ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಬೆಳಗ್ಗಿನ ತಿಂಡಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಇಡ್ಲಿ, ದೋಸೆಗೆ ವಿಶೇಷ ಸ್ಥಾನ. ತಮಿಳುನಾಡು, ಕರ್ನಾಟಕ,ಕೇರಳ, ಆಂಧ್ರ ಪ್ರದೇಶ ಎಲ್ಲೇ ಹೋದರೂ ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿಯಂತೂ ಇದ್ದೇ ಇರುತ್ತದೆ. ತಯಾರಿಸಲು ಸುಲಭ ಮತ್ತು ಬೇಗನೆ ಜೀರ್ಣವಾಗುವ ಆಹಾರ ಇಡ್ಲಿ. ಅಷ್ಟೇ ಯಾಕೆ ಮಾರ್ಚ್ 30 ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಇಡ್ಲಿಗಳಲ್ಲಿ ಮಲ್ಲಿಗೆ ಇಡ್ಲಿ, ಮಸಾಲೆ ಇಡ್ಲಿ, ತಟ್ಟೆ ಇಡ್ಲಿ, ಶ್ಯಾವಿಗೆ ಇಡ್ಲಿ, ಸಾಬುದಾನ ಇಡ್ಲಿ, ರವೆ ಇಡ್ಲಿ ಹೀಗೆ ಹಲವಾರು ವಿಧಗಳಿವೆ. ಅದರಲ್ಲೂ ರವೆ ಇಡ್ಲಿಗೂ 2ನೇ ಮಹಾಯುದ್ಧಕ್ಕೂ ಸಂಬಂಧ ಇದೆ ಎಂದರೆ ನೀವು ನಂಬಲೇ ಬೇಕು. ಈ ಜನಪ್ರಿಯ ಉಪಾಹಾರ ಖಾದ್ಯವನ್ನು ನೂರು ವರ್ಷಗಳ ಹಿಂದೆ ಬೆಂಗಳೂರಿನ ಐಕಾನಿಕ್ ಮಾವಳ್ಳಿ ಟಿಫಿನ್ ರೂಮ್ (MTR)ನಲ್ಲಿ ಮಾಡಲಾಗಿತ್ತು. ಎಂಟಿಆರ್ ಎಂದು ಪ್ರಸಿದ್ಧವಾಗಿರುವ ಮಾವಳ್ಳಿ ಟಿಫಿನ್ ರೂಮ್ ಅನ್ನು ಪರಂಪಳ್ಳಿ ಯಜ್ಞನಾರಾಯಣ ಮಯ್ಯಾ ಮತ್ತು ಅವರ ಸಹೋದರರು 1924 ರಲ್ಲಿ ಸ್ಥಾಪಿಸಿದರು. ಇಲ್ಲಿ ರವಾ ಇಡ್ಲಿ ತಯಾರಾಗಿದ್ದು ಹೇಗೆ? ಅದರ ಇತಿಹಾಸವೇನು ಎಂಬುದನ್ನು ನೋಡೋಣ. ರವಾ ಇಡ್ಲಿ ಅಥವಾ ರವೆ ಇಡ್ಲಿ ಬೆಂಗಳೂರಿನಲ್ಲಿ ಬೇಡಿಕೆಯ ತಿಂಡಿಗಳಲ್ಲೊಂದು. ರವೆ ಇಡ್ಲಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಹೆಸರೇ ಸೂಚಿಸುವಂತೆ ಸಾಮಾನ್ಯ ಇಡ್ಲಿಗಿಂತ ಭಿನ್ನವಾಗಿರುವ ಈ ಇಡ್ಲಿಯನ್ನು ರವೆಯಿಂದ ತಯಾರಿಸಲಾಗುತ್ತದೆ. ಇದು ಸಾಮಾನ್ಯ ಅಕ್ಕಿಯಿಂದ ತಯಾರಿಸಿದ ಇಡ್ಲಿಗೆ ಹೋಲಿಸಿದರೆ ಆರೋಗ್ಯಕರವಾದುದು. 2ನೇ ಮಹಾಯುದ್ಧದ ಸಮಯದಲ್ಲಿ, ಉಪ-ಖಂಡದಲ್ಲಿ ಅತಿದೊಡ್ಡ ಅಕ್ಕಿ ಉತ್ಪಾದಕ ಬರ್ಮಾದ ಮೇಲೆ ಜಪಾನ್ ಆಕ್ರಮಣ ಮಾಡಿತ್ತು. ಆಗಲೇ ಅಕ್ಕಿಗೆ ಕೊರತೆ ಆಗಿದ್ದು. ಈ...