ಫಾಜಿಲ್ ಕೊಲೆ ಪ್ರಕರಣದ ಆರು ಆರೋಪಿಗಳು ಅರೆಸ್ಟ್: ಹಂತಕರು ಮಾಡಿದ ಪ್ಲಾನ್​ನ ಸಂಪೂರ್ಣ ಮಾಹಿತಿ ಇಲ್ಲಿದೆ

| Updated By: ಡಾ. ಭಾಸ್ಕರ ಹೆಗಡೆ

Updated on: Aug 02, 2022 | 5:00 PM

ಫಾಜಿಲ್ ಕೊಲೆ ಪ್ರಕರಣ ಸಂಬಂಧ ಇಂದು ಬೆಳ್ಳಂಬೆಳಗ್ಗೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯರಾತ್ರಿ ಆರೋಪಿಗಳ ಖಚಿತ ಮಾಹಿತಿ ಪಡೆದ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಉದ್ಯಾವರದಲ್ಲಿ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.

ಫಾಜಿಲ್ ಕೊಲೆ ಪ್ರಕರಣದ ಆರು ಆರೋಪಿಗಳು ಅರೆಸ್ಟ್: ಹಂತಕರು ಮಾಡಿದ ಪ್ಲಾನ್​ನ ಸಂಪೂರ್ಣ ಮಾಹಿತಿ ಇಲ್ಲಿದೆ
ಸುಹಾಸ್ ಶೆಟ್ಟಿ
Follow us on

ಮಂಗಳೂರು: ಸುರತ್ಕಲ್​ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣ ಸಂಬಂಧ ಇಂದು ಬೆಳ್ಳಂಬೆಳಗ್ಗೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯರಾತ್ರಿ ಆರೋಪಿಗಳ ಖಚಿತ ಮಾಹಿತಿ ಪಡೆದ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಉದ್ಯಾವರದಲ್ಲಿ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಹತ್ಯೆ ಬಗ್ಗೆ ಇಂಚಿಂಚು ಮಾಹಿತಿಯನ್ನು ಹೊರಹಾಕಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಹತ್ಯೆ ನಡೆಸಿದವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಸುಹಾಸ್ ಶೆಟ್ಟಿ (29) ಮೋಹನ್​ (26) ಗಿರಿಧರ್ (23) ಅಭಿಷೇಕ್ (21) ಶ್ರೀನಿವಾಸ್ (23) ದೀಕ್ಷಿತ್ (21) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಅಪರಾಧ ಹಿನ್ನೆಲೆಯುಳ್ಳವರಾಗಿದ್ದಾರೆ. ಬಜ್ಪೆ ನಿವಾಸಿ  ಸುಹಾಸ್ ವಿರುದ್ಧ ಬಜ್ಪೆ ಮತ್ತು ಬೆಳ್ತಂಗಡಿಯಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, 2010ರಲ್ಲಿ ನಡೆದ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾನೆ. ಮೋಹನ್ ವಿರುದ್ಧ ಸುರತ್ಕಲ್ ಮತ್ತು ಕಾವೂರಿನಲ್ಲಿ ಎರಡು ಪ್ರಕರಣಗಳು, ಸುರತ್ಕಲ್ ನಿವಾಸಿ ಗಿರಿಧರ್ ವಿರುದ್ಧ 2 ಪ್ರಕರಣಗಳು, ಕಾಟಿಪಳ್ಳ ನಿವಾಸಿ ಅಭಿಷೇಕ್ ವಿರುದ್ಧ ಸುರತ್ಕಲ್​ನಲ್ಲಿ 2 ಪ್ರಕರಣಗಳು, ಕಾಟಿಪಳ್ಳದ ನಿವಾಸಿ ಶ್ರೀನಿವಾಸ್ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ 1 ಸುರತ್ಕಲ್​ನಲ್ಲಿ 3 ಪ್ರಕಣಗಳು ಹಾಗೂ ದೀಕ್ಷಿತ್ ವಿರುದ್ಧ 3 ಪಕ್ರರಣಗಳು ದಾಖಲಾಗಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಹಂತಕರ ಪಕ್ಕಾ ಪ್ಲಾನ್​ಗೆ ಫಾಜಿಲ್ ಕೊಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ಹತ್ಯೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಸುರತ್ಕಲ್​ನಲ್ಲಿ ಫಾಜಿಲ್ ಕೊಲೆ ನಡೆಯಿತು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಫಾಜಿಲ್ ಕೊಲೆಗೆ ಹಾಕಿದ ಸಂಚಿನ ಬಗ್ಗೆ ಬಾಯಿಬಿಟ್ಟಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ಕೃತ್ಯದ ಸಂಚಿನಲ್ಲಿ ಭಾಗಿಯಾಗುವ ಮೂಲಕ ಪರಿಚಿತರಾಗಿದ್ದಾರೆ ಎಂಬುದು ಗಮನಿಸಿಬೇಕಾದ ಅಂಶಗಳಲ್ಲಿ ಒಂದು.

