DySP ಲಕ್ಷ್ಮೀ ಅನುಮಾನಾಸ್ಪದ ಸಾವು: ಲಕ್ಷ್ಮೀ ಸ್ನೇಹಿತ ಸೇರಿದಂತೆ ನಾಲ್ವರು ಪೊಲೀಸ್ ವಶಕ್ಕೆ
DySP ಲಕ್ಷ್ಮೀ ಸಾವಿನ ಬಳಿಕ ತಂದೆ ವೆಂಕಟೇಶ್ ಈ ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಸದ್ಯ ಈಗ ದೂರು ಆಧರಿಸಿ ಮನು, ಪ್ರಜ್ವಲ್ ಸೇರಿ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರು: DySP ಲಕ್ಷ್ಮೀ ಅನುಮಾನಾಸ್ಪದ ಸಾವು ಪ್ರಕರಣ ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ. ಅನ್ನಪೂರ್ಣೇಶ್ವರಿ ನಗರದ ವಿನಾಯಕ ಲೇಔಟ್ನಲ್ಲಿ ಪೊಲೀಸ್ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದ ಸುದ್ದಿ ಇದೀಗ ಬೇರೆಯೇ ಸ್ವರೂಪವೇ ಪಡೆದಿದೆ.
ಹೌದು, ಮೃತ ಪೊಲೀಸ್ ಅಧಿಕಾರಿಯ ತಂದೆ ವೆಂಕಟೇಶ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ವೆಂಕಟೇಶ್ ನೀಡಿದ ದೂರು ಆಧರಿಸಿ ಪೊಲೀಸರು ಬಿಬಿಎಂಪಿ ಗುತ್ತಿಗೆದಾರ ಮನು, ಪ್ರಜ್ವಲ್, ವಸಂತ್, ರಂಜಿತ್ ಸೇರಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಗೂ ಐಪಿಸಿ ಸೆಕ್ಷನ್ 174C ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸರು ವಶಕ್ಕೆ ಪಡೆದ ನಾಲ್ವರು ಸಹ ನಿನ್ನೆ ನಡೆದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. DySP ಲಕ್ಷ್ಮೀ ಸ್ನೇಹಿತ ಮನು ಅಲಿಯಾಸ್ ವಸಂತ್ ಮನೆಯಲ್ಲಿ ನಿನ್ನೆ ಪಾರ್ಟಿ ಮಾಡುವಾಗ ಒಟ್ಟು ಐವರು ಉಪಸ್ಥಿತರಿಂದ್ರು. ಅದರಲ್ಲಿ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
15 ದಿನದಿಂದ ನನ್ನ ಪುತ್ರಿ ಲಕ್ಷ್ಮೀ ಜತೆ ಮಾತನಾಡಿರಲಿಲ್ಲ: ಕಳೆದ ಒಂದು ತಿಂಗಳ ಹಿಂದೆ ನಾನು ನನ್ನ ಮಗಳನ್ನು ನೋಡಿದ್ದು. 15 ದಿನದಿಂದ ನನ್ನ ಪುತ್ರಿ ಲಕ್ಷ್ಮೀ ಜತೆ ಮಾತನಾಡಿರಲಿಲ್ಲ. ಮನೆಯಲ್ಲಿ ಅವರ ತಾಯಿ, ಸೋದರಿ ಜತೆ ಚೆನ್ನಾಗಿದ್ದರು. ಲಕ್ಷ್ಮೀ ಬೇಸರದಲ್ಲಿರುವ ಬಗ್ಗೆ ಯಾವತ್ತೂ ಹೇಳಿರಲಿಲ್ಲ ಎಂದು ಡಿವೈಎಸ್‌ಪಿ ಲಕ್ಷ್ಮೀ ಅನುಮಾನಾಸ್ಪದ ಸಾವು ಕೇಸ್ ಸಂಬಂಧ ಟಿವಿ9ಜೊತೆ ಮಾತನಾಡಿದ ಲಕ್ಷ್ಮೀ ತಂದೆ, ನಿವೃತ್ತ ಕೆಎಎಸ್ ಅಧಿಕಾರಿ ವೆಂಕಟೇಶ್ ತಿಳಿಸಿದ್ರು.
