ಉತ್ತರ ಕನ್ನಡ, ಮೇ 18: ಎವರೆಸ್ಟ್ ಚಿಕನ್ ಮಸಾಲಾದಲ್ಲಿ (Everest Chicken Masala) ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಬಳಸದಂತೆ ಅಧಿಕಾರಿಗಳಿಂದ ಉತ್ತರ ಕನ್ನಡ (Uttar Kannada) ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಸೂಚನೆ ನೀಡಿದ್ದಾರೆ. ಮೆಣಸಿನಪುಡಿಗೆ ಬಳಸುವ ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಹೆಚ್ಚಾಗಿದೆ. ಮಸಲಾ ಪದಾರ್ಥದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಕೇವಲ ಶೇ.0.01ರಷ್ಟು ಇರಬೇಕು. ಆದರೆ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಶೇ.3.93ರಷ್ಟು ಪ್ರಮಾಣದಲ್ಲಿದೆ. ಇಷ್ಟೊಂದು ಪ್ರಮಾಣದಲ್ಲಿ ಎಥಿಲಿನ್ ಆಕ್ಸೈಡ್ ಬಳಕೆ ಹಾನಿಕಾರಕ. ಇದು ಆರೋಗ್ಯದ ಮೇಲೆ ಪರಿಣಾಮ ಆಗಿಯೇ ಆಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಹೇಳಿದರು.
ಎವರೆಸ್ಟ್ ಚಿಕನ್ ಮಸಾಲಾ ಬಗ್ಗೆ ನಮಗೆ ಅನುಮಾನ ಇದ್ದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಪರೀಕ್ಷೆ ಮಾಡಿದೆವು. ಆಗ ಶೇ.3.92ರಷ್ಟು ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ಇರುವುದು ತಿಳಿಯಿತು. ಹೀಗಾಗಿ ಇದನ್ನು ಸಾರ್ವಜನಿಕರು ಬಳಸಬಾರು ಎಂದರು.
ಇದನ್ನೂ ಓದಿ: ಉಪ್ಪು ಮತ್ತು ಚಾಟ್ ಮಸಾಲಾದೊಂದಿಗೆ ಹಣ್ಣುಗಳನ್ನು ಸೇವಿಸುತ್ತೀರಾ? ಹಾಗಾದರೆ ತಜ್ಞರ ಮಾತನ್ನೊಮ್ಮೆ ಕೇಳಿ
ಎವರೆಸ್ಟ್ ಮಸಾಲಾ ಕಂಪನಿಗೆ ಈಗಾಗಲೇ ನೋಟಿಸ್ ಕಳುಹಿಸಿದ್ದೇವೆ. ಎವರೆಸ್ಟ್ ಚಿಕನ್ ಮಸಾಲಾ ಪಾಕೆಟ್ ಸರಬರಾಜು ನಿಲ್ಲಿಸಬೇಕು. ಈಗಾಗಲೇ ಅಂಗಡಿಗಳಿಗೆ ಪೂರೈಸಿದ್ದರೇ ಹಿಂಪಡೆಯುವಂತೆ ಸೂಚಿಸಿದ್ದೇವೆ. ಕೇವಲ ಕರ್ನಾಟಕವಲ್ಲ ದೇಶಾದ್ಯಂತ ಪೂರೈಸಿದ್ದರೆ ಹಿಂಪಡೆಯಲು ಸೂಚನೆ ನೀಡಿದ್ದೇವೆ. ಎವರೆಸ್ಟ್ ಚಿಕನ್ ಮಸಾಲಾ ಖರೀದಿಸಿದ್ದರೆ ಜನರು ಅಂಗಡಿಗಳಿಗೆ ವಾಪಸ್ ನೀಡಿ. ಈಗಾಗಲೆ ಮಸಾಲಾ ಪೌಡರ್ ಅನ್ನು ಹಿಂಪಡೆಯುವ ಕೆಲಸ ಕಂಪನಿ ಮಾಡುತ್ತಿದೆ. ಎವರೆಸ್ಟ್ ಚಿಕನ್ ಮಸಾಲಾ ಕಂಪನಿ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ ಎಂದು ಹೇಳಿದರು.
ಎವರೆಸ್ಟ್ ಚಿಕನ್ ಮಸಾಲಾ ಮಾತ್ರವಲ್ಲದೆ, 15 ತರಹದ ಮಸಾಲಾ ಪೌಡರ್ಗಳನ್ನು ತಪಾಸಣೆಗೆ ಕಳುಹಿಸಿದ್ದೇವೆ. ಆದರೆ ಎಂಟಿಆರ್ ಮಸಾಲಾ ಇದುವರೆಗೂ ಪರೀಕ್ಷೆ ಮಾಡಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