ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೂದಲಳತೆ ದೂರದಲ್ಲೇ ಕನ್ನಮಂಗಲ ಗ್ರಾಮ ಪಂಚಾಯತಿ ಇದ್ದು, ಪಂಚಾಯತಿಯ ಸುತ್ತಮುತ್ತ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಮತ್ತು ರೆಸಾರ್ಟ್ಗಳು ತಲೆ ಎತ್ತಿವೆ. ಹೀಗಾಗಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಎಲ್ಲಾ ಮೂಲಗಳಿಂದ ಈ ಪಂಚಾಯತಿಗೆ ಹರಿದು ಬರುತ್ತದೆ. ರಾಜ್ಯದ ಶ್ರೀಮಂತ ಪಂಚಾಯತಿಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಂಚಾಯತಿಯು ಸ್ಥಾನ ಪಡೆದುಕೊಂಡಿದೆ. ಆದಾಯ ಹೆಚ್ಚಿರುವ ಪಂಚಾಯತಿಯಲ್ಲಿ ಅಕ್ರಮದ ಕೂಗು ಕೇಳಿ ಬಂದಿದ್ದು, ಹೀಗಾಗೆ ಕಳೆದ 15 ದಿನಗಳ ಹಿಂದೆ ಇದೇ ಗ್ರಾಮ ಪಂಚಾಯತಿಯ ಅಧ್ಯಕ್ಷರು ಜಿಲ್ಲಾ ಪಂಚಾಯತಿಗೆ ಕಂದಾಯ ವಸೂಲಾತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ದೂರು ಸ್ವೀಕರಿಸಿದ ಜಿಲ್ಲಾಡಳೀತ ಅಧಿಕಾರಿಗಳ ಮೂಲಕ ಇಲಾಖೆಯ ತನಿಖೆಯನ್ನು ಭರದಿಂದ ನಡೆಸುತ್ತಿತ್ತು. ಆದರೆ ತನಿಖೆಯ ನಡುವೆಯೇ ಪಂಚಾಯತಿಯ ನಖಲಿ ಕೀಯನ್ನು ಬಳಸಿಕೊಂಡು ಪಂಚಾಯತಿ ಒಳಗಡೆಗೆ ಪ್ರವೇಶಿಸಿದ ಕಿಡಿಗೇಡಿಗಳು ಕಾರ್ಯಲಯದ ದಾಖಲೆಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಜತೆಗೆ ಪಂಚಾಯತಿಯ ಕಿಟಕಿ ಮತ್ತು ಪಿಠೋಪಕರಣಗಳನ್ನ ದ್ವಂಸಗೊಳಿಸಿದ್ದು, ಬೆಳಗ್ಗೆ ಸಿಬ್ಬಂದಿ ಪಂಚಾಯತಿ ಬಳಿ ಬಂದಾಗ ಬೆಂಕಿ ತಗಲಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಅನುರಾಧ ಎನ್ನುವವರ ಮೇಲೆ ಆರೋಪ ಕೇಳಿ ಬಂದಿದ್ದು, ಪಂಚಾಯತಿ ವ್ಯಾಪ್ತಿಯ ಕಟ್ಟಡಗಳಿಗೆ ಕಂದಾಯ ರಸೀದಿಗಳನ್ನು ಹಾಕಿ, ಅದರಲ್ಲಿ ಕಟ್ಟಡಗಳಿಗೆ ಲಕ್ಷ ಲಕ್ಷ ಮಾಲೀಕರ ಬಳಿ ಬಿಲ್ ಪಡೆದು, ನಕಲಿ ಬಿಲ್ ಅವರಿಗೆ ನೀಡಿದ್ದಾರೆ. ಕಚೇರಿಯ ಪುಸ್ತಕದಲ್ಲಿ ಕಡಿಮೆ ಹಣ ನಮೂದಿಸಿದ್ದಾರೆ. ಜತೆಗೆ ಈ ಹಿಂದೆ ಪಂಚಾಯತಿಯಲ್ಲಿ ಕೆಲಸ ಮಾಡಿದ್ದ ಕೆಲ ಅಧಿಕಾರಿಗಳು ಪಂಚಾಯತಿಯ ಭೂಮಿಯಲ್ಲೂ ಹಗರಣ ಮಾಡಿ ನಖಲಿ ಖಾತೆಗಳನ್ನು ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯ ಕೆಸಿ ಮಂಜುನಾಥ್ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ತನಿಖೆ ನಡೆಸುತ್ತಿದ್ದು, 99 ರಶೀದಿಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಅಕ್ರಮವಾಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸುತ್ತಿದ್ದಂತೆ, ಇದೀಗ ತಮ್ಮ ಅಕ್ರಮ ಬಯಲಾಗುತ್ತದೆ ಎಂದು ಅಕ್ರಮವನ್ನು ಎಸಗಿರುವ ಕೆಲ ಸಿಬ್ಬಂದಿಗಳೇ ಬೆಂಕಿ ಹಚ್ಚುವ ಕೃತ್ಯಕ್ಕೆ ಮುಂದಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಿಇಒ ರವಿಕುಮಾರ್ ಪರಿಶೀಲನೆ ನಡೆಸಿದ್ದು, ಬೆಂಕಿ ಅವಘಡದ ಹಿಂದಿನ ರಹಸ್ಯ ತಿಳಿಯಲು ಪೊಲೀಸರಿಗೆ ದೂರು ನೀಡಿದ್ದಾರೆ.
ಒಟ್ಟಾರೆ ಪಂಚಾಯತಿಯ ಅಕ್ರಮಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಂತೆ ಪಂಚಾಯತಿಗೆ ನುಗ್ಗಿ ಕಿಡಿಗೇಡಿಗಳು ದಾಖಲೆಗಳನ್ನು ನಾಶಪಡಿಸಲು ಮುಂದಾಗಿರುವುದು ನಿಜಕ್ಕೂ ದುರಂತ. ಇನ್ನೂ ಈ ಸಂಬಂಧ ಕೆಂಪೇಗೌಡ ಏರ್ಪೋಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರವಷ್ಟೇ ತಪ್ಪಿತಸ್ಥರು ಯಾರೆಂಬುದು ತಿಳಿದು ಬರಬೇಕಿದೆ.
ಇದನ್ನೂ ಓದಿ:
ಮಂಗಳೂರು: ಪುತ್ರನನ್ನು ಮನೆಯಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿದ ತಂದೆ
ಗ್ರಾಮ ಪಂಚಾಯತಿ ಸದಸ್ಯೆ ಮನೆ ಮೇಲೆ ದಾಳಿ; ಮಣ್ಣು ತೆಗೆಯುವ ವಿಚಾರಕ್ಕೆ ಕಿಡಿಗೇಡಿಗಳಿಂದ ದಾಂದಲೆ