ಮಂಡ್ಯ: ಕೊರೊನಾ ಸೋಂಕಿಗೆ ಹೆದರಿ ಕುಟುಂಬವೊಂದು ಗ್ರಾಮ ತೊರೆದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ನಡೆದಿದೆ. ಕೊರೊನಾಗೆ ಹೆದರಿ ಕುಟುಂಬ ಗ್ರಾಮ ತೊರೆದು ತಮ್ಮ ಜಮೀನಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಕುಮಾರ್ ಮನೆಯ ಸಮೀಪದ ನಾಲ್ಕೈದು ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಇದರಿಂದ ಹೆದರಿದ ಕುಮಾರ್ ಊರಲ್ಲೇ ಇದ್ದರೆ ತಮಗೂ ಕೊರೊನಾ ತಗುಲಬಹುದು ಎಂದುಕೊಂಡು ಜಮೀನಿನ ಬಳಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡಲಾರಂಭಿಸಿದ್ದಾರೆ. ಕುಮಾರ್ ಎಂಬುವವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಊರಬಿಟ್ಟು ಜಮೀನು ಸೇರಿದ್ದಾರೆ.
ಕುಮಾರ್ಗೆ ಊರಲ್ಲಿ ಸ್ವಂತ ಮನೆ ಇದ್ದು ಆತ ಊರು ಬಿಟ್ಟು ಕಳೆದ 20 ದಿನಗಳಿಂದ ಜಮೀನಿನಲ್ಲಿ ವಾಸ ಮಾಡ್ತಿರೋದ್ರಿಂದ ಗ್ರಾಮದ ಜನರು ಆತನ ಬಳಿಗೆ ತೆರಳಿ ಧೈರ್ಯ ತುಂಬಿ ಊರಿಗೆ ಬರುವಂತೆ ಮನವೊಲಿಸಿದ್ದರಾದರೂ ಕುಮಾರ್ ಊರಿಗೆ ಬರಲು ಒಪ್ಪಿಲ್ಲ.
ಈ ಬಗ್ಗೆ ಮಾತನಾಡಿರುವ ಕುಮಾರ್, ನಾನು ಅರ್ಧ ಎಕರೆ ಜಮೀನು ಇರುವ ಚಿಕ್ಕ ರೈತ, ಕೊರೊನಾ ವೈರಸ್ ಅಂಟಿಕೊಂಡರೆ ಜೀವ ಉಳಿಸಿಕೊಳ್ಳಲು ನನ್ನ ಬಳಿ ಹಣ ಇಲ್ಲ. ಆರು ಮತ್ತು ಏಳೂವರೆ ವರ್ಷದ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಮಕ್ಕಳು, ಹೆಂಡತಿ ಮತ್ತು ನನ್ನ ಕ್ಷೇಮದ ದೃಷ್ಟಿಯಿಂದ ಊರು ಬಿಟ್ಟು ಬಂದಿದ್ದೇನೆ. ಕೊರೊನಾ ವೈರಸ್ ಹಾವಳಿ ಸಂಪೂರ್ಣ ನಿಲ್ಲುವವರೆಗೆ ಊರಿಗೆ ಮರಳುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬೆಲೆ ಕುಸಿತದಿಂದಾಗಿ ಕಂಗಾಲಾದ ರೈತರು; ತೆಂಗು ಬೆಳೆಗಾರರು ಮತ್ತು ವ್ಯಾಪಾರಸ್ಥರಲ್ಲಿ ಹೆಚ್ಚಿದ ಆತಂಕ
Published On - 3:16 pm, Wed, 9 June 21