
ಬೆಂಗಳೂರು, ಡಿಸೆಂಬರ್ 23: ಕರ್ನಾಟಕ ಕಾಂಗ್ರೆಸ್ (Congress) ಪಕ್ಷದಲ್ಲಿ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ಮೊನ್ನೆಲೆಗೆ ಬಂದಿದೆ. ಈ ಸಂದರ್ಭದಲ್ಲಿಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ನಾಯಕನನ್ನು ತಮ್ಮ ಕಡೆಗೆ ಸೆಳೆಯಲು ಯತ್ನಿಸಿರುವುದು ಬಹಿರಂಗವಾಗಿದೆ. ಶನಿವಾರವಷ್ಟೇ ಡಿಕೆ ಶಿವಕುಮಾರ್ ಮಾಜಿ ಸಚಿವ ಕೆಎನ್ ರಾಜಣ್ಣ ನಿವಾಸಕ್ಕೆ ಹೋಗಿ ಮಾತುಕತೆ ನಡೆಸಿದ್ದರು. ಅದಾದ ನಂತರದ ಬೆಳವಣಿಗೆಯಲ್ಲಿ, ಸೋಮವಾರ ಸಂಜೆ ಡಿಕೆ ಶಿವಕುಮಾರ್ ಜೊತೆ ರಾಜಣ್ಣ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಏನೇನು ಚರ್ಚೆಯಾಗಿದೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ರಾಜಣ್ಣ ಜೊತೆ ರಾಜಕೀಯದ ಹಳೆ ನೆನಪುಗಳನ್ನು ಮೆಲುಕು ಹಾಕಿದ ಡಿಕೆ ಶಿವಕುಮಾರ್, ಯೂತ್ ಕಾಂಗ್ರೆಸ್ ದಿನಗಳನ್ನು ನೆನಪಿಸಿದ್ದಾರೆ. ನಾವಿಬ್ಬರೂ ಹಳೆಯ ಸ್ನೇಹಿತರು ನೆನಪಿರಲಿ. ಯೂತ್ ಕಾಂಗ್ರೆಸ್ ದಿನಗಳಿಂದಲೂ ಜತೆಯಾಗಿ ಕೆಲಸ ಮಾಡಿದ್ದೇವೆ. ನೀವು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಲೂ ನಾನೇ ಸಹಾಯ ಮಾಡಿದ್ದು. ಹೀಗಾಗಿದ್ದಾಗ ರಾಜಕೀಯ ವಿರೋಧ ಯಾಕೆ ಎಂದು ರಾಜಣ್ಣ ಬಳಿ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಬರುವ ಮೊದಲೇ ನಾವಿಬ್ಬರೂ ಸ್ನೇಹಿತರು. 2004ರ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ಗೆ ಬಂದಿದ್ದಾರೆ. ಅದಕ್ಕಿಂತ ಮೊದಲೇ ನಾವಿಬ್ಬರು ಸ್ನೇಹಿತರಾಗಿದ್ದೇವೆ ಎಂದು ರಾಜಣ್ಣ ಜತೆ ಆತ್ಮೀಯವಾಗಿ ಡಿಕೆ ಶಿವಕುಮಾರ್ ಸಂಭಾಷಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿಕೆಶಿ ಮಾತಿಗೆ ಪ್ರತಿಯಾಗಿ ರಾಜಣ್ಣ, ನಮಗೆ ಎಲ್ಲಿ ಗೌರವ ಇದೆಯೋ ಅಲ್ಲಿ ನಾವು ಇರುತ್ತೇವೆ. ನಿಮ್ಮ ಸ್ಥಾನಮಾನದ ಬಗ್ಗೆ ನಮ್ಮದೇನು ಅಭ್ಯಂತರವಿಲ್ಲ. ಹೈಕಮಾಂಡ್ ಅನ್ನು ಒಪ್ಪಿಸಿ ಎಂದು ಹೇಳಿದ್ದಾರೆ.
ಈ ಭೇಟಿಗೂ ಮುನ್ನ ಸೋಮವಾರ ಮಾತನಾಡಿದ್ದ ರಾಜಣ್ಣ, ಉಪಮುಖ್ಯಮಂತ್ರಿಗಳು ಎಷ್ಟೇ ಪ್ರಯತ್ನ ಮಾಡಿದರೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಈಗಲೂ ಸಿಎಂ ಸಿದ್ದರಾಮಯ್ಯ ಪರ ಎಂದು ಹೇಳಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡೇ ‘ಕೈ’ ಚೆಲ್ಲಿ ಕೂತಿತಾ? ಮಲ್ಲಿಕಾರ್ಜುನ ಖರ್ಗೆ ‘ಲೋಕಲ್ ಸೂತ್ರ’ವನ್ನು ಸುತಾರಂ ಒಪ್ಪದ ಸಿಎಂ ಸಿದ್ದರಾಮಯ್ಯ!
ಏತನ್ಮಧ್ಯೆ, ರಾಜಣ್ಣ ಅವರು ಸಿದ್ದರಾಮಯ್ಯಗಿಂತಲೂ ನನಗೆ ಅತ್ಯಾಪ್ತರು. ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದೇ ನಾನು ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಇದಕ್ಕೆ ಕೌಂಟರ್ ನೀಡುವ ರೀತಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ಅಂದಿನ ಸಿಎಂ ಎಸ್ಎಂ ಕೃಷ್ಣ ಎಂದು ಹೇಳಿದ್ದರು.
Published On - 9:25 am, Tue, 23 December 25