
ಬೆಂಗಳೂರು, (ಮೇ 30):ಹಲವು ಗೊಂದಲಗಳ ನಡುವೆ ಕೊನೆಗೂ ಕರ್ನಾಟಕದ (Karnataka) ನೂತನ ಸಿಎಂ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬುಧವಾರ ಅಂದರೆ ಜೂನ್ 3ರಂದು ಸಂಜೆ ಡಿಕೆ ಶಿವಕುಮಾರ್ (DK Shivakumar) ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಸಿಎಂ ಆಗುತ್ತಿದ್ದರೂ ಸಹ ಯಾವುದೇ ಆಡಂಬರವಿಲ್ಲದೇ ಲೋಕಭವನದಲ್ಲಿ (ರಾಜಭವನ) ಸರಳವಾದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ಮೊದಲು ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ದ್ವಾರಕನಾಥ್ ಗುರೂಜಿ ಅವರು ಜೂನ್ 5,6, ಹಾಗೂ 7 ತಾರೀಖು ನೀಡಿದ್ದರು. ಆದ್ರೆ, ಇದೀಗ ಜೂನ್ 3ರ ಸಂಜೆ 5:15ಕ್ಕೆ ವೃಶ್ಚಿಕ ಲಗ್ನದಲ್ಲಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಇನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಮಾಣವಚನ ಸ್ವೀಕರಿಸಲು ಡಿಕೆ ಶಿವಕುಮಾರ್ ನಿರ್ಧರಿಸಿದ್ದರು. ಆದ್ರೆ, ಹೈಕಮಾಂಡ್ ಸೂಚನೆ ಮೇರೆಗೆ ಜೂನ್ 3ರಂದು ಸರಳವಾಗಿ ಲೋಕಭವನದ ಗ್ಲಾಸ್ ಹೌಸ್ ನಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರ್ಧಾರವಾಗಿದೆ. ಸಾರ್ವಜನಿಕವಾಗಿ ತೊಂದರೆ ಆಗಬಾರದು ಎನ್ನುವ ದೃಷ್ಠಿಯಿಂದ ಆಡಂಬರದ ಕಾರ್ಯಕ್ರಮ ಬೇಡ ಎಂದು ತೀರ್ಮಾನಿಸಲಾಗಿದೆ.
ಡಿಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಸಿಎಂ ಆಗುತ್ತಿರುವುದರಿಂದ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲು ಆಪ್ತರು ನಿರ್ಧರಿಸಿದ್ದರು. ಹೀಗಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಾವಿರಾರು ಜನರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸಕಲ ಸಿದ್ಧತೆಗಳು ಸಹ ನಡೆದಿದ್ದವು. ಆದ್ರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್ ಆಡಂಬರಕ್ಕೆ ಬ್ರೇಕ್ ಹಾಕಿದ್ದು, ಸರಳವಾಗಿ ಪ್ರಮಾಣವಚನ ಸ್ವೀಕರಿಸಲು ಸೂಚಿಸಿದೆ. ತೈಲ ಬೆಲ ಏರಿಕೆ ಹಾಗೂ ವೀಕೆಂಡ್ ಆಗಿರುವುದರಿಂದ ಸಹಸ್ರಾರು ಜನ ಸೇರುವುದರಿಂದ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯೆತೆಗಳಿವೆ. ಇದರಿಂದ ಜನರಿಗೆ ತೊಂದರೆಯಾಗುವುದು ಬೇಡ. ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಬೇಡ ಎಂದು ಸೂಚಿಸಲಾಗಿದೆ. ಅದರಂತೆ ಸರಳವಾಗಿ ಲೋಕಭವನದ ಗ್ಲಾಸ್ ಹೌಸ್ನಲ್ಲಿ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ.
ಇನ್ನು ಈ ಬಗ್ಗೆ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಮಾತನಾಡಿ, ತೈಲ ಬೆಲೆ ಏರಿಕೆ ಹಿನ್ನೆಲೆ ಸರಳವಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಲೋಕಭವನದ ಗಾಜಿನ ಮನೆಯಲ್ಲಿ ಸರಳ ಸಮಾರಂಭ ಆಯೋಜಿಸಲಾಗಿದೆ. ವಾರದ ಮಧ್ಯದ ದಿನವಾಗಿರುವ ಕಾರಣ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜೂನ್ 3ರ ಸಂಜೆ ಪ್ರಮಾಣ ವಚನ ಸ್ವೀಕಾರಕ್ಕೆ ನಿರ್ಧರಿಸಲಾಗಿದೆ.ಇದಕ್ಕೂ ಮೊದಲು ಅದ್ಧೂರಿಯಾಗಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ ಕಾರ್ಯಕರ್ತರು ಬೆಂಗಳೂರಿಗೆ ಬರಲು 10 ರಿಂದ 15 ಸಾವಿರ ಬಸ್ ವ್ಯವಸ್ಥೆ ಮಾಡಲು ಚಿಂತನೆ ನಡೆದಿತ್ತು. ಆದ್ರೆ ಈಗ ಸರಳ ಕಾರ್ಯಕ್ರಮ ನಡೆಸಲು ಪಕ್ಷದ ತೀರ್ಮಾನಿಸಿದೆ. ಈ ಹಿನ್ನೆಲೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಡಿಕೆ ಶಿವಕುಮಾರ್ ಅವರು ಜಿಲ್ಲೆಗಳಿಗೆ ತೆರಳಿ ಕಾರ್ಯಕರ್ತರಿಗೆ ಧನ್ಯವಾದ ಹೇಳಲಿದ್ದಾರೆ ಎಂದು ಮಾಹಿತಿ ನೀಡಿದರು.
Published On - 2:44 pm, Sat, 30 May 26