ವಿಜಯಪುರ: ಬಿರು ಬಿಸಿಲಿಗೆ ಹೆಸರಾದ ವಿಜಯಪುರ ಜಿಲ್ಲೆ ದ್ರಾಕ್ಷಿ, ನಿಂಬೆ, ಹಾಗೂ ದಾಳಿಂಬೆ ಬೆಳೆಗಳನ್ನು ಬೆಳೆಯಲು ಪೂರಕವಾದ ವಾತಾವರಣವನ್ನು ಹೊಂದಿದೆ. ಈ ತೋಟಗಾರಿಕಾ ಬೆಳೆಗಳ ಜೊತೆಗೆ ಬಿಳಿ ಜೋಳ ಸೇರಿದಂತೆ ಇತರೆ ಧಾನ್ಯಗಳ ಬೆಳೆಗಳಿಗೂ ಪ್ರಸಿದ್ಧಿಯನ್ನು ಪಡೆದಿದೆ. ಅಕಾಳಿಕ ಮಳೆ, ಬರ ಹಾಗೂ ಪ್ರತಿಕೂಲ ವಾತಾವರಣ ತೋಟಗಾರಿಕಾ ಹಾಗೂ ಇತರೆ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರ ನಡುವೆ ಜಿಲ್ಲೆಯ ರೈತ ಕುಟುಂಬವೊಂದು ವಾತಾವರಣಕ್ಕೆ ಹೊಂದಿಕೊಳ್ಳಲಾಗದ ಬೆಳೆಯನ್ನು ಬೆಳೆದು ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.
ರೇಷ್ಮೆ ಕೃಷಿ ಎಂದರೆ ಸಾಕು ರಾಜ್ಯದಲ್ಲಿ ರಾಮನಗರ ಜಿಲ್ಲೆ ಥಟ್ಟನೆ ನೆನಪಾಗುತ್ತದೆ. ಇಡೀ ರಾಜ್ಯದಲ್ಲಿ ಅಷ್ಟೇಯಲ್ಲಾ ದೇಶದಲ್ಲಿಯೇ ಉತೃಷ್ಟ ಗುಣಮಟ್ಟ ರೇಷ್ಮೆಯನ್ನು ರಾಮನಗರ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ರಾಮನಗರ ಜಿಲ್ಲೆಯ ವಾತಾವರಣ ರೇಷ್ಮೆಗೆ ಹೇಳಿ ಮಾಡಿಸಿದ್ದಾಗಿದೆ. ಹೀಗಾಗಿ ಇಲ್ಲಿ ಉತ್ತಮ ರೇಷ್ಮೆ ಬೆಳೆಯಲು ಸಾಧ್ಯ. ಆದರೆ ಬಿಸಿಲನಾಡು ವಿಜಯಪುರ ಜಿಲ್ಲೆಯಲ್ಲಿ ಉತೃಷ್ಟ ಗುಣಮಟ್ಟದ ರೇಷ್ಮೆ ಬೆಳೆಯುವುದಕ್ಕೆ ಸಾಧ್ಯವಿಲ್ಲ. ಕಾರಣ ಇಲ್ಲಿ ವಾತಾವರಣ, ಆಧಿಕ ಉಷ್ಟಾಂಶ ರೇಷ್ಮೆ ಬೆಳೆಗೆ ಪೂರಕವಾಗಿಲ್ಲ. ಇಷ್ಟೆಲ್ಲಾ ವೈರುಧ್ಯವಿದ್ದರೂ ವಿಜಯಪುರ ಜಿಲ್ಲೆಯಲ್ಲಿನ ಕುಟುಂಬವೊಂದು ರಾಮನಗರ ಜಿಲ್ಲೆಯ ರೇಷ್ಮೆಗಿಂತಲೂ ಉತ್ತಮ ಗುಣಮಟ್ಟದ ರೇಷ್ಮೆಯನ್ನು ಬೆಳೆದಿದೆ. ಇದು ನಂಬಲಿಕ್ಕೆ ಅಸಾಧ್ಯವಾದ ಮಾತಾದರೂ ನಿಜ.
ಆಳಾಗಿ ದುಡಿ ಅರಸನಾಗಿ ಉಣ್ಣು
ದ್ರಾಕ್ಷಿ, ನಿಂಬೆ, ದಾಳಿಂಬೆ ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳಿಗೆ ಸೂಕ್ತವಾಗಿರುವ ವಿಜಯಪುರ ಜಿಲ್ಲೆಯ ವಾತಾವರಣದಲ್ಲಿ ರೇಷ್ಮೆ ಬೆಳೆಯುವುದು ಹಾಗೂ ಆದನ್ನು ಲಾಭದಾಯಕ ಮಾಡಿಕೊಳ್ಳುವುದು ಸುಲಭದ ಮಾತಲ್ಲಾ. ಕಷ್ಟಕರವಾದ ರೇಷ್ಮೆಯನ್ನು ಬೆಳೆದು ಅದರಲ್ಲಿ ಆಧಿಕ ಲಾಭವನ್ನು ಪಡೆಯುತ್ತಿರುವ ಕುಟುಂಬವೇ ಗೂಡಲಮನಿ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಗೂಡಲಮನಿ ಎಂಬ ರೈತ ಕುಟುಂಬ ಇದೀಗ ಉತೃಷ್ಟ ಗುಣಮಟ್ದ ರೇಷ್ಮೆ ಬೆಳೆದು ಇತರರಿಗೆ ಮಾದರಿಯಾಗಿದೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ಅಂದರೆ ಎರಡೂವರೆ ಎಕರೆ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆದು ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದಾರೆ. ವಾರ್ಷಿಕವಾಗಿ 5 ರೇಷ್ಮೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಗೂಡಲಮನಿ ರೈತ ಕುಟುಂಬ. ಆಳಾಗಿ ದುಡಿ ಅರಸನಾಗಿ ಉಣ್ಣು ಎಂಬ ಗಾದೆ ಮಾತಿನಂತೆ ಮನೆ ಮಂದಿಯೆಲ್ಲಾ ದುಡಿಮೆ ಮಾಡಿ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಇಂತಹ ಬಿಸಿಲಿನ ಪ್ರದೇಶದಲ್ಲಿ ಉತ್ತಮ ರೇಷ್ಮೆ ಉತ್ಪಾದನೆ ಹಿಂದೆ ಇವರ ಸಾವಯವ ವಿಧಾನ ಅಡಕವಾಗಿದೆ. ದೇಶಿ ಹಸುಗಳ ಗೊಬ್ಬರ, ಗೋಮೂತ್ರದಿಂದ ಜೀವಾಮೃತ, ಗೋಕೃಪಾಮೃತ ತಯಾರು ಮಾಡಿ ಅದನ್ನು ರೇಷ್ಮೆಗೆ ಬಳಕೆ ಮಾಡುತ್ತಾರೆ.
ವರ್ಷದಲ್ಲಿ ಐದು ಬೆಳೆ
