IPS ರವೀಂದ್ರನಾಥ್ ​ರಾಜೀನಾಮೆ, ಸುನೀಲಕುಮಾರ್ ಪ್ರಮೋಶನ್! ಅಸಲಿಯತ್ತೇನು?

ಎಡಿಜಿಪಿ ಡಾ. ಪಿ. ರವೀಂದ್ರನಾಥ್​ ಬುಧವಾರ ರಾತ್ರಿ ದಿಢೀರ್ ಆಗಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಹೋಗಿ ರಾಜೀನಾಮೆ ನೀಡಿದ ಸುದ್ದಿ ನಾಗರಿಕ ಸೇವಾ ವಲಯದಲ್ಲಿ (civil service group) ಸಂಚಲನ ಮೂಡಿಸಿದ್ದರಾದರೂ, ಈ ಘಟನೆಯ ಹಿಂದಿನ ಬೆಳವಣಿಗೆ ತುಂಬಾ ಕುತೂಹಲಕಾರಿಯಾಗಿದೆ. ಡಾ. ರವೀಂದ್ರನಾಥ್ ತಮ್ಮ ರಾಜೀನಾಮೆಯಲ್ಲಿ ಹೇಳಿದ್ದೇನು? ನಿನ್ನೆ ಸಂಜೆ ರಾಜ್ಯ ಸರಕಾರ ಇಬ್ಬರು ಎಡಿಜಿಪಿ ಅಧಿಕಾರಿಗಳಾದ ಅಮರ್ ಕುಮಾರ್ ಪಾಂಡೆ ಮತ್ತು ಟಿ. ಸುನೀಲ್ ಕುಮಾರ್ ಅವರಿಗೆ ಪದೋನ್ನತಿ ನೀಡಿ ಪೊಲೀಸ್ ಮಹಾ ನಿರ್ದೇಶಕರನ್ನಾಗಿ […]

IPS ರವೀಂದ್ರನಾಥ್ ​ರಾಜೀನಾಮೆ, ಸುನೀಲಕುಮಾರ್ ಪ್ರಮೋಶನ್! ಅಸಲಿಯತ್ತೇನು?
Edited By:

Updated on: Oct 30, 2020 | 9:46 AM

ಎಡಿಜಿಪಿ ಡಾ. ಪಿ. ರವೀಂದ್ರನಾಥ್​ ಬುಧವಾರ ರಾತ್ರಿ ದಿಢೀರ್ ಆಗಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ಹೋಗಿ ರಾಜೀನಾಮೆ ನೀಡಿದ ಸುದ್ದಿ ನಾಗರಿಕ ಸೇವಾ ವಲಯದಲ್ಲಿ (civil service group) ಸಂಚಲನ ಮೂಡಿಸಿದ್ದರಾದರೂ, ಈ ಘಟನೆಯ ಹಿಂದಿನ ಬೆಳವಣಿಗೆ ತುಂಬಾ ಕುತೂಹಲಕಾರಿಯಾಗಿದೆ.

ಡಾ. ರವೀಂದ್ರನಾಥ್ ತಮ್ಮ ರಾಜೀನಾಮೆಯಲ್ಲಿ ಹೇಳಿದ್ದೇನು?
ನಿನ್ನೆ ಸಂಜೆ ರಾಜ್ಯ ಸರಕಾರ ಇಬ್ಬರು ಎಡಿಜಿಪಿ ಅಧಿಕಾರಿಗಳಾದ ಅಮರ್ ಕುಮಾರ್ ಪಾಂಡೆ ಮತ್ತು ಟಿ. ಸುನೀಲ್ ಕುಮಾರ್ ಅವರಿಗೆ ಪದೋನ್ನತಿ ನೀಡಿ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ಆದೇಶ ಹೊರಡಿಸಿತ್ತು. ಇದಾಗಿ ಮೂರು ತಾಸಿನ ನಂತರ, ಜ್ಯೇಷ್ಠತಾ ಪಟ್ಟಿಯಲ್ಲಿ ಸುನೀಲ್ ಕುಮಾರ್ ಅವರಿಗಿಂತ ಹಿರಿಯರಾದ ಡಾ. ರವೀಂದ್ರನಾಥ ತಮ್ಮ ಬೇಸರವನ್ನು ಹೊರಹಾಕಿದ್ದರು.

