Siddaramaiah: ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು, ನಾನೆಂದೂ ಪ್ರಧಾನಿಯಾಗುವ ಕನಸು ಕಂಡಿಲ್ಲ; ಸಿದ್ದರಾಮಯ್ಯ

ನಾನು ಎಂದೂ ಪ್ರಧಾನಿ ಹುದ್ದೆಯ ಕನಸು ಕಂಡಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ನಮ್ಮ ಪಕ್ಷದಲ್ಲಿ ಅನೇಕ ಅರ್ಹ ನಾಯಕರು ಇದ್ದಾರೆ. ನಮ್ಮ ಪಕ್ಷದ ಹಿತದೃಷ್ಟಿಯಿಂದ ಮಾತ್ರವಲ್ಲದೆ ನಮ್ಮ ದೇಶದ ಜನರ ಹಿತದೃಷ್ಟಿಯಿಂದಲೂ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Siddaramaiah: ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು, ನಾನೆಂದೂ ಪ್ರಧಾನಿಯಾಗುವ ಕನಸು ಕಂಡಿಲ್ಲ; ಸಿದ್ದರಾಮಯ್ಯ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 11, 2021 | 12:42 PM

ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ರಾಷ್ಟ್ರ ರಾಜಕಾರಣದಲ್ಲಿ ತೊಡಗಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಆಹ್ವಾನ ನೀಡಿದ್ದರು. ಆದರೆ, ಸಿದ್ದರಾಮಯ್ಯ ಮಾತ್ರ ರಾಜ್ಯ ರಾಜಕಾರಣದಲ್ಲಿ ಮುಂದುವರೆಯುವುದಾಗಿ ಸ್ಪಷ್ಟನೆ ನೀಡಿದ್ದು ಕುತೂಹಲ ಮೂಡಿಸಿತ್ತು. ಇದೀಗ ಕಾಂಗ್ರೆಸ್ (Congress) ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ರಾಹುಲ್ ಗಾಂಧಿ (Rahul Gandhi) ಪರ ಬ್ಯಾಟಿಂಗ್ ಮಾಡಿರುವ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರೇ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬುದು ನಮ್ಮ ಪಕ್ಷದ ಎಲ್ಲರ ಆಸೆ ಎಂದಿದ್ದಾರೆ. ಹಾಗೇ, ಕರ್ನಾಟಕದಲ್ಲಿ ಬಿಜೆಪಿಯ ವಾಸ್ತವ ಸ್ಥಿತಿ, ಜೆಡಿಎಸ್​ ಕುಟುಂಬ ರಾಜಕಾರಣ, ಡಿಕೆ ಶಿವಕುಮಾರ್ ಮತ್ತು ತಮ್ಮ ನಡುವಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ. 

2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿರುವ ಸಿದ್ದರಾಮಯ್ಯ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಂಡೆ ಗಾರ್ಡಿಯನ್​ಗೆ ಸಂದರ್ಶನ ನೀಡಿರುವ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಅವರ ರಾಜೀನಾಮೆ, ಕರ್ನಾಟಕದ ರಾಜಕಾರಣ ಮುಂತಾದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಹೈಕಮಾಂಡ್​ನಿಂದ ಆಹ್ವಾನ ಬಂದರೂ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳದಿರುವ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿಯಿಲ್ಲ ಎಂದು ನಾನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೆ. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾಗ, ಅವರು ನನ್ನನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಆಹ್ವಾನಿಸಿದರು. ನಾನು ಈ ಹಿಂದೆ 2 ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ, ಆದರೆ ಜನರು ನನ್ನನ್ನು ಬೆಂಬಲಿಸಲಿಲ್ಲ. ಬಹುಶಃ ನಾನು ರಾಜ್ಯದ ರಾಜಕಾರಣದಲ್ಲಿ ಮುಂದುವರಿಯಬೇಕೆಂದು ಕರ್ನಾಟಕದ ಜನರು ಬಯಸುತ್ತಾರೆ. ನಾನು ಎಂದಿಗೂ ಪ್ರಧಾನಿ ಹುದ್ದೆಯ ಕನಸು ಕಂಡಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ನಮ್ಮ ಪಕ್ಷದಲ್ಲಿ ಅನೇಕ ಅರ್ಹ ನಾಯಕರು ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಭಾಗವಹಿಸಿದರು ಮತ್ತು ಜಿತೇಂದ್ರ ಪ್ರಸಾದ್ ವಿರುದ್ಧ ಗೆದ್ದರು. ತಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡಲು ಬಿಜೆಪಿಯಲ್ಲಿ ಎಂದಾದರೂ ಚುನಾವಣೆ ನಡೆದಿದೆಯೇ? ನಮ್ಮ ಕೆಲವು ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಪಕ್ಷದ ಕೋಟ್ಯಂತರ ಕಾರ್ಯಕರ್ತರು ಮತ್ತು ನಮ್ಮ ಬೆಂಬಲಿಗರ ಅಭಿಪ್ರಾಯವಲ್ಲ. ಇಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಮ್ಮ ಪಕ್ಷದೊಳಗೆ ಪ್ರಜಾಪ್ರಭುತ್ವವಿದೆ ಎಂದು ನಾವು ಹೆಮ್ಮೆ ಪಡಬೇಕು. ನಮ್ಮ ಪಕ್ಷವು ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಚುನಾವಣೆ ಫಲಿತಾಂಶಗಳ ಆಧಾರದ ಮೇಲೆ ಆಯ್ಕೆ ಮಾಡಲಿಲ್ಲವೇ? ಇತರ ಪಕ್ಷಗಳಲ್ಲಿ ಅಂತಹ ಆಂತರಿಕ ಚುನಾವಣೆಗಳಿವೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಯೇ ನಮ್ಮ ನಾಯಕ:

