ಅಣ್ಣ-ತಂಗಿಯರ ಬಾಂಧವ್ಯದ ‘ನಾಗರ ಪಂಚಮಿ’ ಮೇಲೆಯೂ ಕೊರೊನಾ ಕರಿನೆರಳು
ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯಿಂದ ಹಬ್ಬಗಳ ಸರಮಾಲೆಯೇ ಪ್ರಾರಂಭವಾಗುತ್ತದೆ. ಅದರಲ್ಲಿ ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಸಹೋದರತೆಯ ಪ್ರೀತಿಯನ್ನು ತೋರಿಸುವ ಹಬ್ಬವೆಂದ್ರೆ ಅದು ನಾಗರ ಪಂಚಮಿ. ಅದಕ್ಕಾಗಿ ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ ಅಂತ ಉತ್ತರ ಕರ್ನಾಟಕದ ಜಾನಪದ ಸಾಹಿತ್ಯದಲ್ಲಿ ನಾಗರ ಪಂಚಮಿಯನ್ನು ವರ್ಣಿಸಲಾಗಿದೆ. ಆದರೆ ಈ ಬಾರಿಯ ಹಬ್ಬದ ಮೇಲೆ ಕೊರೊನಾ ತನ್ನ ಕರಾಳ ಛಾಯೆಯನ್ನ ಹಬ್ಬಿಸಿದೆ. ಅಣ್ಣ ತಂಗಿಯರ ಬಾಂಧವ್ಯದ ಹಬ್ಬ ಹೌದು ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ, ಅಣ್ಣ […]

ಕಲಬುರಗಿ: ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯಿಂದ ಹಬ್ಬಗಳ ಸರಮಾಲೆಯೇ ಪ್ರಾರಂಭವಾಗುತ್ತದೆ. ಅದರಲ್ಲಿ ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಸಹೋದರತೆಯ ಪ್ರೀತಿಯನ್ನು ತೋರಿಸುವ ಹಬ್ಬವೆಂದ್ರೆ ಅದು ನಾಗರ ಪಂಚಮಿ. ಅದಕ್ಕಾಗಿ ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ ಅಂತ ಉತ್ತರ ಕರ್ನಾಟಕದ ಜಾನಪದ ಸಾಹಿತ್ಯದಲ್ಲಿ ನಾಗರ ಪಂಚಮಿಯನ್ನು ವರ್ಣಿಸಲಾಗಿದೆ. ಆದರೆ ಈ ಬಾರಿಯ ಹಬ್ಬದ ಮೇಲೆ ಕೊರೊನಾ ತನ್ನ ಕರಾಳ ಛಾಯೆಯನ್ನ ಹಬ್ಬಿಸಿದೆ.
ಅಣ್ಣ ತಂಗಿಯರ ಬಾಂಧವ್ಯದ ಹಬ್ಬ ಹೌದು ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ, ಅಣ್ಣ ಬರಲಿಲ್ಲಾ ಕರಿಯಾಕ ಅಂತ ಜಾನಪದ ಗೀತೆಯಿದೆ. ಉತ್ತರ ಕರ್ನಾಟಕ ಭಾಗದ ಹಬ್ಬಗಳ ಹೆಬ್ಬಾಗಿಲಾಗಿರುವ ಶ್ರಾವಣ ಮಾಸದಲ್ಲಿ ಆಚರಿಸುವ ಬಹು ದೊಡ್ಡ ಹಬ್ಬ ಇದು. ನಾಗರ ಪಂಚಮಿಗೆ ಸಹೋದರಿಯರು ಬಂದು ಸಹೋದರರು ಮತ್ತು ಆತನ ಕುಟುಂಬದ ಜೊತೆ ಸೇರಿ ನಾಗರಾಜನಿಗೆ ಹಾಲೆರದು, ಖುಷಿ ಪಡುವ ಹಬ್ಬವಿದು.

