ಬೆಂಗಳೂರು: ಸಂಪೂರ್ಣ ಶುಲ್ಕ ಪಾವತಿಗೆ ಪೋಷಕರಿಗೆ ಒತ್ತಡ ಹೇರಬೇಡಿ. ಈ ವರ್ಷ ಖರ್ಚುವೆಚ್ಚದ ಆಧಾರದಲ್ಲಿ ಶುಲ್ಕ ನಿಗದಿ ಮಾಡಿ. ಬಲವಂತವಾಗಿ ಶುಲ್ಕ ಪಾವತಿ ಮಾಡಿ ಎನ್ನುವುದು ಸರಿಯಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟದಿಂದ (ಕ್ಯಾಮ್ಸ್) ಸದಸ್ಯ ಶಾಲೆಗಳಿಗೆ ಇಂದು (ಜ.6) ಮನವಿ ಮಾಡಿದ್ದಾರೆ.
ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಒಕ್ಕೂಟದ ಸದಸ್ಯ ಶಾಲೆಗಳಿಗೆ ಮನವಿ ಮಾಡಿದ್ದಾರೆ. ಮೊದಲಿನಂತೆ ಸಂಪೂರ್ಣವಾಗಿ ಶುಲ್ಕ ಪಡೆಯುವುದು ಬೇಡ ಎಂದು ಕೇಳಿಕೊಂಡಿದ್ದಾರೆ. ಕೊರೊನಾ ಲಾಕ್ಡೌನ್ ಕಾರಣದಿಂದ ಶಾಲಾ ಕಾಲೇಜುಗಳ ಮುಚ್ಚಿದ್ದವು. ಆನ್ಲೈನ್ ತರಗತಿಗಳನ್ನು ನಡೆಸಿದ್ದವು. ಈ ನಡುವೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಕ ಪೋಷಕರಿಗೆ ಸಂಪೂರ್ಣ ಪ್ರಮಾಣದ ಶುಲ್ಕ ಭರಿಸುವಂತೆ ತಿಳಿಸಿದ್ದು, ಹೆತ್ತವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಕಾರಣದಿಂದ ಶಾಲಾ ಆಡಳಿತ ಮಂಡಳಿಗಳಿಗೆ ಡಿ. ಶಶಿಕುಮಾರ್ ಮನವಿ ಮಾಡಿದ್ದಾರೆ.
ಈ ವರ್ಷ ಅನೇಕ ಶೈಕ್ಷಣಿಕ ಚಟುವಟಿಕೆಗಳು ನಡೆಯುವುದಿಲ್ಲ. ಹೀಗಾಗಿ ಪಠ್ಯಕ್ರಮ ಅಥವಾ ಪಠ್ಯೇತರ ಚಟುವಟಿಕೆಗಳಿಗೆ ಶುಲ್ಕ ನಿಗಧಿ ಪಡಿಸಿದ್ದರೆ ಅದನ್ನು ಕೈಬಿಡಬೇಕು. ಮೊದಲಿನಂತೆ ಸಂಪೂರ್ಣವಾಗಿ ಶುಲ್ಕ ಪಡೆಯುವುದು ಬೇಡ. ಪಾಲಕ-ಪೋಷಕರಂದಿಗೆ ಚರ್ಚೆ ನಡೆಸಿ ಶುಲ್ಕ ರಿಯಾಯಿತಿ ನೀಡಬೇಕು ಎಂದು ಶಶಿಕುಮಾರ್ ಮನವಿ ಮಾಡಿದ್ದಾರೆ. ಎಲ್ಲಾ ಶಾಲೆಗಳು ತಮ್ಮ ಶಾಲೆಗಳ ಮಕ್ಕಳ ಪೋಷಕರ ಆರ್ಥಿಕ ಸ್ಥಿತಿಯನ್ನು ಅರಿಯಬೇಕು. ಇದರ ಜೊತೆಗೆ ಸಾಧ್ಯವಿರುವ ಪೋಷಕರು ಖಂಡಿತಾ ಶುಲ್ಕ ನೀಡಿ, ಶಾಲೆಗಳ ಉಳಿವಿಗೆ ಸಹಕರಿಸಿ ಎಂದೂ ಅವರು ತಿಳಿಸಿದ್ದಾರೆ.
ಸಚಿವ ಸುರೇಶ್ ಕುಮಾರ್ ಮೆಚ್ಚುಗೆ
ಶಾಲಾ ಶುಲ್ಕ ರಿಯಾಯಿತಿಗೆ ಮುಂದಾಗಿರುವ ಕ್ಯಾಮ್ಸ್ ನಡೆಗೆ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಲಕ್ಷ ಲಕ್ಷ ಫೀಸ್ ಪಾವತಿ ಕಷ್ಟ. ಹೀಗಾಗಿ ಖರ್ಚುವೆಚ್ಚದ ಆಧಾರದಲ್ಲಿ ಶಾಲಾ ಶುಲ್ಕ ನಿಗದಿಪಡಿಸಬೇಕು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ ಲಕ್ಷ ಲಕ್ಷ ಫೀಸ್ ಪಾವತಿಸುವುದು ಕಷ್ಟ. ಹೀಗಾಗಿ ಖರ್ಚು ವೆಚ್ಚದ ಆಧಾರದಲ್ಲಿ ಶಾಲಾ ಶುಲ್ಕ ನಿಗದಿ ಮಾಡಬೇಕು. ಈ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟ ಸೂಚನೆ ನೀಡಿರುವ ಕಾರ್ಯಕ್ಕೆ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ. ಬಲವಂತವಾಗಿ ಶುಲ್ಕ ಪಾವತಿ ಮಾಡಿ ಎನ್ನುವುದು ಸರಿಯಲ್ಲ. ಕ್ಯಾಮ್ಸ್ ತನ್ನ ವ್ಯಾಪ್ತಿಯ ಸಂಸ್ಥೆಗಳಿಗೆ ಈ ಕುರಿತು ಮನವಿ ಮಾಡಿದೆ. ನಾನು ಇದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೊಂದು ಅತ್ಯಂತ ಸ್ವಾಗತಾರ್ಹ ಘೋಷಣೆ ಎಂದು ಸಚಿವರು ಹೇಳಿದ್ದಾರೆ.
ಖಾಸಗಿ ಶಾಲೆಗಳಿಂದ ಶುಲ್ಕ ಟಾರ್ಚರ್: ಸಿಡಿದೆದ್ದ ಪೋಷಕರಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾನುವಾರ ಪ್ರತಿಭಟನೆ
Published On - 12:58 pm, Wed, 6 January 21