ಬೀದಿಗಿಳಿದು ಧರಣಿ ನಡೆಸಿದ ಚಿತ್ರದುರ್ಗ ರೈತರು; ನ್ಯಾಯ ಕೊಡಿಸುವ ಭರವಸೆ ನೀಡಿದ ಮಾಜಿ ಸಚಿವ
ರೈತರ ಪ್ರತಿಭಟನೆಗೆ ಹೊಳಲ್ಕೆರೆ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಸಾಥ್ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಗಂಗಾ ಕಲ್ಯಾಣ ಯೋಜನೆ ಅಡಿ 600 ಕೊಳವೆಬಾವಿ ತಂದಿದ್ದೆ.
ಚಿತ್ರದುರ್ಗ: ಬಯಲು ಸೀಮೆ ರೈತರ ಕೃಷಿ ಕಾಯಕಕ್ಕೆ ಕೊಳವೆ ಬಾವಿಯೇ ಮೂಲ ಆಧಾರ. ಆದರೆ ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಗಂಗಾ ಕಲ್ಯಾಣ ಯೋಜನೆಯ ಸ್ಥಿತಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ರೈತರು ಬೀದಿಗಿಳಿದು ಅನಿರ್ಧಿಷ್ಠಾವಧಿ ಹೋರಾಟಕ್ಕೆ ಇಳಿದರು.
2017-18ರಲ್ಲಿ ಹೊಳಲ್ಕೆರೆ ಕ್ಷೇತ್ರಕ್ಕೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 600 ಕೊಳವೆ ಬಾವಿಗಳು ಮಂಜೂರಾಗಿದ್ದು, ಫಲಾನುಭವಿಗಳ ಆಯ್ಕೆ ಪಟ್ಟಿಯೂ ಅಂತಿಮವಾಗಿದೆ. ಆದರೆ ತದನಂತರ ಆಯ್ಕೆಯಾಗಿ ಬಂದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿರುವ ಆಯ್ಕೆ ಪಟ್ಟಿ ಎಂಬ ಕಾರಣಕ್ಕೆ ತಡೆ ಹಿಡಿದಿದ್ದಾರೆ. ಕಳೆದ ಮೂರು ವರ್ಷದಿಂದ ಯಾರಿಗೂ ಕೊಳವೆ ಬಾವಿ ಯೋಜನೆ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ನೂರಾರು ಜನ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದ್ದು ರೈತ ಸಂಘದ ನೇತೃತ್ವದಲ್ಲಿ ಅನಿರ್ಧಿಷ್ಠಾವಧಿ ಧರಣಿ ನಡೆಸಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ರಾಜಕಾರಣ ಬದಿಗೊತ್ತಿ ಕೂಡಲೆ ರೈತರಿಗೆ ಕೊಳವೆ ಬಾವಿ ಕೊರೆಸಬೇಕೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ರೈತರ ಪ್ರತಿಭಟನೆಗೆ ಹೊಳಲ್ಕೆರೆ ಕ್ಷೇತ್ರದ ಮಾಜಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಸಾಥ್ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಗಂಗಾ ಕಲ್ಯಾಣ ಯೋಜನೆ ಅಡಿ 600 ಕೊಳವೆ ಬಾವಿ ತಂದಿದ್ದೆ. ನಿಯಮಾನುಸಾರವೇ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ ಕೊಳವೆ ಬಾವಿ ಕೊರೆಯುವುದನ್ನು ತಡೆ ಹಿಡಿದು ಹೃದಯವೇ ಇಲ್ಲದ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಜನ ವಿರೋಧಿ ನೀತಿಯಿಂದ ನಡೆಯುತ್ತಿದ್ದಾರೆ. ಶಾಸಕರಾಗಿ ತಿನ್ನುವ ತಟ್ಟೆ ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಾನು ರೈತರ ಪರವಾಗಿ ನಿಲ್ಲುತ್ತೇನೆ ಎಂದು ರೈತ ಚಳುವಳಿ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದು ರೈತರಿಗೆ ನ್ಯಾಯ ಕೊಡಿಸುವ ಕೆಲಸ ಭರವಸೆ ನೀಡಿದರು.
ಇದನ್ನೂ ಓದಿ