ಬಗೆ ಬಗೆಯ ತಿಂಡಿಗಳ ಸಂಭ್ರಮ ಬಲು ಜೋರು ಪಂಚಮಿ ಹಬ್ಬದ ಹಿಂದಿನ ದಿನ ಹೆಣ್ಣು ಮಕ್ಕಳು ತಮ್ಮ ಅಣ್ಣ ತಮ್ಮಂದಿರ ಆಯುಷ್ಯ ಹೆಚ್ಚಾಗಲೆಂದು ಪ್ರಾರ್ಥಿಸಿ ಉಪವಾಸ ಮಾಡುತ್ತಾರೆ. ಪಂಚಮಿ ದಿನ ಅಲ್ಲಲ್ಲಿ ಸಾರ್ವಜನಿಕವಾಗಿ ದೊಡ್ಡ ದೊಡ್ಡ ಜೋಕಾಲಿ ಹಾಕಿ ಹೆಂಗಸರು ಮಕ್ಕಳು ಮನೆಯವರೆಲ್ಲಾ ಜೋಕಾಲಿ ಆಡುವರು.
ಪೂಜೆಗೆಂದು ಜೋಳದ ಅರಳು ಹುರಿದು ಸಿಹಿ ಅಡುಗೆ ಮಾಡುವರು. ಅಂದು ಎಣ್ಣೆಯಲ್ಲಿ ಹುರಿಯುವದಾಗಲಿ, ಕರಿಯುವದಾಗಲಿ ಅಥವಾ ಕತ್ತರಿಸುವುದಾಗಲಿ ನಿಷಿದ್ದ. ಎಲ್ಲವೂ ಹಬೆಯಲ್ಲಿ ಬೇಯಿಸಿ, ಕುದಿಸಿ ಸಿಹಿ ಕಡಬು, ಖಾರದ ಕಡಬು ಮಾಡುವರು. ವಾರದ ಮುಂಚೆ ನಾನಾ ಬಗೆಯ ಉಂಡೆಗಳು ಸೇರಿದಂತೆ ಸಿಹಿ ತಿಂಡಿ ತಯಾರಿಸಿಟ್ಟಿರುತ್ತಾರೆ.

ಜೋಕಾಲಿ ಹಬ್ಬ ನಾಗರಪಂಚಮಿ ನಾಗರ ಪಂಚಮಿಯಂದು ನಾಗರ ಹುತ್ತ ಅಥವಾ ಮೂರ್ತಿಗೆ ಹಾಲೆರೆದು ನಾಗರ ಹೆಸರಿನಲ್ಲಿ ಹೆಣ್ಣು ಮಕ್ಕಳು ದಾರವನ್ನು ಹಾಕಿಕೊಳ್ಳುತ್ತಾರೆ. ಇದಕ್ಕೆ ಹಂಗನೂಲ ಎಂದೂ ಕರೆಯಲಾಗುತ್ತೆ. ಮರಗಳಿಗೆ ಜೋಕಾಲಿ ಕಟ್ಟಿ ಜೋಕಾಲಿ ಆಡಿ ಸಂಭ್ರಮಿಸುತ್ತಾರೆ. ಹೆಣ್ಣು ಮಕ್ಕಳು ಹೀಗೆ ಸಂಭ್ರಮಿಸಿದರೆ, ಗಂಡು ಮಕ್ಕಳು ಕಣ್ಣು ಮುಚ್ಚಿ ನಿರ್ದಿಷ್ಟ ಪ್ರದೇಶಕ್ಕೆ ಹೋಗುವದು, ತೆಂಗಿನಕಾಯಿ, ಲಿಂಬೆಹಣ್ಣು ನಿರ್ದಿಷ್ಟ ಜಾಗಕ್ಕೆ ಎಸೆಯುವದು, ಉರುಳಿಸುವದು, ಚಕ್ಕಡಿ ಗಾಲಿ ಉರುಳಿಸುವದು ಹೀಗೆ ಅನೇಕ ಬಗೆಯ ಗ್ರಾಮೀಣ ಆಟ ಆಡಿ ಸಂಭ್ರಮಿಸುತ್ತಾರೆ. ಈ ಆಟದಲ್ಲಿ ಗೆದ್ದವರಿಗೆ ಒಂದು ಕೇಜಿಯಿಂದ 10ಕೇಜಿ ವರೆಗೆ ಕೊಬ್ಬರಿಯನ್ನು ಬಹುಮಾನವಾಗಿ ನೀಡಲಾಗುತ್ತೆ.

