ಬೆಂಗಳೂರು: ದೇಶದಲ್ಲಿ ಲಾಕ್ಡೌನ್ ರಿಲೀಫ್ ಸಿಕ್ಮೇಲೆ ಒಂದೊಂದೇ ಚಟುವಟಿಕೆಗಳ ಗರಿ ಬಿಚ್ಚುತ್ತಿದೆ. ದಿಗ್ಬಂಧನದಿಂದ ಹೊರ ಬಂದಿರೋ ದೇಶವಾಸಿಗಳು ಎಲ್ಲೆಡೆ ಹ್ಯಾಪಿಯಾಗಿ ಓಡಾಡ್ತಿದ್ದಾರೆ. ಆದ್ರೆ, ವಿಮಾನದಲ್ಲಿ ಸಂಚರಿಸೋ ಟೈಮ್ ಯಾವಾಗ ಬರುತ್ತಪ್ಪಾ ಅಂತ ಎಲ್ರೂ ಕಣ್ಣರಳಸಿ ನೋಡ್ತಿದ್ರು. ಆದ್ರೀಗ ಆ ಶುಭದಿನ ಬಂದೇ ಬಿಟ್ಟಿದೆ. ದೇಶಾದ್ಯಂತ ಇವತ್ತಿನಿಂದಲೇ ಲೋಹದ ಹಕ್ಕಿಗಳು ಆಗಸದಲ್ಲಿ ರೆಕ್ಕೆ ಬಿಚ್ಚಿ ಹಾರಲಿವೆ.
ಇಂದಿನಿಂದಲೇ ದೇಶೀಯ ವಿಮಾನಗಳ ಹಾರಾಟ..!
ಯೆಸ್.. ದೇಶದಲ್ಲಿ ಲಾಕ್ಡೌನ್ ಬಳಿಕ ಮೊದಲ ಬಾರಿಗೆ ದೇಶೀಯ ನಾಗರಿಕ ವಿಮಾನಯಾನ ಸೇವೆ ಆರಂಭವಾಗ್ತಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಿಮಾನಗಳು ಟೇಕಾಫ್ ಆಗಲಿದೆ. ಮಧ್ಯರಾತ್ರಿ 12 ಗಂಟೆಯಿಂದಲೇ ವಿಮಾನಗಳ ಹಾರಾಟ ಸ್ಟಾರ್ಟ್ ಆಗಿದೆ. ಇಂದಿನಿಂದ ಪ್ರತಿನಿತ್ಯ 215 ವಿಮಾನಗಳು ದೇಶಾದ್ಯಂತ ಓಡಾಡಲಿವೆ. ಶೇಕಡ 47ರಷ್ಟು ಇಂಡಿಗೋ ವಿಮಾನ, ಶೇಕಡ 16ರಷ್ಟು ಸ್ಪೈಸ್ ಜೆಟ್, ಏರ್ ಏಷಿಯಾ ಫ್ಲೈಟ್ಗಳು ಸಂಚಾರ ನಡೆಸಲಿವೆ. ನಾಗರಿಕ ವಿಮಾನಯಾನ ಸಚಿವಾಲಯವು ತನ್ನ ಎಂದಿನ ವೇಳಾಪಟ್ಟಿಯ ಶೇಕಡ 32ರಷ್ಟು ವಿಮಾನ ಸಂಚಾರಕ್ಕೆ ಅನುವು ನೀಡಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಬೆಂಗಳೂರಿನಿಂದ ಮುಂಬೈಗೆ ಹಾರಲಿದೆ ಮೊದಲ ಫ್ಲೈಟ್..!
