ಸಿಎಂ ತಾಯಿಗೆ ನೋಟಿಸ್ ಕೊಟ್ಟಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ, ಎಸ್​ಐಆರ್ ಪರಿಶೀಲನೆ ಹೇಗಿರಲಿದೆ ಎಂಬ ವಿವರ ಇಲ್ಲಿದೆ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ ಎಸ್​ಐಆರ್ ನೋಟಿಸ್ ನೀಡಲಾಗಿದೆ ಎಂಬ ವರದಿಗೆ ಕರ್ನಾಟಕ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಕನಕಪುರ ಕ್ಷೇತ್ರದಲ್ಲಿ ಗೌರಮ್ಮ ಹೆಸರಿನ ಮೂವರು ಮತದಾರರಿದ್ದು, ಇಬ್ಬರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಹೆಸರು ಒಂದೇ ಇರುವುದರಿಂದ ಈ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಎಸ್​ಐಆರ್ ನೋಟಿಸ್ ಬಂದವರ ಒಟ್ಟಾರೆ ಪರಿಶೀಲನೆ ಪ್ರಕ್ರಿಯೆ ಹೇಗಿರಲಿದೆ ಎಂಬ ವಿವರವಾದ ಮಾಹಿತಿ ನೀಡಿದ್ದಾರೆ. ಆ ವಿವರಗಳು ಇಲ್ಲಿವೆ.

ಸಿಎಂ ತಾಯಿಗೆ ನೋಟಿಸ್ ಕೊಟ್ಟಿಲ್ಲ: ಚುನಾವಣಾ ಆಯೋಗ ಸ್ಪಷ್ಟನೆ, ಎಸ್​ಐಆರ್ ಪರಿಶೀಲನೆ ಹೇಗಿರಲಿದೆ ಎಂಬ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: tv9

Updated on: Sep 11, 2026 | 9:45 AM

ಮುಖ್ಯಾಂಶಗಳು

  • ಸಿಎಂ ತಾಯಿಗೆ ನೋಟಿಸ್ ಕೊಟ್ಟಿಲ್ಲ ಎಂದ ಆಯೋಗ
  • ಹೆಸರು ಒಂದೇ ಇದ್ದುದರಿಂದ ಗೊಂದಲ ಸೃಷ್ಟಿ
  • ಎಸ್​ಐಆರ್ ನೋಟಿಸ್ ಬಂದವರ ಪರಿಶೀಲನೆ ಹೇಗಿರಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು, ಸೆಪ್ಟೆಂಬರ್ 11: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಅವರಿಗೆ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ವರದಿಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿ ಹಾಗೂ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಸ್ಪಷ್ಟನೆ ನೀಡಿದೆ. ಗೌರಮ್ಮ ಅವರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಚುನಾವಣಾಧಿಕಾರಿ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಗೌರಮ್ಮ ಅವರ ಹೆಸರು ನೋಟಿಸ್ ಪಡೆದವರ ಪಟ್ಟಿಯಲ್ಲಿ ಇಲ್ಲ. ಕನಕಪುರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 249ರಲ್ಲಿ ಗೌರಮ್ಮ ಎಂಬ ಹೆಸರಿನ ಮೂವರು ಮತದಾರರಿದ್ದು, ಮೂವರ ಎಪಿಕ್ (EPIC) ಸಂಖ್ಯೆಗಳು ವಿಭಿನ್ನವಾಗಿವೆ ಎಂದು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಮೂವರ ಪೈಕಿ ಇಬ್ಬರು ಗೌರಮ್ಮರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತಾಯಿಯಲ್ಲ. ಹೆಸರು ಒಂದೇ ಆಗಿರುವುದರಿಂದ ಉಂಟಾದ ಗೊಂದಲದಿಂದ ಸಿಎಂ ತಾಯಿಗೂ ನೋಟಿಸ್ ನೀಡಲಾಗಿದೆ ಎಂಬ ವರದಿ ಹರಡಿದೆ ಎಂದು ಚುನಾವಣಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

43 ಲಕ್ಷಕ್ಕೂ ಹೆಚ್ಚು ಮಂದಿಗೆ ನೋಟಿಸ್

ಎಸ್​ಐಆರ್ ಪ್ರಕ್ರಿಯೆಯಲ್ಲಿ ತಾರ್ಕಿಕ ವ್ಯತ್ಯಾಸ, ಅಸಂಗತತೆ ಹಾಗೂ ಮ್ಯಾಪಿಂಗ್ ಆಗದಿರುವ ಪ್ರಕರಣಗಳ ಆಧಾರದ ಮೇಲೆ ರಾಜ್ಯದಲ್ಲಿ 43 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್​ಐಆರ್ ನೋಟಿಸ್ ಪಡೆದವರೆಲ್ಲರೂ ಕಡ್ಡಾಯ ಖುದ್ದು ವಿಚಾರಣೆಗೆ ಹಾಜರಾಗಬೇಕೇ?