ಸರ್ಕಾರದ ಧನ ಸಹಾಯದಿಂಧ ರೇಷ್ಮೆ ಶೆಡ್ ನಿರ್ಮಾಣ ಮಾಡಿದ್ದಾರೆ. ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಮಾಡಿದ್ದಾರೆ. ಹಿಪ್ಪುನೇರಳೆಗೆ ಸಾವಯವ ವಿಧಾನದಿಂದಲೇ ತಯಾರಿಸಿದ ಗೊಬ್ಬರ ಹಾಗೂ ಜೀವಾಮೃತ ಹಾಗೂ ಗೋಕೃಪಾಮೃತ ಸಿಂಪಡಣೆ ಮಾಡುತ್ತಾರೆ. ಇದನ್ನು ಬಿಟ್ಟು ಯಾವುದೇ ರಸಾಯನಿಕ ಗೊಬ್ಬರ ಹಾಗೂ ಔಷಧಿಗಳನ್ನು ಇವರು ಉಪಯೋಗ ಮಾಡುವುದಿಲ್ಲಾ. ಕಳೆದ 15 ವರ್ಷಗಳಿಗಿಂತ ಹೆಚ್ಚು ವರ್ಷಗಳಿಂದಲೂ ಗೂಡಲಮನಿ ಕುಟುಂಬದವರು ಸಾವಯವ ವಿಧಾನದಿಂದಲೇ ರೇಷ್ಮೆ ಬೆಳೆಯುತ್ತಿದ್ದಾರೆ. ವರ್ಷದಲ್ಲಿ ಐದು ಬೆಳೆಗಳನ್ನು ಬೆಳೆಯುತ್ತಾರೆ. ಮೊಟ್ಟೆಯನ್ನು ರಾಮನಗರ ಹಾಗೂ ಬೆಂಗಳೂರಿನಿಂದ ತಂದು ಮರಿ ಮಾಡಿ ರೇಷ್ಮೆ ಕೃಷಿ ಮಾಡುತ್ತಾರೆ. 45 ದಿನಗಳ ಕಾಲ ರೇಷ್ಮೆ ಹುಳಗಳನ್ನು ಹಿಪ್ಪುನೇರಳೆ ಎಲೆಗಳನ್ನು ಹಾಕಿ ಬೆಳೆಸುತ್ತಾರೆ. ನಂತರ ರೇಷ್ಮೆ ಹುಳು ಗೂಡು ಕಟ್ಟಿದ ಬಳಿಕ ಮಾರಾಟಕ್ಕೆ ಸಿದ್ಧ ಮಾಡಿಕೊಳ್ಳುತ್ತಾರೆ. ರೇಷ್ಮೆ ಗೂಡುಗಳನ್ನು ಹೆಚ್ಚಾಗಿ ರಾಮನಗರದ ಮಾರುಕಟ್ಟೆಗೆ ತೆಗದುಕೊಂಡು ಹೋಗುತ್ತಾರೆ. ಅಧಿಕ ತೂಕ ಇರುವ ಗೂಡಲಮನಿಯವರ ರೇಷ್ಮೆ ಗೂಡುಗಳನ್ನು ಮಾರುಕಟ್ಟೆಯಲ್ಲಿ ಉತ್ತಮ ದರ ನೀಡಿ ಖರೀದಿ ಮಾಡುತ್ತಾರಂತೆ. ವರ್ಷದಲ್ಲಿ ಐದು ಬೆಳೆ ಬೆಳೆಯುವ ಈ ರೈತ ಕುಟುಂಬ ಪ್ರತಿ ಬೆಳೆಯಲ್ಲೂ ಖರ್ಚನ್ನು ತೆಗೆದು 1 ಲಕ್ಷಕ್ಕೂ ಆಧಿಕ ಲಾಭ ಗಳಿಸುತ್ತಾರೆ. ಎರಡೂವರೆ ಎಕರೆ ಹಿಪ್ಪು ನೇರಳೆ ಬೆಳೆದು ರೇಷ್ಮೆ ಸಾಕಾಣಿಕೆ ಮಾಡಿ ವಾರ್ಷಿಕವಾಗಿ 5 ಲಕ್ಷಕ್ಕೂ ಆಧಿಕ ಲಾಭ ಗಳಿಸುವ ಮೂಲಕ ಗೂಡಲಮನಿ ಕುಟುಂಬ ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಸಾಬೀತು ಮಾಡಿದೆ.
ಇದನ್ನೂ ಓದಿ
ಆಹುತಿ: ಆಕಸ್ಮಿಕ ಬೆಂಕಿಗೆ ಬಾಳೆ ತೋಟ ಭಸ್ಮ; 90 ಟನ್ ಇಳುವರಿ ನಷ್ಟ ಅನುಭವಿಸಿದ ಕೋಲಾರ ರೈತ
ಕರ್ನಾಟಕ ವಿಶ್ವವಿದ್ಯಾಲಯದ ಮೆರುಗನ್ನು ಹೆಚ್ಚಿಸಲಿದೆಯಾ 300 ಕೆಜಿ ತೂಕದ ತಿಮಿಂಗಿಲದ ಅಸ್ಥಿಪಂಜರ?
Published On - 6:36 pm, Wed, 17 March 21