ಬಂಧುಗಳಿಗೆ “ಕೊಬ್ಬರಿ ಕುಬ್ಬಸ” ಹಬ್ಬದ ನಂತರ ಬಂಧುಗಳಿಗೆ “ಕೊಬ್ಬರಿ ಕುಬ್ಬಸ” ಕೊಡುವದು ಒಂದು ವಾಡಿಕೆ. ಬಗೆ ಬಗೆಯ ಸಿಹಿ ತಿಂಡಿ, ಲಾಡು, ಹೊಸ ಬಟ್ಟೆಗಳನ್ನು ಉಡುಗೊರೆಯೊಂದು ಕೊಟ್ಟು ಬರುವದು ಹಬ್ಬದ ವಿಶೇಷ. ದೂರದ ಊರುಗಳಿಗೆ ಒಬ್ಬರಿಗೊಬ್ಬರು “ಕೊಬ್ಬರಿ ಕುಬಸ ” ಕೊಡುವ ಮೂಲಕ ಹೆಣ್ಣು ಮಕ್ಕಳಿಗೆ ತವರಿನ ಬೆಂಬಲ ಸಾಮಿಪ್ಯ ಯಾವತ್ತು ಇದೆ ಎಂಬ ಬರವಸೆ ಮೂಡಿಸುವುದು ಕೂಡಾ ಈ ಹಬ್ಬದ ವಿಶೇಷ.

ನಾಗರ ಪಂಚಮಿ ಮೇಲೆ ಕೊರೊನಾ ಕರಿನೆರಳು ಆದ್ರೆ ಕೊರೊನಾದ ಕರಿನೆರಳು ಇದೀಗ ನಾಗರ ಪಂಚಮಿ ಮೇಲೆ ಬಿದ್ದಿದೆ. ಹೌದು ಕೊರೊನಾದಿಂದಾಗಿ ಈ ಬಾರಿ ನಾಗರ ಪಂಚಮಿ ಹಬ್ಬದ ರಂಗು ಕಡಿಮೆಯಾಗಿದೆ. ಹೀಗಾಗಿ ಮದುವೆಯಾಗಿ ಹೋದ ಎಷ್ಟೋ ಮಹಿಳೆಯರು ತವರು ಮನೆಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಸಹೋದರರು ಕೂಡಾ ತಮ್ಮ ಸಹೋದರಿಯರ ಮನೆಗೆ ಹೋಗಿ ಅವರನ್ನು ಕರೆದುಕೊಂಡು ಬರಲು ಕೂಡಾ ಭಯ ಪಡುತ್ತಿದ್ದಾರೆ. ಯಾರಿಂದ ಯಾರಿಗೆ ಕೊರೊನಾ ವಕ್ಕರಿಸುತ್ತೋ ಅನ್ನೋ ಭಯ. ಹೀಗಾಗಿ ಅಣ್ಣ ತಂಗಿಯರ ಬಾಂದವ್ಯ ಬೆಸೆಯುವ ನಾಗರ ಪಂಚಮಿ ಹಬ್ಬಕ್ಕೆ ಕೊರೊನಾ ಹುಳಿ ಹಿಂಡಿದೆ. ಜನರು ಮನೆಯಲ್ಲಿಯೇ ಸರಳವಾಗಿ ಹಬ್ಬ ಆಚರಿಸುತ್ತಿದ್ದಾರೆ -ಸಂಜಯ್ ಚಿಕ್ಕಮಠ
Published On - 6:47 pm, Fri, 24 July 20



