ಶಾಲಾ ದಾಖಲಾತಿಗೆ ವಯೋಮಿತಿ ನಿಗದಿಪಡಿಸಿದ ಶಿಕ್ಷಣ ಇಲಾಖೆ: 6 ವರ್ಷ ಪೂರ್ಣಗೊಂಡ ಮಗುವಿಗೆ ಶಾಲಾ ದಾಖಲಾತಿ ಕಡ್ಡಾಯ

| Updated By: ವಿವೇಕ ಬಿರಾದಾರ

Updated on: Nov 15, 2022 | 9:02 PM

6 ವರ್ಷ ಪೂರ್ಣಗೊಂಡ ಮಗುವನ್ನು ಕಡ್ಡಾಯವಾಗಿ 1ನೇ ತರಗತಿಗೆ ದಾಖಲಿಸಬೇಕೆಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಶಾಲಾ ದಾಖಲಾತಿಗೆ ವಯೋಮಿತಿ ನಿಗದಿಪಡಿಸಿದ ಶಿಕ್ಷಣ ಇಲಾಖೆ: 6 ವರ್ಷ ಪೂರ್ಣಗೊಂಡ ಮಗುವಿಗೆ ಶಾಲಾ ದಾಖಲಾತಿ ಕಡ್ಡಾಯ
ಶಿಕ್ಷಣ ಸಚಿವ ಬಿ ಸಿ ನಾಗೇಶ್​
Follow us on

ಬೆಂಗಳೂರು: 6 ವರ್ಷ ಪೂರ್ಣಗೊಂಡ ಮಗುವನ್ನು ಕಡ್ಡಾಯವಾಗಿ 1ನೇ ತರಗತಿಗೆ ದಾಖಲಿಸಬೇಕೆಂದು ಶಿಕ್ಷಣ ಇಲಾಖೆ (Education Department) ಆದೇಶ ಹೊರಡಿಸಿದೆ. ಈ ವಯೋಮಿತಿ 2025-26ನೇ ಶೈಕ್ಷಣಿಕ ವರ್ಷದಿಂದ ಅನ್ವಯವಾಗುತ್ತದೆ ಎಂದು ಇಲಾಖೆ ತಿಳಿಸಿದೆ. 2025-26ನೇ ಶೈಕ್ಷಣಿಕ ವರ್ಷದ ಜೂನ್ 1ನೇ ತಾರೀಖಿಗೆ 6 ವರ್ಷ ತುಂಬಿದ ಮಗು 1ನೇ ತರಗತಿಗೆ ದಾಖಲಾಗಲು ಅವಕಾಶ ನೀಡಿದೆ.

7,601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ನೆರವೇರಿದ ಶಂಕುಸ್ಥಾಪನೆ, ಜಿ.ಪಂ ಸಿಇಒ ಉಸ್ತುವಾರಿ

ರಾಜ್ಯದಲ್ಲಿ 7,601 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಕೊಠಡಿಗಳ ನಿರ್ಮಾಣದ ಉಸ್ತುವಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ವಹಿಸಲಾಗಿದೆ ಎಂದು ವಿಧಾನಸೌಧದಲ್ಲಿ  ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯಾದ್ಯಂತ 250 ಶೌಚಾಲಯಗಳ ನಿರ್ಮಾಣಕ್ಕೆ ನಿನ್ನೆ (ನ.14) ರಂದು ಸೂಚನೆ ನೀಡಿದ್ದೇವೆ. ಹೈದರಾಬಾದ್ ಕರ್ನಾಟಕದಲ್ಲಿ 900 ಶಾಲಾ ಕೊಠಡಿ ನಿರ್ಮಿಸುತ್ತೇವೆ ಎಂದು ತಿಳಿಸಿದರು.