ಇನ್ನು, ಸಿಲಿಕಾನ್ ಸಿಟಿ ಬೆಂಗಳೂರಿನಿಂದ್ಲೂ ಸಾಕಷ್ಟು ವಿಮಾನಗಳು ಬೇರೆ ರಾಜ್ಯದತ್ತ ಟೇಕಾಫ್ ಆಗಲಿವೆ. ಅಲ್ಲದೇ ಬೆಂಗಳೂರಿನಿಂದ ಮುಂಬೈಗೆ ಮೊದಲ ವಿಮಾನ ಹಾರಾಟ ಆರಂಭಿಸಲಿದೆ. ಇನ್ನು, ಚೆನ್ನೈನಿಂದ ಬೆಂಗಳೂರಿಗೆ ಮೊದಲ ವಿಮಾನ ಬೆಳಗ್ಗೆ 7.30ಕ್ಕೆ ಆಗಮಿಸಲಿದೆ. ಎಲ್ಲಾ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಹಾಗೂ 7 ದಿನಗಳ ಕಾಲ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡೋಕೆ ಪ್ಲ್ಯಾನ್ ಮಾಡಲಾಗಿದೆ. ಹಾಗಿದ್ರೆ, ಬೆಂಗಳೂರಿನಿಂದ ಹೊರ ರಾಜ್ಯಗಳಿಗೆ ಪ್ರಯಾಣ ದರ ಎಷ್ಟು ನಿಗದಿ ಮಾಡಲಾಗಿದೆ ಅನ್ನೋದನ್ನ ನೋಡೋಣ ಬನ್ನಿ.
‘ಯಾನ’ಕ್ಕೆ ಟಿಕೆಟ್ ಎಷ್ಟು..?
ಬೆಂಗಳೂರು- ಚೆನ್ನೈ -₹2000ದಿಂದ ₹6000
ಬೆಂಗಳೂರು- ಮಂಗಳೂರು -₹2000 ದಿಂದ ₹6000
ಬೆಂಗಳೂರು- ಹೈದರಾಬಾದ್ -₹2500 ದಿಂದ ₹7500
ಬೆಂಗಳೂರು- ಕ್ಯಾಲಿಕಟ್ -₹2500 ದಿಂದ ₹7500
ಬೆಂಗಳೂರು- ತಿರುವನಂತಪುರಂ -₹2500 ದಿಂದ ₹7500
ಬೆಂಗಳೂರು- ಮುಂಬೈ -₹3000 ದಿಂದ ₹9000
ಬೆಂಗಳೂರು- ಪುಣೆ -₹3000 ದಿಂದ ₹9000
ಬೆಂಗಳೂರು- ವಿಶಾಖಪಟ್ಟಣಂ -₹3000 ದಿಂದ ₹9000
ಬೆಂಗಳೂರು- ಗೋವಾ -₹3000 ದಿಂದ ₹9000
ಬೆಂಗಳೂರು- ದೆಹಲಿ -₹4500 ದಿಂದ ₹13000
ಬೆಂಗಳೂರು- ಕೋಲ್ಕತ್ತಾ -₹4500 ದಿಂದ ₹13000
‘ಹಾರಾಟ’ಕ್ಕೆ ರೂಲ್ಸ್ ಫಿಕ್ಸ್..!
ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಕೇವಲ ಒಂದು ಹ್ಯಾಂಡ್ ಬ್ಯಾಗ್, ಒಂದು ಲಗ್ಗೇಜ್ಗೆ ಅವಕಾಶ ಕೊಡಲಾಗಿದೆ. ವಿಮಾನ ಹೊರಡುವ 2 ಗಂಟೆ ಮುನ್ನ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಿರಲೇಬೇಕು. ಆರೋಗ್ಯ ಸೇತು ಆ್ಯಪ್ನಲ್ಲಿ ಗ್ರೀನ್ ತೋರಿಸದಿದ್ದರೆ ಪ್ರಯಾಣಿಸಲು ಅವಕಾಶ ಕೊಡಲ್ಲ. ಆದ್ರೆ, 14 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯವಲ್ಲ ಅಂತಾ ಕೇಂದ್ರ ಸರ್ಕಾರ ಹೇಳಿದೆ. ಇನ್ನು, ಪ್ರಯಾಣಿಕರು ಟರ್ಮಿನಲ್ಗೆ ಪ್ರವೇಶಿಸುವ ಮುನ್ನ ಲಗ್ಗೇಜ್ ಸ್ಯಾನಿಟೈಸ್ ಮಾಡಿಸಬೇಕು ಅಂತಾ ಹೇಳಿದೆ.
ಮೈಸೂರು, ಹುಬ್ಬಳ್ಳಿ ಕಲಬುರಗಿಯಲ್ಲೂ ಫ್ಲೈಟ್ ಸೇವೆ..!
