
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಎರಡು ಗಂಟೆಗಳ ಕಾಲ ವಿಡಿಯೊ–ಕಾನ್ಫರೆನ್ಸಿಂಗ್ ನಡೆಸಿದ ನಂತರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್ ಅಶೋಕ ಅವರು, ನೆರೆಯಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಸಾವುನೋವು, ಬೆಳೆಹಾನಿ, ಮನೆ ಮತ್ತು ಗುಡ್ಡ ಕುಸಿತ ಮುಂತಾದವುಗಳ ಬಗ್ಗೆ ಪ್ರಧಾನಿ ಅವರೊಂದಿಗೆ ಚರ್ಚಿಸಿ ನೆರವು ಒದಗಿಸುವಂತೆ ಕೋರಲಾಯಿತೆಂದು ಹೇಳಿದರು.
ರಾಜ್ಯಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಮನವಿ ಸಲ್ಲಿಸಿರುವುದಾಗಿ ಹೇಳಿದ ಬೊಮ್ಮಾಯಿ, “ ಪಶ್ಚಿಮ ಘಟ್ಟಗಳಲ್ಲಿ ಭೂಸ್ಥಿತಿ ಅಧ್ಯಯನ ನಡೆಸುವ ವ್ಯವಸ್ಥೆ ಮಾಡಬೇಕು ಮತ್ತು ಅಂತರಾಜ್ಯ ನೆರೆ ಮುನ್ಸೂಚನೆ, ಮುನ್ನೆಚ್ಚರಿಕೆ ಹಾಗೂ ಕೂಡಲೇ ಸ್ಪಂದಿಸಿ ನೆರವು (Interstate Flood Forecasting, Warning and Response) ಒದಗಿಸುವಂಥ ತಂಡವನ್ನು ರಚಿಸಬೇಕೆಂದು ಕೋರಲಾಗಿದೆ,” ಎಂದರು.
ಭೂಕುಸಿತ ನಿರ್ವಹಣೆ ಕೇಂದ್ರ ಸ್ಥಾಪಿಸುವ ಅವಶ್ಯಕತೆ ಕುರಿತು ಪ್ರಧಾನಿ ಮೋದಿ ಅವರಿಗೆ ಮನಗಾಣಿಸಲಾಗಿದೆ ಮತ್ತು ಕರ್ನಾಟಕಕ್ಕೆ ಕನಿಷ್ಠ ಎಂಟು ಶಾಶ್ವತ ಪ್ರಕೃತಿ ವಿಕೋಪ ರಕ್ಷಣಾ ತಂಡಗಳ (ಎನ್‌ಡಿಆರ್‌ಎಫ್) ಅಗತ್ಯವಿದೆ ಎಂದು ತಿಳಿಸಲಾಗಿದೆಯೆಂದು ಬೊಮ್ಮಾಯಿ ಹೇಳಿದರು.
“ಸಮುದ್ರಕೊರೆತ ತಡೆ ಹಾಗೂ ನದಿ ಸವಕಳಿ ತಪ್ಪಿಸಲು ಸಹ ವಿಶೇಷ ವ್ಯವಸ್ಥೆ ಕಲ್ಪಿಸಲು ಪ್ರಧಾನಿಗಳಿಗೆ ಮನವಿ ಮಾಡಲಾಗಿದೆ ಮತ್ತು ಪ್ರಕೃತಿ ವಿಕೋಪ ನಿಧಿಯಿಂದ ಪರಿಹಾರ ರೂಪದಲ್ಲಿ ರೂ 4,000 ಕೋಟಿ ಬಿಡುಗಡೆ ಮಾಡಬೇಕೆಂದು ವಿನಂತಿಸಿಕೊಳ್ಳಲಾಗಿದೆ,” ಎಂದು ಬೊಮ್ಮಾಯಿ ಹೇಳಿದರು. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡವಾಗಿ ರೂ 395 ಕೋಡಿ ಕೂಡಲೇ ಒದಗಿಸಲು
ನೆರೆಯಿಂದ 56 ತಾಲೂಕುಗಳು ಪ್ರಭಾವಕ್ಕೊಳಗಾಗಿದ್ದು, 885 ಗ್ರಾಮ ಮತ್ತು ಹೋಬಳಿಗಳು ಜಲಾವೃತಗೊಂಡಿವೆ, ಸುಮಾರು 3,000 ಮನೆಗಳು ಕುಸಿದಿವೆ, 80,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಆಗಿದೆ ಮತ್ತು 3,500 ಕಿಲೋಮೀಟರ್ಗಳಷ್ಟು ರಸ್ತೆ ಹಾಳಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಏತನ್ಮಧ್ಯೆ, ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಕೆಣಕಿದ ಅಶೋಕ್, 2009ರಲ್ಲಿ ರಾಜ್ಯ ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿದಾಗ, ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ರೂ 17,500 ಕೋಟಿ ಪರಿಹಾರ ಕೇಳಿತ್ತು, ಆದರೆ ಕೇಂದ್ರದಲ್ಲಿ ಸರಕಾರ ನಡೆಸುತ್ತಿದ್ದ ಕಾಂಗ್ರೆಸ್ ಕೇವಲ ರೂ 500 ಕೋಡಿ ನೀಡಿ ಕೈತೊಳೆದುಕೊಂಡಿತ್ತು ಎಂದರು. ಮುಂದುವರಿದು ಹೇಳಿದ ಸಚಿವರು, ಮುಂಬರುವ ವರ್ಷಗಳಲ್ಲಿ ನೆರೆ ಗಂಡಾಂತರ ಎದುರಿಸಬಹುದಾದ ಜಿಲ್ಲೆಗಳಲ್ಲಿ ಶಾಶ್ವತ ವಿಪತ್ತು ನಿರ್ವಹಣಾ ಭವನ ನಿರ್ಮಾಣ ನಿರ್ಮಿಸುವುದಾಗಿ ತಿಳಿದರು.