ಅಷ್ಟೇ ಅಲ್ಲ, ಡಿಜಿ ಕಚೇರಿಗೆ ಹೋಗಿ ಅಲ್ಲಿ ರಾತ್ರಿ ಪಾಳಿಯಲ್ಲಿದ್ದ ಅಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರ ನೀಡಿ ಹೋಗಿದ್ದರು. ಅವರು ತಮ್ಮ ರಾಜೀನಾಮೆಯಲ್ಲಿ ಯಾರ ಹೆಸರನ್ನು ಬರೆಯದಿದ್ದರೂ, ಐಪಿಎಸ್ ಸಹೋದ್ಯೋಗಿಗಳ ಬಗ್ಗೆ ತಮ್ಮ ಅಸಹನೆಯನ್ನು ಪ್ರಕಟಿಸಿದ್ದರು. ಡಾ ರವೀಂದ್ರನಾಥ ಹೇಳಿದಂತೆ ಅವರು ಕಳೆದ ನಾಲ್ಕು ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಈ ಕುರಿತು CAT, ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಹೋರಾಡಿ ಗೆದ್ದಿರುವುದಾಗಿ ಅವರು ಆ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಅಕ್ಟೋಬರ್ 15 ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ತನಗೆ ನ್ಯಾಯ ಸಿಕ್ಕಿದ್ದಾಗಿ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಆದರೆ ಕೆಲವು ವ್ಯಕ್ತಿಗಳು ನನಗೆ ಆ ನ್ಯಾಯ ಸಿಗುವುದನ್ನು ತಡೆದಿದ್ದಾರೆ ಎಂದು ಆ ಪತ್ರದಲ್ಲಿ ಹೇಳಿದ್ದಾರೆ.

ನಿನ್ನೆಯೇ ರಾಜೀನಾಮೆ ಏಕೆ?
ಇದಕ್ಕೊಂದು ಹಿನ್ನೆಲೆ ಇದೆ. ರಾಜ್ಯದಲ್ಲಿ ಅಧಿಕೃತವಾಗಿ ಆರು ಡಿಜಿ ಕೇಡರ್ ಪೋಸ್ಟ್​​ಗಳು ಇವೆ. ಇವುಗಳಲ್ಲಿ ಮೂರು ಕೇಡರ್ ಡಿಜಿ ಪೋಸ್ಟ್​ ಎಂದು ಇನ್ನುಳಿದ ಮೂರನ್ನು ಎಕ್ಸ್​-ಕೇಡರ್ ಡಿಜಿ ಪೋಸ್ಟ್​ ಎಂದು ವರ್ಗೀಕರಿಸಲಾಗಿದೆ. ನಿನ್ನೆ ಪ್ರಮೋಶನ್ ನೀಡುವ ಮೊದಲು ಕರ್ನಾಟಕದಲ್ಲಿ ಆರು ಜನ ಡಿಜಿ ಕೇಡರ್ ಅಧಿಕಾರಿಗಳು ಇದ್ದರು. ಅವರುಗಳೆಂದರೆ, ಪ್ರವೀಣ್ ಸೂದ್, ಎ.ಎಂ. ಪ್ರಸಾದ್, ಪಿ. ಎಸ್. ಸಂಧು, ಪಿ.ಕೆ. ಗಾರ್ಗ್​, ಅಲೋಕ್ ಮೋಹನ್ ಮತ್ತು ಡಾ. ಆರ್.ಪಿ. ಶರ್ಮಾ.

ಇದರಲ್ಲಿ ಸಂಧು ಮತ್ತು ಗಾರ್ಗ್​​ ಅವರು ರಜೆಯಲ್ಲಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ. ಆ ಪೋಸ್ಟ್​ಗಳನ್ನು ಖಾಲಿಯಿವೆ ಎಂದು ಪರಿಗಣಿಸಿ ಇಬ್ಬರು ಎಡಿಜಿಪಿ ಅಧಿಕಾರಿಗಳಾದ ಅಮರ್ ಕುಮಾರ್ ಪಾಂಡೆ ಮತ್ತು ಟಿ. ಸುನೀಲ್ ಕುಮಾರ್ ಅವರಿಗೆ ಪದೋನ್ನತಿ ನೀಡಲು ಸರಕಾರ ನಿರ್ಧರಿಸಿತು. ಸುನಿಲ್​ ಕುಮಾರ್​ ನಿವೃತ್ತಿ ಹೊಂದಲು ಎರಡೇ ದಿನ ಇರುವಾಗ ಅವರಿಗೆ ಪ್ರಮೋಶನ್​ ನೀಡಿರುವುದೇ ಅನೇಕ ಸಂದೇಹಗಳನ್ನು ಹುಟ್ಟುಹಾಕಿದೆ.

