7 ಸಚಿವರು ತಮ್ಮ ವಿರುದ್ಧ ಗಂಭೀರ ಆರೋಪಗಳಿವೆ ಎಂದು ಘೋಷಿಸಿಕೊಂಡಿದ್ದಾರೆ. ಇನ್ನು 34 ಸಚಿವ ಸಂಪುಟದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ 48 ವರ್ಷದ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಏಕೈಕ ಮಹಿಳಾ ಸಚಿವೆಯಾಗಿದ್ದಾರೆ.

ಸಂಪುಟದಲ್ಲಿ 6 ಸಚಿವರು 8 ರಿಂದ 12ನೇ ತರಗತಿ ಒಳಗೆ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ. 24 ಮಂದಿ ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ. ಇಬ್ಬರು ಸಚಿವರು ಡಿಪ್ಲೊಮಾ ಪದವೀಧರರಾಗಿದ್ದಾರೆ.

ಒಟ್ಟು 18 (ಶೇ 56 ರಷ್ಟು) ಸಚಿವರ ವಯಸ್ಸು 41 ರಿಂದ 60 ವರ್ಷ ಒಳಗೆ ಇದ್ದರೇ, 14 (ಶೇ 44 ರಷ್ಟು) ಸಚಿವರು 61 ರಿಂದ 80 ವರ್ಷ ಒಳಗಿನ ವಯಸ್ಸಿನವರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ 10 ಸಚಿವರ ಸಂಪುಟಕ್ಕೆ ಶನಿವಾರ 24 ಹೊಸ ಸಚಿವರು ಸೇರ್ಪಡೆಗೊಳ್ಳುವ ಮೂಲಕ ಸಂಪೂರ್ಣ ಸಚಿವ ಸಂಪುಟ ರಚನೆಯಾಯಿತು. ಮೇ 13 ರಂದು ಕಾಂಗ್ರೆಸ್ ಒಟ್ಟು 224 ವಿಧಾನಸಭಾ ಸ್ಥಾನಗಳಲ್ಲಿ 135 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತು.

ಮತ್ತಷ್ಟು ರಾಜಕೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:49 am, Mon, 29 May 23