ಉತ್ತರ ಕರ್ನಾಟಕದಲ್ಲಿ ಹೆಚ್ಚಾದ ಪ್ರವಾಹ; ಬೆಳಗಾವಿ, ಬಾಗಲಕೋಟೆಯಲ್ಲಿ ನೂರಾರು ಮನೆಗಳು ಜಲಾವೃತ, ಬೀದಿಗೆ ಬಿದ್ದ ಜನ
ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳಿಂದಾಗಿ 43 ಗ್ರಾಮಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಗೋಕಾಕ್, ಮೂಡಲಗಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ಹುಕ್ಕೇರಿ ತಾಲೂಕಿನ ಗ್ರಾಮಗಳಲ್ಲಿ ಜನರು ನರಕಯಾತನೆ ಅನುಭವಿಸ್ತಿದ್ದಾರೆ. ಇನ್ನು ಬಾಗಲಕೋಟೆಯಲ್ಲಿ ಮೂರು ನದಿಗಳ ಆರ್ಭಟಕ್ಕೆ 30 ಮನೆಗಳು ಜಲಾವೃತಗೊಂಡಿವೆ.
ಬಾಗಲಕೋಟೆ, ಜುಲೈ.30: ಬೆಳಗಾವಿಯಲ್ಲಿ (Belagavi) ಮೂರು ನದಿಗಳ ಆರ್ಭಟಕ್ಕೆ ಅಡಿಬಟ್ಟಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿದೆ. ನೆಮ್ಮದಿಯಾಗಿ ಬದುಕ್ತಿದ್ದ ಜನರ ಬದುಕು ಬೀದಿದೆ ಬಂದಿದೆ. ನಿನ್ನೆಯಷ್ಟೇ ಮನೆಯಲ್ಲಿದ್ದವರು ಇದೀಗ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯೋ ಸ್ಥಿತಿ ತಂದಿಟ್ಟಿದ್ದಾನೆ ವರುಣರಾಯ, ಮೂರು ನದಿಗಳ ನೀರು ನೂರಾರು ಜನರ ಬದುಕನ್ನೇ ಬೀದಿಗೆ ತಂದಿಟ್ಟಿದೆ.
ಮಾರ್ಕಂಡೇಯ, ಹಿರಣ್ಯಕೇಶಿ, ಕೃಷ್ಣಾ ನದಿಯ ಅಬ್ಬರಕ್ಕೆ ನದಿಪಾತ್ರದಲ್ಲಿನ ಜನರು ಕಣ್ಣೀರು ಹಾಕುವಂತಾಗಿದೆ. ಇನ್ನು ನೂರಾರು ಎಕರೆ ಪ್ರದೇಶದಲ್ಲಿನ ಬೆಳೆದಿದ್ದ ಕಬ್ಬು, ಇತರೆ ಬೆಳೆಗಳು ಸಂಪೂರ್ಣ ನಾಶವಾಗಿದೆ. ಭೀಕರ ಪ್ರವಾಹದಿಂದ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದಲ್ಲಿ 20 ಕುಟುಂಬಗಳು ಬೀದಿಗೆ ಬಂದಿವೆ. ಮಳೆಗಾಳಿಯಲ್ಲೇ ಟಾರ್ಪಲ್ ಕಟ್ಟಿಕೊಂಡು ರಸ್ತೆಬದಿ ಸಂತ್ರಸ್ತರು ಜೀವನ ಮಾಡ್ತಿದ್ದಾರೆ. ಇನ್ನು 4 ದಿನಗಳಿಂದ ಸಂತ್ರಸ್ತರು ಬೀದಿಯಲ್ಲಿದ್ರೂ, ಅಧಿಕಾರಿಗಳು ಮಾತ್ರ ಇತ್ತ ಸುಳಿಯದಿರೋದು ದೈರ್ದೈವವೇ ಸರಿ.
ಮಿರ್ಜಿ ಗ್ರಾಮದಲ್ಲಿ 70 ಮನೆಗಳು ಸಂಪೂರ್ಣ ಮುಳುಗಡೆ!
ಬೆಳಗಾವಿ ಮಾತ್ರವಲ್ಲ, ಬಾಗಲಕೋಟೆಯಲ್ಲೂ ನಾನಾ ಅವಾಂತರಗಳಾಗಿವೆ. ಘಟಪ್ರಭಾ ನದಿಯ ಅಬ್ಬರದಿಂದ ಮಿರ್ಜಿ ಗ್ರಾಮದಲ್ಲಿನ 70 ಮನೆಗಳು ಸಂಪೂರ್ಣ ಮುಳುಗಡೆಯಾಗಿದೆ. ಇಡೀ ಗ್ರಾಮಸ್ಥರು ಊರನ್ನೇ ತೊರೆದಿದ್ದಾರೆ. ಕಣ್ಣೀರಿನಲ್ಲಿ ಕೈ ತೊಳೆಯೋ ಪರಿಸ್ಥಿತಿ ಸೃಷ್ಟಿಯಾಗಿದೆ. ಸದ್ಯ ಎಲ್ಲರೂ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