ಗದಗ: ಸರ್ಕಾರಿ ಆಸ್ಪತ್ರೆ ಅಂದ್ರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಸರ್ಕಾರ ಕೂಡ ಬಡವರಿಗೆ ಒಳ್ಳೆಯ ಚಿಕಿತ್ಸೆ ನೀಡಲಿ ಅಂತ ಕೋಟಿ ಕೋಟಿ ಅನುದಾನ ನೀಡುತ್ತೆ. ಆದ್ರೆ ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿ ನಿನ್ನೆ ನಡೆದುಕೊಂಡ ರೀತಿ ಮಾತ್ರ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ತುರ್ತು ಚಿಕಿತ್ಸೆಗೆ ಅಂತಾ ಆಸ್ಪತ್ರೆಗೆ ಬಂದ ಆ ತಾಯಿ, ಮಗು ನರಳಾಟ ನೋಡಿ ಕೂಡ ಸುಮ್ಮನಿದ್ರೂ ಅಂದ್ರೆ ಅವರಿಗೆ ಮಾನವೀಯತೆ ಅನ್ನೋದೆ ಇಲ್ವಾ ಅನ್ನೋ ಪ್ರಶ್ನೆ ಹುಟ್ಟುತ್ತೆ.
ತಾಯಿ ದೇಹದ ತುಂಬೆಲ್ಲಾ ಸುಟ್ಟಿರೋ ಗಾಯ.. ಸುಟ್ಟ ಗಾಯದಿಂದ ನರಳಾಡುತ್ತಿರುವ ಮಗು.. ಌಂಬುಲೆನ್ಸ್‌ನಲ್ಲೂ ನರಳಾಟ.. ಸ್ಟ್ರೇಚ್ಚರ್ ಮೇಲೂ ಕಣ್ಣೀರು ಹಾಕುತ್ತಾ ನೋವಿನಿಂದ ನರಳಾಡುತ್ತಿರುವ ತಾಯಿ.
ಇವರ ಈ ಸ್ಥಿತಿಗೆ ಕಾರಣವಾಗಿದ್ದು ನಿನ್ನೆ ಮಧ್ಯಾಹ್ನ ಸಂಭವಿಸಿದ ಬೈಕ್ ಅಪಘಾತ. ಅಂದಹಾಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ರಸ್ತೆಯಲ್ಲಿ ನಾಗರಾಜ್ ಅನ್ನೋರು ತಮ್ಮ ಸಂಬಂಧಿ ಅಕ್ಕಮಹಾದೇವಿ ಹಾಗೂ ಆಕೆಯ ಮಗುವನ್ನು ಕರೆದುಕೊಂಡು ಬೈಕ್‌ನಲ್ಲಿ ಹೊರಟಿದ್ದಾರೆ. ಈ ವೇಳೆ ರಸ್ತೆ ಬದಿಯಲ್ಲಿ ಕಟ್ಟಿಗೆಗೆ ಹಚ್ಚಲಾಗಿದ್ದ ಬೆಂಕಿ ಧಗಧಗಿಸಿ ರಸ್ತೆ ಕಾಣದಷ್ಟು ಹೊಗೆ ಎದ್ದಿದೆ. ಹೀಗಿದ್ರೂ ಅದೇ ರಸ್ತೆಯಲ್ಲಿ ಸಾಗಿದ ಬೈಕ್ ಸ್ಕಿಡ್ ಆಗಿದೆ. ಬೈಕ್ ಸಮೇತ ಮೂವರು ಬೆಂಕಿಯೊಳಗೆ ಬಿದ್ದಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕೆ ಌಂಬುಲೆನ್ಸ್ ಬಂದಿದೆ. ತಾಯಿ, ಮಗುವನ್ನು ಕರೆದುಕೊಂಡು ಗದಗ ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದ್ರೆ ಆಸ್ಪತ್ರೆ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡದೆ ಸತಾಯಿಸಿದ್ದಾರೆ. ಡಾಕ್ಟರ್ ಇಲ್ಲದೇ ತಾಯಿ, ಮಗು ಇಬ್ಬರು ಆ್ಯಂಬುಲೆನ್ಸ್ನಲ್ಲೇ ನರಳಾಡಿದ್ದಾರೆ. ತಾಯಿ, ಮಗುವಿಗೆ ಚಿಕಿತ್ಸೆ ನೀಡಿ ಬೇಗ ಎಂದಿದ್ದಕ್ಕೆ ಸಂಬಂಧಿಕರಿಗೆ ವೈದ್ಯ ವಿದ್ಯಾರ್ಥಿಗಳು ಅವಾಜ್ ಹಾಕಿದ್ದಾರೆ. ಕೊನೆಗೆ ಸಂಬಂಧಿಕರೇ ತಾಯಿ ಮಗುವನ್ನ ಸ್ಟ್ರೆಚ್ಚರ್‌ನಲ್ಲಿ ಮಲಗಿಸಿ ತುರ್ತು ಚಿಕಿತ್ಸಾ ಘಟಕಕ್ಕೆ ಶಿಫ್ಟ್ ಮಾಡಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಸಂಬಂಧಿಕರು ಕಿಡಿಕಾರಿದ್ದಾರೆ.
ಇನ್ನು ಬೆಂಕಿ ದುರಂತದಲ್ಲಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದ್ರೆ ರಸ್ತೆ ಬದಿ ಬೆಂಕಿ ಇಟ್ಟವರು ಯಾರೂ ಅನ್ನೋದು ಇನ್ನೂ ಗೊತ್ತಿಲ್ಲ. ಆದ್ರೆ ಬೆಂಕಿಯಲ್ಲಿ ಬೆಂದು ಮೈ ತುಂಬಾ ಸುಟ್ಟ ಗಾಯಗಳಾಗಿದ್ರೂ ತುರ್ತು ಚಿಕಿತ್ಸೆ ನೀಡಿದೆ ಗದಗ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಮರೆತು ವರ್ತಿಸಿದಂತೂ ನಿಜಕ್ಕೂ ವಿಪರ್ಯಾಸ.