ಆರೋಪಿ ಸುಹಾಸ್ ಅಭಿಷೇಕ್​ನೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಓರ್ವನನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡುತ್ತಾನೆ. ಜು.27ರಂದು ಸುರತ್ಕಲ್​ನ ಒಂದು ಕಡೆಯಲ್ಲಿ ಅಭಿಷೇಕ್ ಸುಹಾಸ್ ಉಳಿದವರನ್ನು ಸೇರಿಸಿಕೊಂಡು ಮಾತುಕತೆ ನಡೆಸಿ ಕೃತ್ಯಕ್ಕೆ ಕಾರಿನ ಅವಶ್ಯಕತೆ ಬಗ್ಗೆ ಹೇಳಿಕೊಂಡಿದ್ದಾರೆ. ಅದರಂತೆ ಮೋಹನ್ ಮತ್ತು ಗಿರಿಧರ್ ಮಧ್ಯಾಹ್ನದ ವೇಳೆಗೆ ಅಜಿತ್ ಕ್ರಾಸ್ತಾ ಅವರ ಕಾರನ್ನು 15 ಸಾವಿರ ರೂಪಾಯಿಗೆ ಡೀಲ್ ಮಾಡಿ ತರುತ್ತಾರೆ.

ಹತ್ಯೆ ಸಂಚಿನಂತೆ ಜು.27ರಂದು ಸಂಜೆ ಸುಹಾಸ್ ಗಿರಿಧರ್ ಮೋಹನ್ ಚರ್ಚೆ ನಡೆಸಿ ತಮಗೆ ಆಗದವರ ಹೆಸರಿನ ಪಟ್ಟಿ ತಯಾರಿಸುತ್ತಾರೆ. 28ರ ಬೆಳಗ್ಗೆ ಸುಹಾಸ್ ಮಾರಕಾಸ್ತ್ರಗಳನ್ನು ಸಿದ್ಧಪಡಿಸುತ್ತಾನೆ. ಅಂದು ಮತ್ತೆ ಚರ್ಚೆ ನಡೆಸಿದಾಗ ಹತ್ಯೆಗೆ ಫಾಜಿಲ್ ಹೆಸರನ್ನು ಫೈನಲ್ ಮಾಡುತ್ತಾರೆ. ನಂತರ ಫಾಜಿಲ್​ನ ಚಲನವಲನಗಳ ಮೇಲೆ ಆರೋಪಿಗಳು ನಿಗಾ ಇಡಲು ಆರಂಭಿಸಿದ್ದಾರೆ.

ಅಂದು ಸಂಜೆ ಆರು ಜನರು ಕಾರಿನಲ್ಲಿ ಬಂದು ಫಾಜಿಲ್​ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ಸರಿಯಾದ ಸ್ಥಳದಲ್ಲಿ ಫಾಜಿಲ್ ಕಣ್ಣಿಗೆ ಬೀಳುತ್ತಿದ್ದಂತೆ ಸುಹಾಸ್, ಮೋಹನ್, ಅಭೀಷೇಕ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಪರಾರಿಯಾಗಿದ್ದಾರೆ. ಕೃತ್ಯದ ವೇಳೆ ಗಿರಿಧರ್ ಕಾರು ಚಾಲಕನಾಗಿದ್ದನು, ದೀಕ್ಷಿತ್ ಕಾರಿನಲ್ಲೇ ಕುಳಿತಿದ್ದನು, ಶ್ರೀನಿವಾಸ್ ಕೃತ್ಯ ನಡೆಸಿ ಪರಾರಿಯಾಗುವ ಸಂದರ್ಭದಲ್ಲಿ ಯಾರು ಕೂಡ ಅಡ್ಡಿ ಬರುಬಾರದೆಂದು ಕಾರಿನ ಬಳಿ ನಿಲ್ಲುತ್ತಾನೆ.

