ಚಾಮರಾಜನಗರ: ಮಾಸ್ಕ್ ಧರಿಸದ ಸಾರ್ವಜನಿಕರನ್ನು ಸಚಿವ ಎಸ್.ಸುರೇಶ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ವೃತ್ತದಲ್ಲಿ ಬಸ್ಗಾಗಿ ಮಾಸ್ಕ್ ಧರಿಸದೇ ಕಾಯುತ್ತ ಕುಳಿತಿದ್ದ ಜನರನ್ನು ಸಚಿವ ಸುರೇಶ್ ಕುಮಾರ್ ಕಾರಿನಿಂದ ಇಳಿದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊವಿಡ್ ಸೋಂಕಿಗೆ ಸಂಬಂಧಿಸಿ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ಜತೆಗೆ ಸಭೆ ಮುಗಿಸಿಕೊಂಡು ಜಿಲ್ಲಾಡಳಿತ ಭವನದಿಂದ ಸಂತೇಮರಳ್ಳಿಗೆ ಹೊರಟಿದ್ದರು. ಈ ವೇಳೆ ರಸ್ತೆ ಬದಿ ಇದ್ದವರಲ್ಲಿ ಬಹುತೇಕ ಮಂದಿ ಮಾಸ್ಕ್ ಹಾಕಿಕೊಳ್ಳದೆ ಸಾಮಾಜಿಕ ಅಂತರ ಕಾಪಾಡಿ ಕೊಳ್ಳದೆ ಮಾತುಕತೆಯಲ್ಲಿ ತೊಡಗಿದ್ದರು.
ಕಾರಿನಲ್ಲಿ ಹೋಗುವಾಗ ಇದನ್ನು ಗಮನಿಸಿದ ಸಚಿವರು ಕಾರಿನಿಂದ ಇಳಿದು ತರಾಟೆಗೆ ತೆಗೆದುಕೊಂಡರು. ಕೊರೊನಾ ಸೋಂಕಿನ ಬಗ್ಗೆ ವಿವರಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಮಾಸ್ಕ್ ಹಾಕಿಕೊಂಡು ಓಡಾಡಬೇಕು, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಾರ್ವಜನಿಕರಿಗೆ ತಿಳಿ ಹೇಳಿದರು. ಸಚಿವರೇ ಖುದ್ದು ಸಾರ್ವಜನಿಕರಿಗೆ ತಿಳಿ ಹೇಳಿದ್ದರಿಂದ ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿತು.
ಸಚಿವರ ಆಪ್ತ ಸಹಾಯಕ ಕೊರೊನಾಗೆ ಬಲಿ
ಕಳೆದ ಎರಡು ದಿನಗಳ ಹಿಂದಷ್ಟೇ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಆಪ್ತ ಕಾರ್ಯದರ್ಶಿ ಹೆಜ್.ಜೆ. ರಮೇಶ್ (53) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮಡಿವಾಳದ ಸಮೀಪದ ಸೆಂಟ್ ಜಾನ್ಸ್ ಚಿಕಿತ್ಸೆ ಪಡೆಯುತ್ತಿದ್ದರು. ಸೂಕ್ತ ಸಮಯಕ್ಕೆ ಆಕ್ಸಿಜನ್ ಸಿಗದೆ ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ರಮೇಶ್ ಸಾವಿಗೀಡಾಗಿದ್ದಾರೆ.
ಹೆಜ್.ಜೆ. ರಮೇಶ್ ಅವರು 8 ವರ್ಷಗಳಿಂದ ಎಸ್ ಸುರೇಶ್ ಕುಮಾರ್ ಅವರ ಜೊತೆ ಸೇವೆ ಸಲ್ಲಿಸಿದ್ದರು. ಈ ಬಗ್ಗೆ ಸ್ವತಃ ಸಚಿವ ಸುರೇಶ್ ಕುಮಾರ್ ಅವರೇ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ‘ನಮ್ಮ ಕ್ಷೇತ್ರದ ಅನೇಕರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಉಳಿಸಿದ್ದ ನನ್ನ ಆಪ್ತ ಸಹಾಯಕ HJ ರಮೇಶ್ ಇನ್ನಿಲ್ಲ. ರಮೇಶ್ ಸುಮಾರು 8 ವರ್ಷ ನನ್ನೊಡನೆ ನಗು ನಗುತ್ತಾ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರಕಲಿ’ ಎಂದು ಸಚಿವ ಸುರೇಶ್ ಕುಮಾರ್ ಶ್ರದ್ದಾಂಜಲಿ ಅರ್ಪಿಸಿದ್ದಾರೆ.
ಇದನ್ನೂ ಓದಿ: Karnataka SSLC Classes: ಮೇ 4ರವರೆಗೆ ಎಸ್ಎಸ್ಎಲ್ಸಿ ತರಗತಿಗಳು ಬಂದ್; ಶಿಕ್ಷಣ ಇಲಾಖೆ ಆದೇಶ
ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಸಚಿವ ಸುರೇಶ್ ಕುಮಾರ್ ಆಪ್ತ ಕಾರ್ಯದರ್ಶಿ ಕೊರೊನಾಗೆ ಬಲಿ
Published On - 6:29 pm, Wed, 21 April 21