ಇನ್ನು, ದೇಶಿಯವ ವಿಮಾನಗಳು ಒಂದೊಂದು ಹಾರೋಕೆ ಸಜ್ಜಾಗಿದ್ರೆ, ಬೆಳಗಾವಿ ಏರ್ಪೋರ್ಟ್ನಿಂದ ಇಂದು ಒಂದೇ ದಿನ ಹದಿಮೂರು ವಿಮಾನಗಳ ಹಾರಾಟ ನಡೆಸಲಿವೆ. ಬೆಳಗಾವಿಯಿಂದ ಬೆಂಗಳೂರು, ಮೈಸೂರು, ಮುಂಬೈ, ಅಹಮದಾಬಾದ್, ಪುಣೆಗೆ ವಿಮಾಗಳು ತೆರಳಲಿವೆ. ಇನ್ನು, ಕಲಬುರಗಿ ಏರ್ಪೋರ್ಟ್ನಿಂದ ವಿಮಾನಯಾನ ಸೇವೆ ಸ್ಟಾರ್ಟ್ ಆಗಲಿದ್ದು, ಬೆಂಗಳೂರಿನಿಂದ ಕಲಬುರಗಿಗೆ ಮೊದಲ ವಿಮಾನ ಹೆಜ್ಜೆಯೂರಲಿದೆ.
ಬೆಳಗ್ಗೆ 10.20ಕ್ಕೆ ಮತ್ತೆ ಬೆಂಗಳೂರಿಗೆ ಸ್ಟಾರ್ ಏರ್ವೇಸ್ ಫ್ಲೈಟ್ ತೆರಳಲಿದೆ. ಇತ್ತ, ಮೈಸೂರು, ಹುಬ್ಬಳ್ಳಿಯಲ್ಲೂ ವಿಮಾನಗಳ ಹಾರಟ ಇಂದಿನಿಂದಲೇ ಸ್ಟಾರ್ಟ್ ಆಗಲಿದೆ.
ಇನ್ನು, ಜೂನ್ 1ರಿಂದ ದೇಶದಲ್ಲಿ ಹಂತಹಂತವಾಗಿ ರೈಲು ಪ್ರಯಾಣ ಹೆಚ್ಚಿಸಲು ರೈಲ್ವೆ ಇಲಾಖೆ ಪ್ಲ್ಯಾನ್ ಮಾಡಿದೆ. ಇದಕ್ಕೆ ಪೂರ್ವ ಸಿದ್ಧತೆಯಂತೆ ಈಗಾಗಲೇ ರೈಲ್ವೆ ಸೇವಾ ಕೇಂದ್ರಗಳಲ್ಲಿ ಟಿಕೆಟ್ ಬುಕಿಂಗ್ ಶುರುವಾಗಿದೆ. ಇಷ್ಟು ದಿನ ಕೇವಲ ಆನ್ಲೈನ್ನಲ್ಲಿ ಮಾತ್ರ ಟಿಕೆಟ್ ಬುಕಿಂಗ್ಗೆ ಅವಕಾಶವಿತ್ತು. ಇನ್ನು 2-3ದಿನಗಳಲ್ಲಿ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್ಗಳಲ್ಲೂ ಬುಕಿಂಗ್ಗೆ ಸ್ಟಾರ್ಟ್ ಆಗಲಿದೆಯಂತೆ.
ಒಟ್ನಲ್ಲಿ, ಲಾಕ್ಡೌನ್ ರಿಲೀಫ್ ಆದಾಗಿನಿಂದ ಅಂತೂ ದೇಶದಲ್ಲಿ ಕೊರೊನಾ ಕೇಕೆ ಹಾಕ್ತಿದೆ. ಕೊರೊನಾ ತಾಂಡವದ ನಡುವೆ ದೇಶಿಯ ವಿಮಾನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು ದೇಶಾದ್ಯಂತ ಫ್ಲೈಟ್ಗಳು ಸೇವೆ ನೀಡೋಕೆ ಸಜ್ಜಾಗಿವೆ. ಅದೇನೆ ಇರ್ಲಿ, ದೇಶಿಯ ವಿಮಾನಯಾನ ಸ್ಟಾರ್ಟ್ ಆದ್ಮೇಲೆ ಪ್ರಯಾಣಿಕರು ಯಾವ ಮಟ್ಟಿಗೆ ರೂಲ್ಸ್ ಫಾಲೋ ಮಾಡ್ತಾರೆ ಅನ್ನೋದು ಕಾದು ನೋಡ್ಬೇಕು.
Published On - 6:57 am, Mon, 25 May 20