ಆದರೆ, ಆ ಸಂದರ್ಭದಲ್ಲಿ ಡಾ. ರವೀಂದ್ರನಾಥ ಅವರ ಸೇವಾ ಹಿರಿತನವನ್ನು ಬಿಟ್ಟಿದ್ದೇಕೆ ಎಂಬುದು ಯಕ್ಷಪ್ರಶ್ನೆ. ಅಷ್ಟೇ ಅಲ್ಲ, ರಜೆ ಮೇಲಿರುವ ಅಧಿಕಾರಿಗಳ ಹುದ್ದೆಯನ್ನು ಖಾಲಿ ಹುದ್ದೆ ಎಂದು ಸರಕಾರ ಹೇಗೆ ಪರಿಗಣಿಸಲು ಸಾಧ್ಯ? ಇದು ಬಹಳ ಕುತೂಹಲಕಾರಿ ರಹಸ್ಯವಾಗಿದೆ. ಒಂದು ಮೂಲಗಳ ಪ್ರಕಾರ, ಬಿಜೆಪಿಯ ಹಿರಿಯ ನಾಯಕರೊಬ್ಬರು ಸುನೀಲ್ ಕುಮಾರ್ ಪರವಾಗಿ ಲಾಬಿ ಮಾಡಿದ್ದರು ಎಂಬ ವಿಚಾರ ಈ ಹಿನ್ನೆಲೆಯಲ್ಲಿ ಬಹಳ ಮುಖ್ಯವೇ ಆಗುತ್ತದೆ.

ಇಬ್ಬರು ಹಿರಿಯ ಅಧಿಕಾರಿಗಳು ರಜೆ ಮೇಲೆ ತೆರಳಿದಾಗ ಆ ಹುದ್ದೆಯನ್ನೇ ಖಾಲಿಯೆಂದು ತೋರಿಸಿ ಇಬ್ಬರು ಕಿರಿಯ ಅಧಿಕಾರಿಗಳಿಗೆ ಪ್ರಮೋಶನ್ ನೀಡಿದಾಗ ಇನ್ನೊಂದು ಸಮಸ್ಯೆ ಉದ್ಭವವಾಗುತ್ತದೆ. ರಜೆ ಮೇಲೆ ಹೋದ ಅಧಿಕಾರಿಗಳು ಮತ್ತು ಹೊಸದಾಗಿ ನಿಯುಕ್ತಿಗೊಂಡ ಆಧಿಕಾರಿಗಳು ಇಬ್ಬರೂ ಸಂಬಳ ಪಡೆಯುತ್ತಾರೆ. ಇದು ಹೇಗೆ ಸಾಧ್ಯ?

ಇದೆಲ್ಲಕ್ಕಿಂತಲೂ ತನ್ನ ಮನಸ್ಸಿಗೆ ಬಂದಂತೆ ಸರಕಾರ ಹೇಗೆ ಹಿರಿಯ ಹುದ್ದೆ ಸೃಷ್ಟಿ ಮಾಡಲು ಸಾಧ್ಯ ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ. ಮತ್ತು ಇದನ್ನು ನೋಡಿದಾಗ ದಾಲ್ ಮೆ ಕುಚ್ ಕಾಲಾ ಹೈ ಎಂಬ ಹಿಂದಿ ಗಾದೆಯಂತೆ ಇಲ್ಲಿ ಕಣ್ಣಿಗೆ ಕಾಣಿಸದೇ ಇರುವ ಕೈ ತನ್ನ ಆಟ ಆಡಿದೆ ಮತ್ಎಂತು ಇಲ್ಲಿ ಏನೋ ಕಾನೂನಿಗೂ ಮೀರಿದ್ದು ನಡೆದಿದೆ ಎಂಬುದು ನಿಶ್ಚಿತವಾಗುತ್ತದೆ.

Published On - 6:57 pm, Thu, 29 October 20