AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೊಗರಿಗೆ ಪ್ರೋತ್ಸಾಹ ಧನ ನೀಡದ ರಾಜ್ಯ ಸರ್ಕಾರ.. ಖರೀದಿ ಕೇಂದ್ರವೂ ಆರಂಭವಿಲ್ಲ: ಬೆಳೆಗಾರರ ಆಕ್ರೋಶ

ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಐದು ಲಕ್ಷ ತೊಂಬತ್ತೆರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಮೂವತ್ತೈದು ಲಕ್ಷ ಕ್ವಿಂಟಲ್ ತೊಗರಿ ಬೆಳೆಯುವ ಅಂದಾಜಿದೆ. ಆದರೆ ಈ ಭಾಗದಲ್ಲಿ ಈ ಸಲ ಅತಿಹೆಚ್ಚು ಮಳೆ, ಪ್ರವಾಹ ಆಗಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬೆಳೆದಿಲ್ಲ.

ತೊಗರಿಗೆ ಪ್ರೋತ್ಸಾಹ ಧನ ನೀಡದ ರಾಜ್ಯ ಸರ್ಕಾರ.. ಖರೀದಿ ಕೇಂದ್ರವೂ ಆರಂಭವಿಲ್ಲ: ಬೆಳೆಗಾರರ ಆಕ್ರೋಶ
ತೊಗರಿ ಕಾಳು
Lakshmi Hegde
|

Updated on:Dec 17, 2020 | 12:06 PM

Share

ಕಲಬುರಗಿ: ಈ ಜಿಲ್ಲೆ ನಮ್ಮ ರಾಜ್ಯದ ತೊಗರಿ ಕಣಜ ಎಂದೇ ಖ್ಯಾತಿ ಪಡೆದಿದೆ.. ಇಲ್ಲಿನ ತೊಗರಿಯಲ್ಲಿ ಪ್ರೋಟಿನ್​ ಹೆಚ್ಚಿರುವುದರಿಂದ ದೇಶದ ಇತರ ಭಾಗಗಳ ತೊಗರಿಗೆ ಹೋಲಿಸಿದರೆ, ಕಲಬುರಗಿಯ ತೊಗರಿಗೆ ಬೇಡಿಕೆ ಹೆಚ್ಚು. ಇಷ್ಟೆಲ್ಲ ಆದರೂ ರಾಜ್ಯ ಸರ್ಕಾರ ಮಾತ್ರ ನಮ್ಮ ಕಡೆ ಗಮನ ಹರಿಸುತ್ತಿಲ್ಲ ಎಂದು ಇಲ್ಲಿನ ಬೆಳೆಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೋತ್ಸಾಹ ಧನ ನೀಡದೆ ಇರುವುದಕ್ಕೆ ಆಕ್ರೋಶ ಸರ್ಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಈ ಬಾರಿ ಪ್ರೋತ್ಸಾಹ ಧನ ನೀಡುತ್ತಿಲ್ಲ ಎಂಬುದೇ ಬೆಳೆಗಾರರ ಆಕ್ರೋಶಕ್ಕೆ ಕಾರಣ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ 6 ಸಾವಿರ ರೂ. ಗರಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ, ಖರೀದಿ ಕೇಂದ್ರದ ಮೂಲಕ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ. ಇನ್ನು ಕೇಂದ್ರ ಸರ್ಕಾರ ನಿರ್ಧರಿಸಿದ ಬೆಲೆಗೆ ರಾಜ್ಯ ಸರ್ಕಾರ ಪ್ರತಿವರ್ಷ ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೋತ್ಸಾಹ ಧನವನ್ನು ನೀಡುವುದಿಲ್ಲ ಎಂದು ಹೇಳಿದೆ.

ಈ ಹಿಂದೆ ಕೇಂದ್ರ ಸರ್ಕಾರ ನಿಗದಿ ಮಾಡಿದ್ದ ಬೆಂಬಲ ಬೆಲೆಗೆ ರಾಜ್ಯದ ಪ್ರತಿ ಸರ್ಕಾರಗಳೂ ಪ್ರೋತ್ಸಾಹ ಧನ ನೀಡುತ್ತಿದ್ದವು. ಹಾಗಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಪ್ರೋತ್ಸಾಹ ಧನ ನೀಡದೆ ಜಾರಿಕೊಂಡಿದೆ. ಇನ್ನು ಡಿ. 15ರಿಂದಲೇ ತೊಗರಿ ಖರೀದಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಸರ್ಕಾರ, ಇದುವರೆಗೂ ತೊಗರಿ ಖರೀದಿ ಕೇಂದ್ರವನ್ನೇ ಪ್ರಾರಂಭ ಮಾಡಿಲ್ಲ.

ಖರೀದಿಗೆ ನೋಂದಣಿಯೂ ಶುರುವಾಗಿಲ್ಲ. ಇದೆಲ್ಲವೂ ಬೆಳೆಗಾರರು ರಾಜ್ಯ ಸರ್ಕಾರದ ವಿರುದ್ಧ ಸಿಡಿದೇಳುವಂತೆ ಮಾಡಿವೆ. ಸರ್ಕಾರ ಖರೀದಿ ಕೇಂದ್ರಗಳನ್ನು ಶೀಘ್ರವೇ ಪ್ರಾರಂಭಿಸಿ ತೊಗರಿ ಖರೀದಿಸಬೇಕು ಎಂಬ ಆಗ್ರಹ ಹೆಚ್ಚಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ ಐದೂವರೆ ಸಾವಿರ ರೂ.ನ್ನು ದಲ್ಲಾಳಿಗಳು ನೀಡುತ್ತಿದ್ದಾರೆ.

ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಬೆಳೆ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಐದು ಲಕ್ಷ ತೊಂಬತ್ತೆರಡು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಮೂವತ್ತೈದು ಲಕ್ಷ ಕ್ವಿಂಟಲ್ ತೊಗರಿ ಬೆಳೆಯುವ ಅಂದಾಜಿದೆ. ಆದರೆ ಈ ಭಾಗದಲ್ಲಿ ಈ ಸಲ ಅತಿಹೆಚ್ಚು ಮಳೆ, ಪ್ರವಾಹ ಆಗಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಬೆಳೆದಿಲ್ಲ. ಹಾಗೇ, ಅಂದುಕೊಂಡಷ್ಟು ಬೆಲೆಯೂ ಸಿಗುತ್ತಿಲ್ಲ. ಹಾಗಾಗಿ ಕೇಂದ್ರದ ಬೆಲೆಗೆ ರಾಜ್ಯ ಸರ್ಕಾರ ಕನಿಷ್ಠ 500ರೂ.ನ್ನಾದರೂ ಪ್ರೋತ್ಸಾಹ ಧನ ನೀಡಬೇಕು ಎಂದು ಎಂದು ರೈತರು ಆಗ್ರಹಿಸುತ್ತಿದ್ದಾರೆ.

ವರ್ಷ ಈ ಹಿಂದೆ ನೀಡಿದ್ದ ಪ್ರೋತ್ಸಾಹ ಧನ 2016-17: 450 ರೂಪಾಯಿ 2017-18: 550 ರೂಪಾಯಿ 2018-19: 425 ರೂಪಾಯಿ 2019-20: 300 ರೂಪಾಯಿ

ಕಲಬುರಗಿ: ನೆರೆ ಇಳಿದು 3 ತಿಂಗಳಾದ ಮೇಲೆ ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ಸಿಗುವುದೇನು?

Published On - 11:55 am, Thu, 17 December 20