ಹು-ಧಾ ಪಾಲಿಕೆಗೆ ಹರಿದು ಬಂತು ಭರ್ಜರಿ ತೆರಿಗೆ! ಕೊರೊನಾ ಹಾವಳಿಯಿಂದ ತತ್ತರಿಸಿದ್ದರೂ.. ತೆರಿಗೆ ಕಟ್ಟುವಲ್ಲಿ ಜನ ಹಿಂದೆ ಬಿದ್ದಿಲ್ಲ
ಪ್ರಸಕ್ತ ಸಾಲಿನಲ್ಲಿ ವಾಸದ ಕಟ್ಟಡಗಳಿಗೆ ಶೇ. 15, ವಾಣಿಜ್ಯ ಕಟ್ಟಡಗಳಿಗೆ ಶೇ. 20, ವಾಸೇತರ ಮತ್ತು ವಾಣಿಜ್ಯ ಬಳಕೆಯಿಲ್ಲದ ಕಟ್ಟಡಗಳಿಗೆ ಶೇ. 20 ಹಾಗೂ ಎಲ್ಲ ಸ್ವರೂಪದ ಖುಲ್ಲಾ ಜಾಗಗಳಿಗೆ ಶೇ. 25 ರಷ್ಟು ಏರಿಕೆ ಮಾಡಿದ್ದರು. ಇದರಿಂದಾಗಿಯೇ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ.

ಕೊರೊನಾ ಸೋಂಕಿನಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಎಲ್ಲ ಕ್ಷೇತ್ರಗಳೂ ಆರ್ಥಿಕವಾಗಿ ಕಂಗೆಟ್ಟಿವೆ. ಉದ್ಯೋಗಗಳ ಕಡಿತದಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ನಮ್ಮ ದೇಶವೂ ಹೊರತಲ್ಲ. ಇದೀಗ ನಿಧಾನವಾಗಿ ಕೊರೊನಾ ಕಡಿಮೆಯಾಗುತ್ತಿದ್ದರೂ, ಜನರು ಆರ್ಥಿಕ ಸಮಸ್ಯೆಯಿಂದ ಇನ್ನೂ ಹೊರಬಂದಿಲ್ಲ. ಹೀಗಿರುವಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ.
ಸಂಕಷ್ಟದ ಕಾಲದಲ್ಲೂ ಜನರು ತಮ್ಮ ಸಮಸ್ಯೆಗಳನ್ನು ಬದಿಗೊತ್ತಿ, ತೆರಿಗೆ ಕಟ್ಟಿ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಪಾಲಿಕೆಯು ತೆರಿಗೆ ವಸೂಲಿಯಲ್ಲಿ ಅದ್ಭುತ ಸಾಧನೆ ಮಾಡಿದೆ.
ಕಳೆದ ವರ್ಷಕ್ಕಿಂತಲೂ ಹೆಚ್ಚು 2019-20ರ ಡಿಸೆಂಬರ್ ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 49.55 ಕೋಟಿ ರೂಪಾಯಿ ಆಸ್ತಿ ತೆರಿಗೆ ಮೂಲಕ ಆದಾಯ ಸಂಗ್ರಹ ಆಗಿತ್ತು. 2020-21 ರ ಡಿಸೆಂಬರ್ ಅಂತ್ಯಕ್ಕೆ 57.03 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಕಳೆದ ಮಾರ್ಚ್ನಿಂದಲೂ ಕೊರೊನಾ ಹಾವಳಿಯಿಂದ ಜನರು ತತ್ತರಿಸುತ್ತಿದ್ದಾರೆ. ಆದರೆ ತೆರಿಗೆ ಕಟ್ಟುವಲ್ಲಿ ಜನರು ಹಿಂದೆ ಬಿದ್ದಿಲ್ಲ.