ರಾಹುಲ್ ಗಾಂಧಿಯವರು ಧೈರ್ಯ ತೋರಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯವನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ನನ್ನ ಅಭಿಪ್ರಾಯದಲ್ಲಿ ನಮ್ಮ ಪಕ್ಷದ ಹಿತದೃಷ್ಟಿಯಿಂದ ಮಾತ್ರವಲ್ಲದೆ ನಮ್ಮ ದೇಶದ ಜನರ ಹಿತದೃಷ್ಟಿಯಿಂದಲೂ ರಾಹುಲ್ ಗಾಂಧಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಬೇಕು. ಚುನಾವಣೆಗಳು ನಡೆದರೂ, ಎಲ್ಲಾ ಕಾಂಗ್ರೆಸ್ಸಿಗರ ಆಯ್ಕೆ ರಾಹುಲ್ ಗಾಂಧಿ ಆಗಿರುತ್ತದೆ. ಫಲಿತಾಂಶವನ್ನು ನಾವು ಈಗಾಗಲೇ ತಿಳಿದಿರುವಾಗ, ಚುನಾವಣೆಗೆ ಯಾವುದೇ ಅರ್ಥವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಳೆದ 15 ವರ್ಷದಲ್ಲಿ ನಾನು ಹಲವು ಬಾರಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದೇನೆ. ಪ್ರಸ್ತುತ ರಾಜಕಾರಣದ ಬಗ್ಗೆ ಅವರಿಗೆ ಇರುವ ಜ್ಞಾನ ಯಾವಾಗಲೂ ನನಗೆ ಸ್ಫೂರ್ತಿ ನೀಡುತ್ತದೆ. ನಮ್ಮ ಭೇಟಿಯ ವೇಳೆ ಅವರು ರೈತರ ಪ್ರತಿಭಟನೆ, ಕೊವಿಡ್ ಬಿಕ್ಕಟ್ಟು, ನಿರುದ್ಯೋಗ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಮತ್ತು ಕೇಂದ್ರಗಳೆರಡರಲ್ಲೂ ಬಿಜೆಪಿ ಸರ್ಕಾರವಿದ್ದರೂ ಜನರಿಗೆ ಏನೂ ಉಪಯೋಗವಾಗಿಲ್ಲ. ಸಾಮಾನ್ಯವಾಗಿ ಅಧಿಕಾರಕ್ಕೆ ಬಂದ ನಂತರ ರಾಜಕೀಯ ಪಕ್ಷಗಳು ಚುನಾವಣೆಗೂ ಮೊದಲು ನೀಡಿದ್ದ ಆಶ್ವಾಸನೆಗಳನ್ನು ಮರೆತುಬಿಡುತ್ತಾರೆ. ಆದರೆ, ನಾನು 2013ರಿಂದ 2018ರ ಅವಧಿಗೆ ಮುಖ್ಯಮಂತ್ರಿಯಾದಾಗ ಪ್ರಣಾಳಿಕೆಯಲ್ಲಿ ನಾವು ಘೋಷಿಸಿದ್ದ 165 ಭರವಸೆಗಳನ್ನು ಈಡೇರಿಸಿದ್ದೆವು. ಬಿಜೆಪಿ ಸರ್ಕಾರವನ್ನು ಆರಿಸಿದ ಜನರೇ ಅವರ ಆಡಳಿತವನ್ನು ನೋಡಿ ಬೇಸತ್ತು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ತನ್ನ ನಾಯಕರನ್ನು ನಿರ್ಲಕ್ಷ್ಯಿಸುತ್ತಿದೆ: ಕೇವಲ 2 ಲಿಂಗಾಯತರು ಮಾತ್ರವಲ್ಲದೆ ವಿವಿಧ ಜಾತಿ ಮತ್ತು ಧರ್ಮದ ಪ್ರತಿಯೊಬ್ಬರೂ ಕಳೆದ 2 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಆಡಳಿತದಿಂದ ನಿರಾಸೆಗೊಂಡಿದ್ದಾರೆ. ನಮ್ಮ ಪಕ್ಷವು ಲಿಂಗಾಯತರೊಳಗಿನ ಅಸಮಾಧಾನದಿಂದ ಯಾವುದೇ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವುದಿಲ್ಲ. ಜನರಿಂದ ಎಲ್ಲ ಪ್ರಯೋಜನಗಳನ್ನು ಪಡೆದ ನಂತರ ಜನರನ್ನು ನಿರ್ಲಕ್ಷಿಸುವುದು ಬಿಜೆಪಿಯ ರಕ್ತದಲ್ಲಿದೆ. ನಮ್ಮ ದೇಶದ ಜನರು ತಮ್ಮ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಯಶವಂತ್ ಸಿನ್ಹಾ ಮತ್ತು ಇತರರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದನ್ನು ಗಮನಿಸುತ್ತಿದ್ದಾರೆ. ಬಿಎಸ್‌ ಯಡಿಯೂರಪ್ಪ ತಮ್ಮ ಬೀಳ್ಕೊಡುಗೆ ಸಭೆಯಲ್ಲಿ ಕಣ್ಣೀರು ಸುರಿಸಿದ್ದು ಅವರು ಎಷ್ಟು ನೋವು ಅನುಭವಿಸಿರಬಹುದು ಎಂಬುದನ್ನು ತೋರಿಸುತ್ತದೆ. ಅದನ್ನು ಬಹಿರಂಗವಾಗಿ ಹೇಳುವ ಧೈರ್ಯ ಅವರಿಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಧರ್ಮದ ಮತ್ತು ಎಲ್ಲಾ ಜಾತಿಯ ನಾಯಕರು ಇದ್ದಾರೆ. ನಾವು ಯಾವುದೇ ಒಂದು ಜಾತಿ ಅಥವಾ ಧರ್ಮವನ್ನು ಸಮಾಧಾನಪಡಿಸಲು ಪ್ರಯತ್ನಿಸುವುದಿಲ್ಲ. ಶಾಮನೂರು ಶಿವಶಂಕರಪ್ಪ, ಎಸ್.ಆರ್. ಪಾಟೀಲ್, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ ಮತ್ತು ಇತರ ನಾಯಕರು ಕೂಡ ನಮ್ಮ ಪಕ್ಷದಲ್ಲಿದ್ದಾರೆ. ವಾಸ್ತವದಲ್ಲಿ ಕಾಂಗ್ರೆಸ್ ಕೇವಲ ಬಾಯಿ ಮಾತಿಗೆ ಮಾತ್ರವಲ್ಲದೆ ವಾಸ್ತವಾಗಿಯೂ “ಸಬ್​ಕಾ ಸಾಥ್, ಸಬ್​ಕಾ ವಿಕಾಸ್” ಅನ್ನು ಅನುಸರಿಸುತ್ತದೆ. ಆದರೆ, ಬಿಜೆಪಿ ಬಾಯಿ ಮಾತಿಗೆ ಆ ಘೋಷಣೆ ಹೇಳುತ್ತಿದೆ ಎಂದಿದ್ದಾರೆ.

