49 ಲಕ್ಷ ರೂ. ಟಿಕೆಟ್ ಇದ್ದರೂ ವಿಮಾನವೇರಲು ಬಿಡಲಿಲ್ಲ! ಕೋರ್ಟ್ ಮೆಟ್ಟಿಲೇರಿತು ಬೆಂಗಳೂರು ವಿಮಾನ ನಿಲ್ದಾಣದ ಅಪರೂಪದ ಪ್ರಕರಣ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 49 ಲಕ್ಷ ರೂ. ಬೆಲೆಯ ಟಿಕೆಟ್ ಇದ್ದರೂ ಕೆಎಲ್‌ಎಂ ಏರ್‌ಲೈನ್ಸ್ ಸಿಬ್ಬಂದಿ ವೀಸಾ ನೆಪದಲ್ಲಿ ಬೋರ್ಡಿಂಗ್ ನಿರಾಕರಿಸಿದ ಕಾರಣ, ಏರ್‌ಲೈನ್ಸ್‌ನ ಸಿಇಒ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ. ವೀಸಾ ನಿಯಮಗಳ ಗೊಂದಲ ಮತ್ತು ಕುಟುಂಬದವರನ್ನು ವಿನಾ ಕಾರಣ ‘ರೆಡ್ ಫ್ಲ್ಯಾಗ್’ ಮಾಡಿದ ಆರೋಪ ಈ ಸಂಸ್ಥೆಯ ಮೇಲಿದೆ.

ಬೆಂಗಳೂರು, ಏಪ್ರಿಲ್ 14: ಕುಟುಂಬದೊಂದಿಗೆ ಪೆರು ದೇಶಕ್ಕೆ ಪ್ರವಾಸಕ್ಕೆಂದು ತೆರಳಲು ಸಿದ್ಧವಾಗಿದ್ದ ತಮಿಳುನಾಡಿನ ಕುಟುಂಬವೊಂದಕ್ಕೆ ಕೆಎಲ್‌ಎಂ ರಾಯಲ್ ಡಚ್ ಏರ್‌ಲೈನ್ಸ್ (KLM Royal Dutch Airlines) ಸಿಬ್ಬಂದಿ ಬೋರ್ಡಿಂಗ್ ನಿರಾಕರಿಸಿರುವ ಘಟನೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನಡೆದಿದೆ. ಅದೀಗ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಈ ಸಂಬಂಧ ವಿಮಾನಯಾನ ಸಂಸ್ಥೆಯ ಸಿಇಒ ಮತ್ತು ಸಿಒಒ ಸೇರಿದಂತೆ ಉನ್ನತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೇವನಹಳ್ಳಿ ಸಿವಿಲ್ ಕೋರ್ಟ್ ಆದೇಶಿಸಿದೆ.
ಏನಿದು ಘಟನೆ?
ತಮಿಳುನಾಡಿನ ಸೇಲಂ ಮೂಲದ ವೈದ್ಯಕೀಯ ಸಂಸ್ಥೆಯೊಂದರ ಅಧ್ಯಕ್ಷ ಜೆ.ಎಸ್. ಸತೀಶ್ ಕುಮಾರ್ ತಮ್ಮ ಕುಟುಂಬದ ಎಂಟು ಸದಸ್ಯರೊಂದಿಗೆ ಪೆರು ಪ್ರವಾಸಕ್ಕೆ ಯೋಜಿಸಿದ್ದರು. ಇದಕ್ಕಾಗಿ ಸುಮಾರು 49 ಲಕ್ಷ ರೂಪಾಯಿ ವೆಚ್ಚ ಮಾಡಿ ಬಿಸಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿದ್ದರು. 2024ರ ಜೂನ್ 19 ರಂದು ಬೆಂಗಳೂರಿನಿಂದ ವಿಮಾನ ಏರಲು ಸಿದ್ಧರಾಗಿದ್ದ ಇವರಿಗೆ, ಕೊನೆಯ ಕ್ಷಣದಲ್ಲಿ ಪೆರು ವೀಸಾ ಇಲ್ಲ ಎಂಬ ಕಾರಣ ನೀಡಿ ವಿಮಾನ ಏರಲು ಸಿಬ್ಬಂದಿ ತಡೆದಿದ್ದರು.