ಇನ್ನು ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಸಂಬಂಧ ಸಿಇಟಿ ಪರೀಕ್ಷೆ ಮುಗಿದಿದೆ. ನೇಮಕಗೊಂಡ ಶಿಕ್ಷಕರಿಗೆ ತರಬೇತಿ ನೀಡಿ ಕೂಡಲೆ ಶಾಲೆಗಳಿಗೆ ನೇಮಿಸುತ್ತೇವೆ. ಮೌಲ್ಯಾಧಾರಿತ ಶಿಕ್ಷಣ ನೀಡಲು ಎರಡು ಕೊರತೆಗಳನ್ನು ನೀಗಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ರೀತಿಯ ಬಣ್ಣ ಬಳಿಯಬೇಕು ಅಂತಾ ಸುತ್ತೋಲೆ ಹೊರಡಿಸಿಲ್ಲ

ನೂತನ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ವಿಚಾರವಾಗಿ ಮಾತನಾಡಿದ ಅವರು ಇದೇ ರೀತಿಯ ಬಣ್ಣ ಬಳಿಯಬೇಕು ಅಂತಾ ಸುತ್ತೋಲೆ ಹೊರಡಿಸಿಲ್ಲ. ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಕೊಠಡಿ ನಿರ್ಮಿಸಿ ಎಂದು ಹೇಳಿದ್ದೇವೆ. ಹಾಗೆ ಶಾಲಾ ಕೊಠಡಿಗಳಿಗೆ ‘ವಿವೇಕ’ ಎಂದು ಹೆಸರಿಡಿ ಎಂದಿದ್ದೇವೆ. ಖಾಸಗಿ ಶಾಲೆಗಳಲ್ಲಿ ಕೇಸರಿ ಬಣ್ಣ ಬಳಿಯೋದು ಅವರಿಗೆ ಬಿಟ್ಟದ್ದು. ಈಗಾಗಲೇ ವಿವೇಕಾನಂದರ ಭಾವಚಿತ್ರ ಕೆಲವು ಶಾಲೆಗಳಲ್ಲಿವೆ. ಎಲ್ಲಾ ಶಾಲೆಗಳಲ್ಲೂ ವಿವೇಕಾನಂದರ ಭಾವಚಿತ್ರ ಹಾಕಲು ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.

ಜ್ಞಾನ ಸಂಪಾದನೆ, ಮಾಡಲ್ಸ್​​ಗಾಗಿ ವಿವೇಕ ಶಾಲೆಗಳ ಸ್ಥಾಪನೆ ಮಾಡಲಾಗಿದೆ. ಕೊಠಡಿ ಸಹಿತ ಒಳ್ಳೆಯ ವಾತವರಣ ನಿರ್ಮಿಸಬೇಕು. ಇದಕ್ಕಾಗಿ ಹತ್ತು ವರ್ಷಗಳಲ್ಲಿ ಎಲ್ಲಾ ಕೊಠಡಿಗಳನ್ನು ನಿರ್ಮಿಸಲು ಗುರಿ ಇದೆ. 2 ಕಿಮೀ ಒಳಗೆ ಒಂದು ಸರ್ಕಾರಿ ಶಾಲೆ ಇರಬೇಕೆಂದು ನಿಯಮ ಇದೆ. ಕನಿಷ್ಟ ಇಬ್ಬರು ಶಿಕ್ಷಕರು ಪ್ರತಿ ಶಾಲೆಗೆ ಇರಬೇಕು ಎಂದು ನುಡಿದರು.

ಕಾಂಗ್ರೆಸ್ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿದೆ

ಕಾಂಗ್ರೆಸ್ ಶಿಕ್ಷಣ ಕ್ಷೇತ್ರದಲ್ಲೂ ಅನವಶ್ಯಕ ರಾಜಕೀಯ ಮಾಡುತ್ತಿದೆ. ವಿರೋಧ ಮಾಡಿಸುವುದಕ್ಕೆ ಒಂದಿಷ್ಟು ಜನರು ಇದ್ದಾರೆ. ವೋಟ್ ಬ್ಯಾಂಕ್​ಗಾಗಿ ಶಿಕ್ಷಣ ಕ್ಷೇತ್ರದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಒಂದು ಧರ್ಮದ ವೋಟ್​ಗಾಗಿ ಈ ರೀತಿ ವಿರೋಧ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:38 pm, Tue, 15 November 22