ಆದಾಯ ಹೆಚ್ಚಳಕ್ಕೆ ಕಾರಣ ಕೊರೊನಾ ಹಾವಳಿ ಮಧ್ಯೆಯೂ ಇಷ್ಟು ಪ್ರಮಾಣದ ತೆರಿಗೆ ಹರಿದು ಬಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಜತೆಗೆ ಕುತೂಹಲವೂ ಮೂಡಿದೆ. ಆಸ್ತಿ ತೆರಿಗೆಯಲ್ಲಿ ಮಾಡಲಾಗಿದ್ದ ಹೆಚ್ಚಳವೇ ಇದಕ್ಕೆ ಕಾರಣ. ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ಹು-ಧಾ ಮಹಾನಗರ ಪಾಲಿಕೆ ವಾಸದ ಕಟ್ಟಡಗಳಿಗೆ ಶೇ. 20 ರಷ್ಟು ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ. 30, ವಾಸೇತರ -ವಾಣಿಜ್ಯ ಬಳಕೆಯಿಲ್ಲದ ಕಟ್ಟಡಗಳಿಗೆ ಶೇ.25 ರಷ್ಟು ಮತ್ತು ಖುಲ್ಲಾ ಜಾಗಗಳಿಗೆ ಶೇ.30 ರಷ್ಟು ಏರಿಕೆ ಮಾಡಿ ಮೇ ತಿಂಗಳಲ್ಲಿ ಆದೇಶ ಹೊರಡಿಸಿತ್ತು.
ಕೊವಿಡ್ ಹಿನ್ನೆಲೆಯಲ್ಲಿ ಇದಕ್ಕೆ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಸಾರ್ವಜನಿಕರಷ್ಟೇ ಅಲ್ಲದೇ ಉದ್ಯಮಿಗಳಿಂದಲೂ ಆಕ್ರೋಶ ವ್ಯಕ್ತವಾಗಿತ್ತು. ಇದನ್ನು ಪರಿಗಣಿಸಿ ಪಾಲಿಕೆ ಆಯುಕ್ತರು ಏರಿಕೆಯನ್ನು ಕೊಂಚ ತಗ್ಗಿಸಿದ್ದರು. ವಾಸದ ಕಟ್ಟಡಗಳಿಗೆ ಶೇ. 15, ವಾಣಿಜ್ಯ ಕಟ್ಟಡಗಳಿಗೆ ಶೇ. 20, ವಾಸೇತರ ಮತ್ತು ವಾಣಿಜ್ಯ ಬಳಕೆಯಿಲ್ಲದ ಕಟ್ಟಡಗಳಿಗೆ ಶೇ. 20 ಹಾಗೂ ಎಲ್ಲ ಸ್ವರೂಪದ ಖುಲ್ಲಾ ಜಾಗಗಳಿಗೆ ಶೇ. 25 ರಷ್ಟು ಏರಿಕೆ ಮಾಡಿದ್ದರು. ಈ ತೆರಿಗೆ ಏರಿಕೆಯಿಂದಲೇ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ.
ಉಳಿದ ಆದಾಯದಲ್ಲಿ ಹಿನ್ನಡೆ ಹುಬ್ಬಳ್ಳಿ-ಧಾರವಾಡ ಮಹಾಪಾಲಿಕೆ ವ್ಯಾಪ್ತಿಯಲ್ಲಿ ವಾಸದ ಕಟ್ಟಡ, ವಾಣಿಜ್ಯ ಕಟ್ಟಡ, ವಾಸೇತರ-ವಾಣಿಜ್ಯ ಬಳಕೆಯಿಲ್ಲದ ಕಟ್ಟಡ ಹಾಗೂ ಖುಲ್ಲಾ ಜಾಗೆ ಸೇರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸುಮಾರು 2.85 ಲಕ್ಷ ಆಸ್ತಿಗಳಿವೆ. ಹೊಸ ತೆರಿಗೆ ಏರಿಕೆಯ ಲೆಕ್ಕವನ್ನು ಗಣನೆಯಲ್ಲಿಟ್ಟುಕೊಂಡು ಪ್ರಸಕ್ತ ಸಾಲಿನ ಮಾರ್ಚ್ ವರೆಗೆ 93 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಇಟ್ಟುಕೊಂಡಿದೆ. ಕಳೆದ ಸಾಲಿನಲ್ಲಿ ಇದು 78.89 ಕೋಟಿ ರೂಪಾಯಿ ಆಗಿತ್ತು.
ಇನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಬಹುದೊಡ್ಡ ಆದಾಯದ ಮೂಲವೆಂದರೆ ಅದು ಆಸ್ತಿ ತೆರಿಗೆ. ಇದರಲ್ಲಿ ಈ ಬಾರಿ ಹೆಚ್ಚಳ ಕಂಡಿರೋ ಪಾಲಿಕೆ ಉಳಿದ ಆದಾಯಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಮತ್ತು ಮುಕ್ತಾಯ ಪ್ರಮಾಣ ಪತ್ರ ನೀಡುವ ಶಾಖೆಯು 10 ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಇಟ್ಟುಕೊಂಡಿದೆ.
