ಐಪಿಎಲ್ 2020 ಪ್ಲೇ ಆಫ್ ಚಿತ್ರಣ ಈ ವಾರ ಗೊಂದಲಮಯವಾಗಿದೆ

  • TV9 Web Team
  • Published On - 22:29 PM, 29 Oct 2020
ಐಪಿಎಲ್ 2020 ಪ್ಲೇ ಆಫ್ ಚಿತ್ರಣ ಈ ವಾರ ಗೊಂದಲಮಯವಾಗಿದೆ

ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಅವೃತ್ತಿಯ ಪ್ಲೇ ಆಫ್ ಸನ್ನಿವೇಶ ಕಳೆದ ವಾರ ಕಾಣುತ್ತಿದ್ದಷ್ಟು ಸ್ಪಷ್ಟವಾಗಿಲ್ಲ. ಕೆಲ ಅಚ್ಚರಿಯ ಫಲಿತಾಂಶಗಳಿಂದಾಗಿ ಚಿತ್ರಣ ಬದಲಾಗಿದೆ. ರವಿವಾರದಂದು ಚೆನೈ ಸೂಪರ್ ಕಿಂಗ್ಸ್​ಗೆ ಮತ್ತು ಬುಧವಾರದಂದು ಪಾಯಿಂಟ್ಸ್ ಟೇಬಲ್ ಲೀಡರ್ ಮುಂಬೈ ಇಂಡಿಯನ್ಸ್​ಗೆ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಂಚ ಸಂಕಷ್ಟಕ್ಕೆ ಸಿಲುಕಿದೆ.

ಇದುವರೆಗೆ 12 ಪಂದ್ಯಗಳನ್ನಾಡಿರುವ ವಿರಾಟ್ ಪಡೆ, 7ರಲ್ಲಿ ಗೆದ್ದು 14 ಅಂಕಗಳೊಂದಿಗೆ ಮುಂಬೈ ನಂತರದ ಸ್ಥಾನದಲ್ಲಿದೆ. ಅದಕ್ಕೆ ಉಳಿದಿರುವುದು 2ಪಂದ್ಯಗಳು; ಸನ್​ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅದು ಆಡಬೇಕಿದೆ. ಎರಡರಲ್ಲಿ ಒಂದರಲ್ಲಿ ಜಯಗಳಿಸಿದರೂ ಅದು ಪ್ಲೇ ಆಫ್ ಹಂತ ಅವಕಾಶ ಉಜ್ವಲವಾಗುತ್ತದೆ. ಒಂದು ಪಕ್ಷ ಎರಡೂ ಪಂದ್ಯಗಳನ್ನು ಗೆದ್ದರೆ 18 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆಯುತ್ತದೆ. ಆರ್​ಸಿಬಿ ಒಂದರಲ್ಲಿ ಮಾತ್ರ ಗೆದ್ದರೆ ಆಗ ನೆಟ್ ರನ್​ರೇಟ್ ಮೇಲೆ ಆತುಕೊಳ್ಳಬೇಕಾಗುವ ಪರಿಸ್ಥಿತಿ ಎದುರಾಗಬಹುದು.

ಮತ್ತೊಂದು ಸನ್ನಿವೇಶವಿದೆ, ಪ್ರಾಯಶ: ಆರ್​ಸಿಬಿ ಅಭಿಮಾನಿಗಳು ಅದನ್ನು ಯೋಚಿಸಲು ಇಷ್ಟಪಡಲಾರರು. ಉಳಿದೆರಡು ಪಂದ್ಯಗಳನ್ನೂ ಕೊಹ್ಲಿ ಪಡೆ ಸೋತಿದ್ದೇ ಆದರೆ ಅದು 14 ಅಂಕಗಳನ್ನು ಗಳಿಸುವ ಇತರ ಟೀಮುಗಳೊಂದಿಗೆ ಟೈ ಮಾಡಿಕೊಳ್ಳುವಂಥ ಸ್ಥಿತಿ ಉದ್ಭವಿಸುತ್ತದೆ. ಆಗಲೂ ಎನ್​ಆರ್​ಆರ್ ಚಿತ್ರಣ ಎದುರಾಗುತ್ತದೆ. ಸದ್ಯಕ್ಕೆ ಟೀಮಿನ ಎನ್​ಆರ್​ಆರ್ +0.048 ಇರುವುದರಿಂದ ತೊಂದರೆಯಾಗಲಿಕ್ಕಿಲ್ಲ. ಆದರೆ ಮುಂದಿನ ಪಂದ್ಯಗಳಲ್ಲಿ ಅದು ಸೋತರೂ 150ಕ್ಕಿಂತ ಜಾಸ್ತಿ ರನ್ ಗಳಿಸಿರಬೇಕಾಗುತ್ತದೆ.

ಡೆಲ್ಲಿ ಕ್ಯಾಪಿಟಲ್ಸ್ ಸಹ 14 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದೆ. ಅದಕ್ಕೂ ಇನ್ನೆರಡು ಪಂದ್ಯಗಳು ಆಡುವುದು ಬಾಕಿಯಿದೆ. ಮೊದಲು ನಿರಾಯಸವಾಗಿ ಪಂದ್ಯಗಳನ್ನು ಗೆದ್ದು ಕೊನೆಯ 3 ಪಂದ್ಯಗಲ್ಲಿ ಸತತ ಸೋಲು ಅನುಭವಿಸಿರುವ ಶ್ರೇಯಸ್ ಅಯ್ಯರ್ ಟೀಮು ಎರಡರಲ್ಲೂ ಸೋತರೆ ಆರ್​ಸಿಬಿಯ ದಾರಿ ಸುಗಮವಾಗುತ್ತದೆ. ಡೆಲ್ಲಿ ಇನ್ನೊಂದು ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಬೇಕಿದ್ದು ಈ ಪಂದ್ಯ ನಾಳೆ ನಡೆಯಲಿದೆ. ಮುಂಬೈ ಗೆದ್ದರೆ ಅದರ ಪಾಯಿಂಟ್ಸ್ ಟ್ಯಾಲಿ 18 ಆಗಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ.