ನನಗೆ ಮನು, ಪ್ರಜ್ವಲ್ ಮೇಲೆ ಅನುಮಾನವಿದೆ: ನನ್ನ ಪುತ್ರಿ ಲಕ್ಷ್ಮೀ ಸಾಂಸಾರಿಕ ಜೀವನ ಚೆನ್ನಾಗಿತ್ತು. 2 ದಿನದ ಹಿಂದೆ ಅಳಿಯ ಹೈದರಾಬಾದ್‌ಗೆ ಹೋಗಿದ್ದರಂತೆ. ಇದರಿಂದ ನನ್ನ ಪುತ್ರಿ ಲಕ್ಷ್ಮೀ ಬೇಸರಗೊಂಡಿದ್ದರು. ಆದರೆ ಲಕ್ಷ್ಮೀಗೆ ಯಾವುದೇ ರೀತಿ ಡಿಪ್ರೆಷನ್ ಇರಲಿಲ್ಲ. ಡಿಪ್ರೆಷನ್‌ಗೆ ಹೋಗುವಂತಹ ಸಮಸ್ಯೆಯೂ ಇರಲಿಲ್ಲ. ನನ್ನ ಪುತ್ರಿ ಲಕ್ಷ್ಮೀಗೆ ಮನೆ, ಹಣ, ಅಧಿಕಾರ ಎಲ್ಲವೂ ಇದೆ. ಏಕೆ ಡಿಪ್ರೆಷನ್‌ಗೆ ಹೋಗ್ತಾಳೆ, ಆತ್ಮಹತ್ಯೆ ಮಾಡ್ಕೊಳ್ಳುತ್ತಾಳೆ. ನನ್ನ ಪುತ್ರಿಯ ಸಾವಿನ ವಿಚಾರದಲ್ಲಿ ನನಗೆ ಮನು, ಪ್ರಜ್ವಲ್ ಮೇಲೆ ಅನುಮಾನವಿದೆ.
ಅದೇ ಮಾದರಿ ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ಸಾವಿನ ಬಗ್ಗೆ ಅಸ್ಪಷ್ಟ ಹೇಳಿಕೆ ಸಹ ನೀಡಿದ್ದಾರೆ. ಕಿಟಕಿಯ ಕಂಬಿಗೆ ನೇಣು ಬಿಗಿದುಕೊಂಡಿರುವ ಮಾಹಿತಿ ಇದೆ. ಅದು ಸಹ ಆಕೆಯ ಕಾಲು ನೆಲಕ್ಕೆ ತಾಗುವಂತೆ ಇತ್ತಂತೆ. ಹೀಗಿರಬೇಕಾದರೆ ಅದು ಆತ್ಮಹತ್ಯೆ ಹೇಗೆ ಆಗುತ್ತದೆ ಎಂದು ಹೇಳಿದ್ರು.
ಪ್ರಕರಣದ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಯಲು ಸೂಚನೆ: ಇನ್ನು ಈ ಕೇಸನ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಸೂಚಿಸುವುದಾಗಿ ಹಾವೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಪ್ರಕರಣವನ್ನ ತನಿಖೆಗೆ ಒಳಪಡಿಸ್ತೇವೆ. ಅವರ ಹಿನ್ನೆಲೆ ಕುರಿತಂತೆ ಎಲ್ಲವನ್ನ ತನಿಖೆ ನಡೆಸಿ ಸತ್ಯಾಸತ್ಯತೆ ಅರಿಯಲು ಹಿರಿಯ ಅಧಿಕಾರಿಗಳಿಗೆ ಈಗಾಗಲೆ ಸೂಚನೆ ಕೊಟ್ಟಿದ್ದೇನೆ. ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಲು ನಿರಂತರ ಕಾರ್ಯಕ್ರಮ ಮಾಡ್ತಿದ್ದೇವೆ ಎಂದು ಈ ವೇಳೆ ಹೇಳಿದ್ರು.
Published On - 12:02 pm, Thu, 17 December 20