ಮತದಾರರಿಗೆ ನೋಟಿಸ್ ನೀಡಲಾಗಿದೆ ಎಂದ ಮಾತ್ರಕ್ಕೆ ಎಲ್ಲರನ್ನೂ ಕಡ್ಡಾಯವಾಗಿ ಚುನಾವಣಾಧಿಕಾರಿಗಳ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗುವುದಿಲ್ಲ. ಭಾರತ ರತ್ನ ಪುರಸ್ಕೃತ ಪ್ರೊ. ಸಿ.ಎನ್.ಆರ್. ರಾವ್ ಅವರ ಪ್ರಕರಣದಲ್ಲೂ ಇದೇ ರೀತಿಯ ಪ್ರಕ್ರಿಯೆ ಅನುಸರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣ್ಯ ವ್ಯಕ್ತಿಗಳಿಗೂ ಎಸ್​ಐಆರ್ ನೋಟಿಸ್ ನೀಡಲು ಕಾರಣವೇನು?

ಎಸ್​ಐಆರ್ ವ್ಯವಸ್ಥೆಯು ಪ್ರತಿಯೊಬ್ಬ ಮತದಾರರ ಹೆಸರನ್ನು ಪರಿಶೀಲಿಸುವ ವೇಳೆ ಕಂಡುಬರುವ ವ್ಯತ್ಯಾಸಗಳನ್ನು ಗುರುತಿಸಿ ನೋಟಿಸ್ ಸೃಷ್ಟಿಸುತ್ತದೆ. ಯಾರು ಗಣ್ಯ ವ್ಯಕ್ತಿ, ಯಾರು ಸಾಮಾನ್ಯ ಮತದಾರ ಎಂಬುದನ್ನು ವ್ಯವಸ್ಥೆ ಗುರುತಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ನಟ ಶಿವರಾಜ್‌ಕುಮಾರ್, ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ, ಝೆರೋಧಾ ಸಹ ಸಂಸ್ಥಾಪಕರಾದ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್ ಸೇರಿದಂತೆ ಹಲವು ಗಣ್ಯರಿಗೂ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2002ರ ಬಳಿಕ ನಡೆಯುತ್ತಿರುವ ಈ ಎಸ್​ಐಆರ್ ಪ್ರಕ್ರಿಯೆಯಲ್ಲಿ ಹಳೆಯ ಮತದಾರರ ಪಟ್ಟಿಗಳು ಮತ್ತು ಪ್ರಸ್ತುತ ಮಾಹಿತಿಯ ನಡುವೆ ಹಲವು ವ್ಯತ್ಯಾಸಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನೋಟಿಸ್​ ಬಂದರೆ ಚಿಂತೆ ಬೇಡ: ನಿಮ್ಮ ಮನೆ ಬಾಗಿಲಲ್ಲೇ ಪರಿಶೀಲನೆ

ನೋಟಿಸ್ ಪಡೆದ ಪ್ರತಿಯೊಬ್ಬ ಮತದಾರನನ್ನೂ ಇಆರ್​ಒ ಕಚೇರಿಗೆ ಕರೆಸಲಾಗುತ್ತಿಲ್ಲ. ಬಹುತೇಕ ತಿದ್ದುಪಡಿ ಮತ್ತು ಪರಿಶೀಲನಾ ಕಾರ್ಯಗಳನ್ನು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್​ಒ) ಹಾಗೂ ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್​ಒ) ಮತದಾರರ ಮನೆ ಬಾಗಿಲಲ್ಲೇ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿರುವ ಮತದಾರರಿಗೆ ಎಸ್‌ಐಆರ್‌ ಸಂಕಷ್ಟ: ಖುದ್ದು ವಿಚಾರಣೆಗೆ ಹಾಜರಾಗದಿದ್ದರೆ ಬೇರೇನು ಆಯ್ಕೆಗಳಿವೆ? ಇಲ್ಲಿದೆ ವಿವರ

ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನ ಮತದಾರರ ಪರಿಶೀಲನೆಯನ್ನು ಅವರ ಮನೆಗಳಲ್ಲೇ ನಡೆಸಲಾಗುತ್ತಿದೆ. ಬಸವನಗುಡಿ ಹಾಗೂ ತಿಪಟೂರು ಸೇರಿದಂತೆ ಕೆಲವು ಕಡೆ ನೋಟಿಸ್ ಪಡೆದ ಮತದಾರರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ERO ಹಾಗೂ BLOಗಳು ಆಸ್ಪತ್ರೆಗಳಿಗೆ ತೆರಳಿ ಪರಿಶೀಲನೆ ಪೂರ್ಣಗೊಳಿಸಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 am, Fri, 11 September 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us