ಪಾಯಿಂಟ್ಸ್ ಟೇಬಲ್​ನಲ್ಲಿ ಕೆಳಗಿನ 3 ಸ್ಥಾನಗಳಲ್ಲಿರುವ ಹೈದರಾಬಾದ್, ರಾಜಸ್ತಾನ್ ರಾಯಲ್ಸ್ ಮತ್ತು ಚೆನೈಗೆ ಪ್ಲೇ ಆಫ್​ನಲ್ಲಾಡುವ ಅವಕಾಶ ಕ್ಷೀಣವಾಗಿದೆ. ಚೆನೈಯಂತೂ ಈ ಸಮೀಕರಣದಲ್ಲಿ ಬರುವುದೇ ಇಲ್ಲ. ಆದರೆ ತಲಾ 12 ಅಂಕಗಳೊಂದಿಗೆ 5 ಮತ್ತು 4ನೇ ಸ್ಥಾನಲದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೊಲ್ಕತಾ, ಡಾರ್ಕ್ ಹಾರ್ಸ್​ಗಳಂತೆ ಗೋಚರಿಸುತ್ತಿವೆ. ಇಂದು ಕೊಲ್ಕತಾ, ಚೆನೈ ಜೊತೆ ಸೆಣಸುತ್ತಿದೆ. ಅದು ಗೆದ್ದಲ್ಲಿ ಅದರ ಅಂಕಗಳು 14 ಅದರ ಟ್ಯಾಲಿ ಅಗುತ್ತವೆ ಮತ್ತು ಇನ್ನೊಂದು ಪಂದ್ಯ ಆಡುವುದು ಬಾಕಿಯಿರುತ್ತದೆ.

ಅದೇ ತೆರನಾಗಿ, ಮೊದಲ 7 ಪಂದ್ಯಗಳಲ್ಲಿ 6ರಲ್ಲಿ ಪರಾಭವ ಅನುಭವಿಸಿದರೂ ನಂತರ 5 ರಲ್ಲಿ ಸತತ ಗೆಲುವು ಸಾಧಿಸಿರುವ ಪಂಜಾಬ್ ಉಳಿದೆರಡು ಪಂದ್ಯಗಳನ್ನು ರಾಜಸ್ತಾನ್ ರಾಯಲ್ಸ್ ಮತ್ತು ಚೆನೈ ವಿರುದ್ಧ ಆಡಬೇಕಿರುವುದರಿಂದ ಅರ್ಹತೆ ಗಿಟ್ಟಿಸುವ ಉತ್ತಮ ಅವಕಾಶ ಅದಕ್ಕಿದೆ. ಒಂದೊಮ್ಮೆ ಅದು ಒಂದರಲ್ಲಿ ಸೋತರೂ 14 ಅಂಕಗಳೊಂದಿಗೆ ಅಷ್ಟೇ ಅಂಕ ಪಡೆಯುವ ಟೀಮುಗಳೊಂದಿಗೆ ಟೈ ಸ್ಥಿತಿಗೆ ಬರುತ್ತದೆ. ಆಗ ಮತ್ತೊಮ್ಮೆ ಎನ್ಆರ್​ಅರ್ ಚಿತ್ರಣ ಎದುರಾಗುತ್ತದೆ. ಗಮನಿಸಬೇಕಾದ ಸಂಗತಿಯೇನೆಂದರೆ, ನಾವು ಲೆಕ್ಕಕ್ಕೆ ತೆಗೆದುಕೊಳ್ಳಲು ಉದಾಸೀನ ಮಾಡುತ್ತಿರುವ ಮತ್ತು ತಮ್ಮ ನಡುವಿನ ಎರಡು ಸುತ್ತಿನ ಸೆಣಸಾಟವನ್ನು ಮುಗಿಸಿರುವ ಹೈದರಾಬಾದ್ ಮತ್ತು ರಾಯಲ್ಸ್ ಒಂದು ಪಕ್ಷ ತಮ್ಮ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ಅವುಗಳ ಟ್ಯಾಲಿ ಸಹ 14 ಆಗುತ್ತದೆ. ಲೆಕ್ಕಾಚಾರಗಳನ್ನು ನೋಡಿದರೆ ಯಾವ ರೀತಿಯಿಂದಲೂ 5 ಟೀಮುಗಳು ತಲಾ 14 ಅಂಕ ಗಳಿಸಿ ಎಲ್ಲರನ್ನು ಗೊಂದಲಕ್ಕೆ ದೂಡುವ ಸನ್ನಿವೇಶವೇ ಎದುರಾಗುವಂತೆ ಕಾಣುತ್ತಿದೆ.

ಹಾಗಾಗೇ, ಈ ಗೊಂದಲಕ್ಕೆ ಬೀಳದಿರಲು ಬೆಂಗಳೂರು ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲಲೇಬೇಕು.