ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪು ಗೋಧಿಯನ್ನು ಬೆಳೆದ ಬಾಗಲಕೋಟೆ ರೈತ..

|

Updated on: Mar 27, 2021 | 11:03 AM

ರೋಗ ನಿರೋಧಕ ಶಕ್ತಿ ನೀಡುವ ಕಪ್ಪು ಗೋಧಿಯನ್ನು ಬೆಳೆದ ರಾಷ್ಟ್ರ ಪ್ರಶಸ್ತಿ ವಿಜೇತ ರೈತ ಧರೆಪ್ಪ ಕಿತ್ತೂರು ಬಯಲು ಸೀಮೆಯಲ್ಲಿ ಕಪ್ಪು ಸುಂದರಿ ಅರಳಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದವರು.

ರಾಜ್ಯದಲ್ಲೇ ಮೊದಲ ಬಾರಿಗೆ ಕಪ್ಪು ಗೋಧಿಯನ್ನು ಬೆಳೆದ ಬಾಗಲಕೋಟೆ ರೈತ..
ಕಪ್ಪು ಗೋಧಿ
Follow us on

ಬಾಗಲಕೋಟೆ: ಜಿಲ್ಲೆಯ ಧರೆಪ್ಪ ಕಿತ್ತೂರು ಎಂಬ ರೈತ ಯಾವಾಗಲೂ ಹೊಸತನ ಪ್ರಯೋಗ ಮಾಡುವುದರಲ್ಲಿ ನಿಸ್ಸೀಮ. ತನ್ನ ಹೊಲದಲ್ಲಿ ಸಂಪೂರ್ಣ ಸಾವಯವ ಕೃಷಿ ಮಾಡಿ ಹೆಸರು ಮಾಡಿದ್ದಾರೆ‌. ಇನ್ನೊಂದು ವಿಶೇಷತೆ ಎಂದರೆ ಜಾನುವಾರುಗಳನ್ನು ಸಾಕಿ ಹೈನುಗಾರಿಕೆ ಮಾಡುತ್ತಿದ್ದು, ದನಕರುಗಳ ಕೊಟ್ಟಿಗೆಯಲ್ಲಿ ಅವುಗಳಿಗೆ ಸಂಗೀತ ಕೇಳಿಸಿ ಹಾಲು ಕರೆಯುವಂತಹ ವಿಭಿನ್ನ ಪ್ರಯೋಗ ಮಾಡಿದ್ದಾರೆ. ಜೊತೆಗೆ ಹೊಲದಲ್ಲಿ ಧ್ವನಿವರ್ಧಕ ಹಾಕಿ ಬೆಳೆಗಳಿಗೂ ಸಂಗೀತ ಕೇಳಿಸುತ್ತಾರೆ. ಇದರ ಜೊತೆಗೆ ತನ್ನ ಹೊಲದಲ್ಲಿ ಕಪ್ಪು ಗೋಧಿಯನ್ನು ಬೆಳೆದು ಪ್ರಯೋಗ ಮಾಡಿದ್ದಾರೆ.

ರೋಗ ನಿರೋಧಕ ಶಕ್ತಿ ನೀಡುವ ಕಪ್ಪು ಗೋಧಿಯನ್ನು ಬೆಳೆದ ರಾಷ್ಟ್ರ ಪ್ರಶಸ್ತಿ ವಿಜೇತ ರೈತ ಧರೆಪ್ಪ ಕಿತ್ತೂರು ಬಯಲು ಸೀಮೆಯಲ್ಲಿ ಕಪ್ಪು ಸುಂದರಿ ಅರಳಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದವರು. ಕೃಷಿಯಲ್ಲಿ ಯಾರು ಮಾಡಲಾರದನ್ನು ತಾವು ಮಾಡಿ ಅದನ್ನು ಇತರರಿಗೆ ತಿಳಿಸಿ ಅವರನ್ನು ಉತ್ತಮ ಕೃಷಿಗೆ ಪ್ರೇರೆಪಿಸುವ ಗುಣ ಹೊಂದಿರುವ ಧರೆಪ್ಪ ಕಿತ್ತೂರು ಈಗ ಮತ್ತೊಂದು ವಿನೂತನ ಪ್ರಯತ್ನ ಮಾಡಿದ್ದು, ಬಯಲು ಸೀಮೆಯಲ್ಲಿ ಕಪ್ಪು ಗೋಧಿ ಬೆಳೆದು ದಾಖಲೆ ಮಾಡಿದ್ದಾರೆ. ತಮ್ಮ ಕಾಲತಿಪ್ಪಿ ರಸ್ತೆಯಲ್ಲಿರುವ ಅರ್ಧ ಏಕರೆ ಭೂಮಿಯಲ್ಲಿ ಕಪ್ಪು ಗೋಧಿಯನ್ನು ನಾಟಿ ಮಾಡಿದ್ದಾರೆ. ಅದಕ್ಕೂ ಮೊದಲು ತಿಪ್ಪೆಗೊಬ್ಬರ, ಎರೆಹುಳು, ಬೇವಿನಹಿಂಡಿ, ಬೀಜೋಪಚಾರ ಮಾಡಿ, ಸಾವಯವ ಕೃಷಿಯಲ್ಲಿ ಬೆಳೆ ಬೆಳೆದಿದ್ದಾರೆ. ಒಂದು ತೆನೆ 30 ರಿಂದ 40 ಕಾಳುಗಳನ್ನು ಬಿಟ್ಟಿದ್ದು, ಅರ್ಧ ಎಕರೆಯಲ್ಲಿ 5 ಕ್ವಿಂಟಾಲ್ ಇಳುವರಿ ನೀಡಿದೆ.

ಧ್ವನಿವರ್ಧಕ ಹಾಕಿ ಬೆಳೆಗಳಿಗೆ ಸಂಗೀತ ಕೇಳಿಸುತ್ತಾರೆ

ರೋಗ ನಿರೋಧಕ ಶಕ್ತಿ ಹೊಂದಿರುವ ಕಪ್ಪು ಗೋಧಿ
ಗೋಧಿಯನ್ನು ಕೇವಲ ಆಹಾರಕ್ಕಾಗಿ ಬಳಸುತ್ತೇವೆ. ಅದರಿಂದ ಪೌಷ್ಟಿಕಾಂಶ ಸಿಗುತ್ತದೆ ಎಂದು ನಾವೆಲ್ಲರೂ ಅಂದುಕೊಳ್ಳುತ್ತೇವೆ. ಅದು ನಿಜ ಕೂಡ. ಆದರೆ ಈ ಕಪ್ಪು ಗೋಧಿ ಸಹಜವಾದ ಗೋಧಿಯಂತಲ್ಲ. ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆಯಂತೆ. ಇದು ಔಷಧಿಯ ಗುಣ ಹೊಂದಿದ್ದು, ಮನುಷ್ಯನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಆ್ಯಂಟಿ ಆಕ್ಸಿಡೆಂಟ್, ವಿಟಿಮಿನ್ ಬಿ, ಪಾಲಿಕ್ ಆ್ಯಸಿಡ್, ಐರನ್, ಕಾಪರ್ ಪೊಟ್ಯಾಷಿಯಂ, ಪೈಬರ್, ಜಿಂಕ್, ಮ್ಯಾಗ್ನೇಷಿಯಂ ಸೇರಿದಂತೆ ಹಲವು ಲವಣಾಂಶಗಳನ್ನು ಹೊಂದಿದೆ. ಹೀಗಾಗಿ ಬಹುತೇಕ ಪೋಷಕಾಂಶಗಳನ್ನು ಹೊಂದಿದ ಈ ಬೆಳೆಗೆ ಬಲು ಬೇಡಿಕೆ ಇದೆ. ಡಯಾಬಿಟಿಸ್, ಕ್ಯಾನ್ಸರ್, ರಕ್ತದ ಒತ್ತಡ, ಬಿಪಿ ಇರುವಂತಹ ರೋಗಿಗಳಿಗೆ ಇದು ರಾಮಬಾಣವಾಗಿದೆ ಎಂಬುದು ಆಹಾರ ತಜ್ಞರ ಅಭಿಪ್ರಾಯವೂ ಆಗಿದೆ. ಇದನ್ನು ಬೆಳೆದ ಧರೆಪ್ಪ, ಇದೀಗ ಜನತೆ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡುತ್ತಿದ್ದು, ರೋಗ ನೀರೋಧಕ ಶಕ್ತಿ ಹೊಂದಿರುವ ಕಪ್ಪು ಗೋಧಿಗೆ ಬಾರಿ ಬೇಡಿಕೆ ಬರಬಹುದು. ಅದರ ಬೇಡಿಕೆಯನ್ನು ನೋಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಲು ನಿರ್ಧರಿಸಿದ್ದೇನೆ ಎನ್ನುತ್ತಾರೆ.

ಜಾನುವಾರುಗಳೊಂದಿಗೆ ನಿಂತಿರುವ ರೈತ ಧರೆಪ್ಪ ಕಿತ್ತೂರು

ಕಪ್ಪು ಗೋಧಿ ತಂದಿದ್ದು ಎಲ್ಲಿಂದ?
ಕಪ್ಪು ಗೋಧಿ ಸಾಮಾನ್ಯವಾಗಿ ನಮ್ಮ ರಾಜ್ಯದಲ್ಲಿ ಬೆಳೆಯುವುದಿಲ್ಲ‌. ಇದರ ಬೀಜ ಸಿಗುವುದು ಕೂಡ ತುಂಬಾನೆ ವಿರಳ. ಇದರಿಂದ ಧರೆಪ್ಪ ಕಿತ್ತೂರು ಮಧ್ಯಪ್ರದೇಶದಿಂದ ಬೀಜವನ್ನು ತರಿಸಿದ್ದಾರೆ. ಮಧ್ಯಪ್ರದೇಶದ ಸೂರತ್ನ ರೈತ ಮದನ್ ಮೋಹನ್ನ ಸಂಪರ್ಕಿಸಿ ಈ ಕಪ್ಪು ಗೋಧಿಯನ್ನು ಟ್ರಾನ್ಸ್ಪೋರ್ಟ್ ಮೂಲಕ ತರಿಸಿಕೊಂಡಿದ್ದಾರೆ. 80 ರೂ. ಗೆ ಒಂದು ಕೆಜಿಯಂತೆ ಒಟ್ಟು ಐವತ್ತು ಕೆಜಿ ಬೀಜ ಖರೀದಿಸಿದ್ದು, 20 ಕೆಜಿ ಬಿತ್ತನೆ ಮಾಡಿದ್ದಾರೆ. ಜೊತೆಗೆ ಇದು ತುಂಬಾ ರುಚಿಯಾಗಿರುತ್ತದೆ ಎಂದು ಹೇಳುತ್ತಿದ್ದಾರೆ.

ಬೆಲೆ ಹೇಗಿದೆ?
ಧರೆಪ್ಪ ಕಿತ್ತೂರು ತಮ್ಮ ಅರ್ಧ ಎಕರೆಯಲ್ಲಿ ಕಪ್ಪು ಗೋಧಿ ಬೆಳೆದಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಿದ್ದು, ಈಗ ಬೆಳೆ ಫಸಲಿಗೆ ಬಂದಿದೆ‌. ನೂರರಿಂದ ನೂರಾ ಐದು ದಿನಕ್ಕೆ ಫಸಲು ರೈತರ ಕೈ ಸೇರಲಿದ್ದು, ಅರ್ಧ ಏಕರೆಯಲ್ಲಿ ಸುಮಾರು 50 ಸಾವಿರ ಲಾಭಗಳಿಸಬಹುದು. ಇದನ್ನು ಸ್ವತಃ ಬೆಳೆದು ಲಾಭ ಪಡೆದ ಧರೆಪ್ಪ ಕಿತ್ತೂರು ಅವರೆ ಸ್ಪಷ್ಟಪಡಿಸಿದ್ದಾರೆ. ಕಪ್ಪು ಗೋಧಿಗೆ ಸದ್ಯ ಮಾರುಕಟ್ಟೆಯಲ್ಲಿ ಕೆಜಿಗೆ 100 ರೂ ರಿಂದ 120 ರೂ ವರೆಗೆ ಮಾರಾಟವಾಗುತ್ತದೆ.

ಸಾಮಾನ್ಯ ಗೋಧಿಗೂ ಕಪ್ಪು ಗೋಧಿಗೆ ಏನು ವ್ಯತ್ಯಾಸ?
ಕಪ್ಪು ಗೋಧಿಯಿಂದ ಏನು ತಯಾರಿಸಬಹುದು?ಯಾವೆಲ್ಲ ಅಡುಗೆ ಮಾಡಬಹುದು ಅಂತ ಯೋಚಿಸಬಹುದು. ಆದರೆ ಇದರ ಬಣ್ಣ ಮಾತ್ರ ಕಪ್ಪು. ಉಳಿದಂತೆ ಈ ಗೋಧಿಯನ್ನು ಸಹಜ ಗೋಧಿಯಂತೆ ಚಪಾತಿ, ಗೋಧಿ ಹುಗ್ಗಿ, ಉಪ್ಪಿಟ್ಟು ಸೇರಿದಂತೆ ಸಾಮಾನ್ಯ ಗೋಧಿಯಿಂದ ಏನೆಲ್ಲ ಮಾಡಬಹುದೊ ಅದನ್ನು ತಯಾರಿಸಬಹುದು.

ಕಪ್ಪು ಗೋಧಿಯನ್ನು ಸದ್ಯ ಪ್ರಾಯೋಗಿಕವಾಗಿ ಬೆಳೆಯುತ್ತಿದ್ದೇವೆ. ಕಪ್ಪು ಗೋಧಿ ಪುರಾತನವಾದ ಬೆಳೆಯಾಗಿದ್ದು, ಸಧ್ಯ ಮಧ್ಯಪ್ರದೇಶದಲ್ಲಿ ಮಾತ್ರ ಬೆಳೆಯುತ್ತಾರೆ. ಇದನ್ನು ಬೆಳೆಯುವುದರ ಜೊತೆಗೆ ಮೊದಲು ಬಳಕೆ ಮಾಡಿದ್ದೇನೆ. ಕಡಿಮೆ ಖರ್ಚಿನಲ್ಲಿ ಸಾವಯವ ಪದ್ಧತಿಯಿಂದ ಗೋಧಿಯನ್ನು ಬೆಳೆದಿದ್ದೇನೆ ಎಂದು ರೈತ ಧರೆಪ್ಪ ಹೇಳಿದರು. ಇವರು ಓದಿದ್ದು 9ನೇ ತರಗತಿ. ಆದರೆ ಕೃಷಿಯಲ್ಲಿನ ಪಾಂಡಿತ್ಯ ಹಾಗೂ ಸಾಧಿಸಿದ ಸಾಧನೆ ಅಪಾರ. ತಮ್ಮ ಸ್ವಂತ ಅನುಭವಗಳೊಂದಿಗೆ ಕೃಷಿಯಲ್ಲಿ ಹಲವಾರು ವಿನೂತನ ಪ್ರಯೋಗಗಳನ್ನು ಮಾಡುತ್ತಾ ಸಾವಯವ ಕೃಷಿಯಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಲಾಭವನ್ನು ಗಳಿಸುತ್ತಿರುವ ಧರೆಪ್ಪ ಹಲವಾರು ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳನ್ನು ಪಡೆದು ಇತರೆ ರೈತರಿಗೆ ಸ್ಪೂರ್ತಿಯಾಗಿದ್ದಾರೆ.

ಇದನ್ನೂ ಓದಿ

ರೈತರ ಪ್ರತಿಭಟನೆ ಬಗ್ಗೆ ಆಕ್ಷೇಪಾರ್ಹ ಟ್ವೀಟ್: ನಟಿ ಕಂಗನಾ ರಣಾವತ್ ವಿರುದ್ಧದ ಎಫ್ಐಆರ್ ರದ್ದು

ಬೀದಿಗಿಳಿದು ಧರಣಿ ನಡೆಸಿದ ಚಿತ್ರದುರ್ಗ ರೈತರು; ನ್ಯಾಯ ಕೊಡಿಸುವ ಭರವಸೆ ನೀಡಿದ ಮಾಜಿ ಸಚಿವ