ಆಹುತಿ: ಆಕಸ್ಮಿಕ ಬೆಂಕಿಗೆ ಬಾಳೆ ತೋಟ ಭಸ್ಮ; 90 ಟನ್ ಇಳುವರಿ ನಷ್ಟ ಅನುಭವಿಸಿದ ಕೋಲಾರ ರೈತ
ಸಾಲ ಮಾಡಿ ಬೆಳಿದಿದ್ದ ಬಾಳೆಯನ್ನು ಇನ್ನೇನು ಕಿತ್ತು ಮಾರುಕಟ್ಟೆಗೆ ಮಾರಟ ಮಾಡಬೇಕಿತ್ತು. ಈ ಮಧ್ಯೆ ಫಸಲು ಬಂದು ತಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎಂದುಕೊಂಡಿದ್ದ ರೈತನ ಬಾಳೆ ತೋಟ ಬೆಂಕಿಗಾಹುತಿಯಾಗಿದ್ದು, ಇದು ರೈತನನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.
ಕೋಲಾರ: ಕಟಾವಿಗೆ ಬಂದಿದ್ದ ಬಾಳೆ ಬೆಳೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸುಮಾರು 5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ಸುಟ್ಟು ಭಸ್ಮವಾಗಿದೆ. ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತರೊಬ್ಬರು ಬೆಳೆಯೂ ಇಲ್ಲದೆ, ಪರಿಹಾರವೂ ಇಲ್ಲದೆ ಕಂಗಾಲಾಗಿದ್ದಾರೆ. ಬಾಳೆ ಬೆಳೆ ಸಂಪೂರ್ಣವಾಗಿ ಭಸ್ಮವಾಗಿರುವ ಘಟನೆ ಕೋಲಾರದ ಕಾಕಿನತ್ತ ಗ್ರಾಮದಲ್ಲಿ ನಡೆದಿದೆ. ರೈತ ಕೃಷ್ಣಪ್ಪ ಎಂಬುವವರಿಗೆ ಸೇರಿದ 5 ಎಕರೆ ಬಾಳೆ ತೋಟಕ್ಕೆ ಯಾರೋ ಕಿಡಿಗೇಡಿಗಳು ಪಕ್ಕದ ಜಮೀನಿನಲ್ಲಿ ಬೆಳೆದು ನಿಂತಿದ್ದ ಒಣ ಹುಲ್ಲಿಗೆ ಬೆಂಕಿ ಹೊತ್ತಿಸಿರುವ ಅನುಮಾನವಿದೆ. ಇದರಿಂದ ಆಕಸ್ಮಿಕವಾಗಿ ಬಾಳೆ ತೋಟಕ್ಕೆ ಬೆಂಕಿ ಆವರಿಸಿದ್ದು, 5 ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಬಾಳೆ ತೋಟ ಬೆಂಕಿಗಾಹುತಿಯಾಗಿದೆ.
ಸಾಲ ಮಾಡಿ ಬೆಳಿದಿದ್ದ ಬಾಳೆಯನ್ನು ಇನ್ನೇನು ಕಿತ್ತು ಮಾರುಕಟ್ಟೆಗೆ ಮಾರಟ ಮಾಡಬೇಕಿತ್ತು. ಈ ಮಧ್ಯೆ ಫಸಲು ಬಂದು ತಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎಂದುಕೊಂಡಿದ್ದ ರೈತನ ಬಾಳೆ ತೋಟ ಬೆಂಕಿಗಾಹುತಿಯಾಗಿದ್ದು, ಇದು ರೈತನನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ.
ಈಗಾಗಲೇ ಜಿಲ್ಲೆಯಲ್ಲಿ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಸಂಕಷ್ಟದ ಮಧ್ಯೆ ಬಾಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ರೈತನ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ್ತಾಗಿದೆ. ಬಾಳೆ ತೋಟ ಮಾತ್ರವಲ್ಲದೆ ಬಾಳೆ ತೋಟದಲ್ಲಿ ಅಳವಡಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಿಪ್ ಹಾಗೂ ಸ್ಪ್ರಿಂಕ್ಲರ್ಗಳು ಸಹ ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದ ಸ್ಥಳೀಯರು ಹಾಗು ಕೃಷ್ಣಪ್ಪ ಬೆಂಕಿ ನಂದಿಸುವ ಕಾರ್ಯ ಮಾಡಿದ್ದರೂ ಬೆಂಕಿಯ ಕೆನ್ನಾಲಿಗೆಯಿಂದ ಸುಮಾರು 90 ಟನ್ನಷ್ಟು ಇಳುವರಿ ನಷ್ಟವಾಗಿದೆ.
ಸದ್ಯ ಈ ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವಿಷಯ ತಿಳಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಬಾಳೆ ತೋಟಕ್ಕೆ ಭೇಟಿ ನೀಡಿದೆ. ಉಪ ನಿರ್ದೇಶಕ ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ನಷ್ಟಕ್ಕೊಳಗಾದ ತೋಟವನ್ನು ಪರಿಶೀಲನೆ ನಡೆಸಿ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ
ಕರ್ನಾಟಕ ವಿಶ್ವವಿದ್ಯಾಲಯದ ಮೆರುಗನ್ನು ಹೆಚ್ಚಿಸಲಿದೆಯಾ 300 ಕೆಜಿ ತೂಕದ ತಿಮಿಂಗಿಲದ ಅಸ್ಥಿಪಂಜರ?