ಡಿಸೆಂಬರ್ ಅಂತ್ಯಕ್ಕೆ 8.3 ಕೋಟಿ ರೂಪಾಯಿಯನ್ನು ಮಾತ್ರ ಅದು ಸಂಗ್ರಹಿಸಲು ಸಾಧ್ಯವಾಗಿದೆ. ಜಾಹಿರಾತು ಕರ 1.45 ಬರಬೇಕಿತ್ತು. ಆದರೆ ಕೊರೊನಾ ಹಾವಳಿಯಿಂದಾಗಿ ಅದು ಕೇವಲ 15.64 ಲಕ್ಷ ಬಂದಿದೆ. ಪಾಲಿಕೆಯ ಒಡೆತನದ ವಾಣಿಜ್ಯ ಮಳಿಗೆಯಿಂದ 6.10 ಕೋಟಿ ರೂಪಾಯಿ ಬರಬೇಕಿದ್ದು, ಡಿಸೆಂಬರ್ ಅಂತ್ಯಕ್ಕೆ ಅದು 2.78 ಕೋಟಿ ರೂಪಾಯಿ ಮಾತ್ರ ಬಂದಿದೆ. ಟ್ರೇಡ್ ಲೈಸೆನ್ಸ್ ನಲ್ಲಿ 1.84 ಗುರಿ ಇದ್ದು, ಇದುವರೆಗೂ ಅದು 1.20 ಕೋಟಿ ರೂಪಾಯಿ ಮಾತ್ರ ಸಂಗ್ರಹವಾಗಿದೆ.
ತೆರಿಗೆ ಏರಿಸಿದ್ದಕ್ಕಷ್ಟೇ ಆದಾಯ ಹೆಚ್ಚಳವಾಗಿಲ್ಲ..
ಇಷ್ಟೊಂದು ತೆರಿಗೆ ಸಂಗ್ರಹವಾಗಿದ್ದಕ್ಕೆ ಕೇವಲ ಆಸ್ತಿ ತೆರಿಗೆ ಹೆಚ್ಚಳವಾಗಿದ್ದಷ್ಟೇ ಕಾರಣವಲ್ಲ ಬದಲಿಗೆ ಇದರೊಂದಿಗೆ ಅನೇಕ ಸಂಗತಿಗಳು ಸೇರಿವೆ ಎನ್ನುತ್ತಾರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್.
ಹಿಂಬಾಕಿ 14 ಕೋಟಿ ರೂಪಾಯಿ ಸೇರಿ 2020-21 ನೇ ಸಾಲಿನ ಆಸ್ತಿ ತೆರಿಗೆ ಗುರಿ 93 ಕೋಟಿ ರೂಪಾಯಿ ಆಗಿರುತ್ತದೆ. ಹೊರಗೆ ಉಳಿದಿದ್ದ ಬಹಳಷ್ಟು ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದಿರುವುದು ಕೂಡ ಈ ಹೆಚ್ಚಳಕ್ಕೆ ಕಾರಣ.
ಇನ್ನು ಪಾಲಿಕೆ ಸಿಬ್ಬಂದಿ ಕೂಡ ಸಾಕಷ್ಟು ಮುತುವರ್ಜಿ ವಹಿಸಿ, ಈ ಕೆಲಸವನ್ನು ಮಾಡುತ್ತಿದ್ದಾರೆ. ಅದರೊಂದಿಗೆ ಸಾರ್ವಜನಿಕರ ಸಹಕಾರ ಕೂಡ ಸಾಕಷ್ಟಿದೆ. ತೆರಿಗೆಯನ್ನು ಸರಿಯಾಗಿ ಕಟ್ಟುವುದರಿಂದ ಅದು ಮರಳಿ ಸಾರ್ವಜನಿಕರ ಕೆಲಸಕ್ಕೆ ಉಪಯೋಗವಾಗುತ್ತದೆ. ಇದನ್ನು ಅವಳಿ ನಗರದ ಜನರು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಇದು ಒಟ್ಟಾರೆಯಾಗಿ ಅವಳಿ ನಗರದ ಅಭಿವೃದ್ಧಿಗೆ ವರದಾನವಾಗಲಿದೆ ಎನ್ನುತ್ತಾರೆ.