ವೀಸಾ ನಿಯಮಗಳ ಗೊಂದಲ
ಸತೀಶ್ ಕುಮಾರ್ ಅವರ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಅಥವಾ ಷೆಂಗೆನ್ ವೀಸಾ ಹೊಂದಿದ್ದರೆ ಪೆರು ದೇಶಕ್ಕೆ ಪ್ರವೇಶಿಸಲು ಪ್ರತ್ಯೇಕ ವೀಸಾ ಅಗತ್ಯವಿಲ್ಲ. ಈ ನಿಯಮವಿದ್ದರೂ ಏರ್‌ಲೈನ್ಸ್ ಸಿಬ್ಬಂದಿ ಇದನ್ನು ತಪ್ಪಾಗಿ ಅರ್ಥೈಸಿ ಪ್ರವಾಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ರೆಡ್ ಫ್ಲ್ಯಾಗ್’ನಿಂದ ಮತ್ತಷ್ಟು ತೊಂದರೆ
ಘಟನೆ ಬಳಿಕ ಕುಟುಂಬದವರು ಪ್ರತಿಭಟಿಸಿದಾಗ, ಏರ್‌ಲೈನ್ಸ್ ಸಂಸ್ಥೆಯು ಅವರ ವಿರುದ್ಧ ‘ರೆಡ್ ಫ್ಲ್ಯಾಗ್ (Internal Red-flagging)’ ಮಾಡಿದೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಸತೀಶ್‌ಕುಮಾರ್ ಅವರ ಮಗ ಸಿಂಗಾಪುರಕ್ಕೆ ತೆರಳಿದಾಗ ಪೆರುನಿಂದ ಗಡಿಪಾರು ಮಾಡಲಾಗಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ ವಿಚಾರಣೆ ಎದುರಿಸಬೇಕಾಯಿತು. ಈ ಅವಮಾನ ಮತ್ತು ಆರ್ಥಿಕ ನಷ್ಟದ ವಿರುದ್ಧ ಕುಟುಂಬ ನ್ಯಾಯಾಲಯದ ಮೊರೆ ಹೋಗಿದೆ.
‘ರೆಡ್ ಫ್ಲ್ಯಾಗ್’ ಎಂದರೇನು?
ಅಂತರಾಷ್ಟ್ರೀಯ ಪ್ರಯಾಣದಲ್ಲಿ ‘ರೆಡ್ ಫ್ಲ್ಯಾಗಿಂಗ್ (Red-flagging)’ ಎಂದರೆ ಒಬ್ಬ ಪ್ರಯಾಣಿಕನನ್ನು ‘ಹೆಚ್ಚಿನ ನಿಗಾ ವಹಿಸಬೇಕಾದ ವ್ಯಕ್ತಿ’ ಎಂದು ವಿಮಾನಯಾನ ಸಂಸ್ಥೆಗಳು ಅಥವಾ ವಲಸೆ ಅಧಿಕಾರಿಗಳ ಡೇಟಾಬೇಸ್‌ನಲ್ಲಿ ಗುರುತು ಮಾಡುವುದು. ಇದು ಒಂದು ರೀತಿಯ ಡಿಜಿಟಲ್ ಎಚ್ಚರಿಕೆಯಾಗಿದ್ದು, ಪ್ರಯಾಣಿಕನು ಈ ಹಿಂದೆ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾನೆ, ಗಡಿಪಾರು (Deported) ಆಗಿದ್ದಾನೆ ಅಥವಾ ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಸಂಕೇತವನ್ನು ನೀಡುತ್ತದೆ. ಒಮ್ಮೆ ಈ ರೀತಿ ‘ರೆಡ್ ಫ್ಲ್ಯಾಗ್’ ಆದರೆ, ಆ ಪ್ರಯಾಣಿಕನು ಯಾವುದೇ ದೇಶಕ್ಕೆ ಹೋದರೂ ವಿಮಾನ ನಿಲ್ದಾಣಗಳಲ್ಲಿ ತೀವ್ರ ವಿಚಾರಣೆ, ತಪಾಸಣೆ ಮತ್ತು ಪದೇ ಪದೇ ಬೋರ್ಡಿಂಗ್ ನಿರಾಕರಣೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