ಕೃತ್ಯ ನಡೆಸಿದ ಬಳಿಕ ಕಾರಿನಲ್ಲೇ ಪರಾರಿಯಾದ ಆರೋಪಿಗಳು, ಕಾರ್ಕಾಳಕ್ಕೆ ಹೋಗಿದ್ದಾರೆ. ಅಲ್ಲಿ ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಬೇರೋಂದು ಕಾರಿನಲ್ಲಿ ಓಡಾಟ ನಡೆಸಲು ಪ್ರಾರಂಭಿಸಿದ್ದಾರೆ. ಅದಾಗ್ಯೂ ಬೇರೆಬೇರೆ ಕಡೆಗಳಲ್ಲಿ ಆರೋಪಿಗಳು ನೆಲೆಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ನಡುವೆ ಇಂದು ಬೆಳಗ್ಗೆ 2 ಗಂಟೆ ಸುಮಾರಿಗೆ ಪೊಲೀಸರಿಗೆ ಹಂತಕರ ಸುಳಿವು ಸಿಗುತ್ತದೆ. ಅದರಂತೆ ಕಾರ್ಯಾಚರಣೆಗಿಳಿದ ಪೊಲೀಸರು ಉದ್ಯಾವರದಲ್ಲಿ ಬೆಳಗ್ಗೆ 5.30ರ ಸುಮಾರಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೃತ್ಯ ಎಸಗಿದ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಹೀಗಾಗಿ ಆರು ಮಂದಿಯನ್ನು ಕೂಡ ಬಂಧಿಸಲಾಗಿದೆ.

ಹಂತಕರು ತಯಾರಿಸಿದ ಪಟ್ಟಿಯ ಬಗ್ಗೆ ತನಿಖೆ

ಕೃತ್ಯ ಎಸಗಿರುವುದು ಸಾಬೀತಾದ ಹಿನ್ನೆಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಕಸ್ಟಡಿಗೆ ಪಡೆಯಲಿದ್ದೇವೆ. ಕೃತ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದವರ ವಿರುದ್ಧವೂ ಕ್ರಮ ಕೈಗೊಳ್ಳಲಿದ್ದವೆ. ಆರೋಪಿಗಳು ಹತ್ಯೆಗಾಗಿ ಮಾಡಿದ ಪಟ್ಟಿಯ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಹತ್ಯೆ ನಡೆದ ನಂತರ ಕೃತ್ಯಕ್ಕೆ ಪ್ರೇಮ ಪ್ರಕರಣ ಮತ್ತು ಫಾಜಿಲ್ ಸಮುದಾಯದವರ ಒಳಗಡೆ ಇರುವ ಪಂಗಡಗಳ ನಡುವೆ ಆದಂತಹ ವ್ಯತ್ಯಾಸಗಳೇ ಕಾರಣ ಎಂಬ ಸುದ್ದಿ ಹರಿದಾಡಿದ್ದವು. ಆದರೆ ಕೃತ್ಯಕ್ಕೆ ಇವ್ಯಾವುದೇ ಕಾರಣಗಳಲ್ಲ ಎಂದು ಆಯುಕ್ತರು ಹೇಳಿದ್ದಾರೆ, ಕೃತ್ಯವನ್ನು ನಾವೇ ಮಾಡಿದ್ದೇವೆ, ನಮ್ಮ ಹುಡುಗರೇ ಮಾಡಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಅಂತಹವರನ್ನು ಕೂಡ ತನಿಖೆಗೆ ಒಳಪಡಿಸಲಾಗುವುದು ಎಂದರು.

Published On - 1:16 pm, Tue, 2 August 22