ಡಿಕೆಶಿ, ನನ್ನ ನಡುವೆ ಮನಸ್ತಾಪವಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಸ್ಪರ್ಧೆ ಅಥವಾ ಯುದ್ಧವಿಲ್ಲ. ಬಿಜೆಪಿ ತಮ್ಮ ಕೊಳಕು ರಾಜಕೀಯದ ಭಾಗವಾಗಿ ಈ ರೀತಿಯ ವದಂತಿಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ನಮ್ಮ ನಡುವೆ ಆರೋಗ್ಯಕರ ಸಂಬಂಧವಿದೆ. ನಾನು ಸಿಎಂ ಆಗಿದ್ದಾಗ ಅವರು ಸಂಪುಟದ ಸಚಿವರಾಗಿದ್ದರು. ತನಿಖಾ ಸಂಸ್ಥೆಗಳ ನೆರವಿನಿಂದ ಬಿಜೆಪಿ ಸರ್ಕಾರ ಡಿಕೆಶಿಗೆ ತೊಂದರೆ ನೀಡಲು ಪ್ರಯತ್ನಿಸುತ್ತಿದೆ. ಆದರೆ, ನಮ್ಮ ಪಕ್ಷದವರು ಡಿಕೆ ಶಿವಕುಮಾರ್ ಅವರ ಬೆಂಬಲವಾಗಿ ಸದಾ ಇರುತ್ತೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಸಮುದಾಯದಿಂದ ಹೆಚ್ಚಿನ ಮುಖ್ಯಮಂತ್ರಿಗಳನ್ನು ಮತ್ತು ಮಂತ್ರಿಗಳನ್ನು ಹೊಂದಿದ ಪಕ್ಷ ಕಾಂಗ್ರೆಸ್. ಜೆಡಿಎಸ್ ಕೇವಲ ಕುಟುಂಬ ಕೇಂದ್ರಿತ ಪಕ್ಷ. ಒಕ್ಕಲಿಗರು ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ಭಾವನೆ ಕೇವಲ ಭ್ರಮೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್ .ಡಿ. ದೇವೇಗೌಡರು ತುಮಕೂರಿನಲ್ಲಿ ಸೋತರು. ಅಲ್ಲಿ ಜನಸಂಖ್ಯೆಯಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಾಗಿದೆ. ಡಿ.ಕೆ. ಶಿವಕುಮಾರ್ ಅವರನ್ನು ಬ್ರಾಂಡ್ ಮಾಡುವುದು ಕೂಡ ತಪ್ಪು. ಶಿವಕುಮಾರ್ ಕೇವಲ ಒಕ್ಕಲಿಗರ ನಾಯಕರಲ್ಲ. ಅವರು ಕರ್ನಾಟಕದ ನಾಯಕ, ಕಾಂಗ್ರೆಸ್ ನಾಯಕ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಎಂದಿಗೂ ಸ್ವಂತವಾಗಿ ಸರ್ಕಾರ ರಚಿಸಿಲ್ಲ. 2018ರಲ್ಲಿ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆಯನ್ನು ಎದುರಿಸಿತು. ನಮಗೆ ಬಹುಮತ ಸಿಗದಿದ್ದರೂ ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಶೇ. 2ರಷ್ಟು ಹೆಚ್ಚು ಮತ ಪಾಲನ್ನು ಪಡೆಯಿತು. ನಮ್ಮ ರಾಜ್ಯದ ಜನರು ಮತ್ತು ಅವರದೇ ಪಕ್ಷದವರು ಬಿ.ಎಸ್. ಯಡಿಯೂರಪ್ಪನವರ ನಾಯಕತ್ವವನ್ನು ತಿರಸ್ಕರಿಸಿದ್ದಾರೆ. ಬಿಜೆಪಿಯೊಳಗಿನ ಅನೇಕ ಲಿಂಗಾಯತ ನಾಯಕರು ಬಿಎಸ್ ಯಡಿಯೂರಪ್ಪನವರ ನಾಯಕತ್ವವನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ ಬಿಜೆಪಿ ನಮ್ಮ ರಾಜ್ಯವನ್ನು 20 ವರ್ಷಗಳ ಹಿಂದೆ ಇದ್ದ ಸ್ಥಿತಿಗೆ ಕೊಂಡೊಯ್ದಿದೆ. ವ್ಯಾಪಕ ಭ್ರಷ್ಟಾಚಾರ, ಶೋಚನೀಯ ಆಡಳಿತ, ರೈತ ವಿರೋಧಿ ಕಾನೂನುಗಳು, ವಿದ್ಯಾರ್ಥಿ ವಿರೋಧಿ ಹೊಸ ಶಿಕ್ಷಣ ನೀತಿ ಮತ್ತು ಅವರದೇ ಆಂತರಿಕ ಸಂಘರ್ಷದಿಂದಾಗಿ ಬಿಜೆಪಿ ಅಧೋಗತಿಗೆ ಇಳಿದಿದೆ. ಆಪರೇಷನ್ ಕಮಲದಿಂದಾಗಿಯೇ ಅವರು ಪ್ರತಿ ಬಾರಿ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ತೆಗೆದು ಹಾಕಲು ಜನರು ಕಾಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ನೆಗ್ಲೆಕ್ಟ್ ಮಾಡ್ತೀನಿ ಅನ್ನುತ್ತಾ ಕುಮಾರಸ್ವಾಮಿ ಸುತ್ತಲೇ ಯಾಕೆ ಗಿರಕಿ ಹೊಡೆಯುತ್ತೀರಿ? ಸಿದ್ದರಾಮಯ್ಯಗೆ ಹೆಚ್​ಡಿಕೆ ಪ್ರಶ್ನೆ

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ನೇಮಕಕ್ಕೆ ಯುವ ಕಾಂಗ್ರೆಸ್​ ಒತ್ತಾಯ

Published On - 12:34 pm, Mon, 11 October 21