ಎಲ್ಲ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನ ಪೂರ್ಣಗೊಳಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಎಲ್ಲ ಇಲಾಖೆಗಳಲ್ಲಿ ಖಾಲಿಯಿರುವ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದು ಸೇರಿ ಎಲ್ಲ ಪ್ರಕ್ರಿಯೆಗಳನ್ನು ಸಮರೋಪಾದಿಯಲ್ಲಿ ನಡೆಸಿ ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಬೆಂಗಳೂರು ಸೆ.28: ಎಲ್ಲಾ ಇಲಾಖೆಗಳು (Department) ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ (Karnataka Government) ಹೈಕೋರ್ಟ್ (High Court) ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ದಲಿತ ಸಮುದಾಯಗಳಿಗೆ ಮೀಸಲಾಗಿರುವ ಹುದ್ದೆಗಳನ್ನು ಭರ್ತಿ ಮಾಡದೆ ಉಳಿಸಿಕೊಳ್ಳುವುದು ಸಂವಿಧಾನ ಈ ಸಮುದಾಯಗಳಿಗೆ ನೀಡಿದ ಸೌಲ್ಯಭವನ್ನು ನಿರಾಕರಿಸಿದಂತೆ. ಹೀಗಾಗಿ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶದಂತೆ ರಾಜ್ಯ ಸರ್ಕಾರ ಎಲ್ಲ ಇಲಾಖೆಗೆಗಳಿಗೆ ಪತ್ರ ಬರೆದಿ ಹುದ್ದೆಗಳ ಭರ್ತಿಗೆ ನಿರ್ದೇಶನ ನೀಡಿದ್ದು, ಎಲ್ಲ ಹುದ್ದೆಗಳ ಭರ್ತಿ ಮಾಡಬೇಕು ಎಂದು ಆದೇಶ ನೀಡಿದೆ.
ಬೆಂಗಳೂರಿನ ಪಟ್ಟಂದೂರು ಅಗ್ರಹಾರದ ನಿವಾಸಿ ಎಂ. ಮಂಜುನಾಥ್ ಪ್ರಸಾದ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು ಎಲ್ಲ ಇಲಾಖೆಗಳಲ್ಲಿ ಖಾಲಿಯಿರುವ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದು ಸೇರಿ ಎಲ್ಲ ಪ್ರಕ್ರಿಯೆಗಳನ್ನು ಸಮರೋಪಾದಿಯಲ್ಲಿ ನಡೆಸಿ ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.
ಬೆಂಗಳೂರಿನ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸೂಕ್ತ ಮನವಿ ಸಲ್ಲಿಸುವಂತೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿತ್ತು. ಆದರೆ, ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ.
ಇದನ್ನೂ ಓದಿ: ನ್ಯಾಯಾಧೀಶರ ನೇಮಕಾತಿ: ಹೈಕೋರ್ಟ್‌ಗಳ ಶಿಫಾರಸುಗಳನ್ನು ಕೊಲಿಜಿಯಂಗೆ ಏಕೆ ಕಳುಹಿಸಿಲ್ಲ ಎಂದು ಕೇಳಿದ ಸುಪ್ರೀಂಕೋರ್ಟ್
ಖಾಲಿ ಹುದ್ದೆಗಳನ್ನು ಮುಂದುವರೆಸುವ ಸಂಬಂಧ ಅಂಕಿ ಅಂಶಗಳನ್ನು ನೋಡಿದ ಬಳಿಕವೂ ಅರ್ಜಿ ವಜಾಗೊಳಿಸುವಂತೆ ಸರ್ಕಾರದ ಪರ ವಕೀಲರ ವಾದ ಮಂಡಿಸಿರುವುದು ವಿಚಿತ್ರವಾಗಿದೆ. ನೊಂದ ಸಾರ್ವಜನಿಕ ವ್ಯಕ್ತಿಯೊಬ್ಬರು ನ್ಯಾಯಲಯದಲ್ಲಿ ಕಾನೂನು ಹೋರಾಟ ನಡೆಸಿ ಗೆಲವು ಸಾಧಿಸಿದಲ್ಲಿ ಸರ್ಕಾರ ಸಂತೋಷ ಪಡಬೇಕು ಎಂದು ಪೀಠ ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬ್ಯಾಕ್ ಲಾಗ್ ಹುದ್ದೆಗಳ ಮೀಸಲಾತಿ ನೇಮಕಾತಿಗಳಾಗಿವೆ. ಈ ಹುದ್ದೆಗಳನ್ನ ಭರ್ತಿ ಮಾಡದೆ ಖಾಲಿ ಉಳಿಸಿದಲ್ಲಿ ದೀನದಲಿತರ ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ಸರ್ಕಾರದ ಉದ್ದೇಶವೇ ವಿಫಲವಾದಂತಾಗಲಿದೆ. ಅಲ್ಲದೆ, ಸಂವಿಧಾನದ ಪರಿಚ್ಛೇದ 14 ಮತ್ತು 16 ಗಳ ಉಲ್ಲಂಘನೆಯಾಗಲಿದೆ ಎಂದು ವಾದ ಮಂಡಿಸಿದ್ದರು. ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಏಕ ಸದಸ್ಯ ಪೀಠ ನೀಡಿರುವ ಆದೇಶ ಸಮಂಜಸವಾಗಿದ್ದು, ಮೇಲ್ಮನವಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:56 pm, Thu, 28 September 23