ಬೆಂಗಳೂರು: ಡಿಜೆ ಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿ, 2 ಠಾಣಾ ವ್ಯಾಪ್ತಿಯಲ್ಲಿ ಗಲಭೆ ನಡೆದ ಕೇಸ್ನಲ್ಲಿ ಹೆಸರು ಕೇಳಿಬಂದಿದ್ದ ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊನೆಗೂ ಕ್ರಮಕ್ಕೆ ಮುಂದಾಗಿದ್ದಾರೆ. ಸಂಪತ್ ರಾಜ್ ವಿರುದ್ಧ ಶಿಸ್ತುಕ್ರಮಕ್ಕೆ ಡಿಕೆಶಿ ಶಿಫಾರಸು ಮಾಡಿದ್ದಾರೆ.
ಮಾಜಿ ಮೇಯರ್ ಸಂಪತ್ ರಾಜ್ ವಿರುದ್ಧ ಕ್ರಮಕ್ಕೆ ಸೂಚಿಸಿ ಶಿವಕುಮಾರ್ ಶಿಸ್ತುಪಾಲನಾ ಸಮಿತಿಗೆ ಶಿಫಾರಸು ಮಾಡಿದ್ದಾರೆ. ಅಂದ ಹಾಗೆ, ಗಲಭೆಯಲ್ಲಿ ತಮ್ಮ ಮನೆಗೆ ಬೆಂಕಿ ಬಿದ್ದ ನಂತರ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಸಂಪತ್ ರಾಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಮ್ಮ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ಗೂ ಮನವಿ ಮಾಡಿದ್ದರು.
ಜೊತೆಗೆ, ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ ಹೈಕಮಾಂಡ್ ಮೊರೆ ಹೋಗುವುದಾಗಿಯೂ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ತಡವಾಗಿಯಾದರೂ, ಡಿ.ಕೆ.ಶಿವಕುಮಾರ್ ಸಂಪತ್ ರಾಜ್ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.