ಶಿರೂರು, ವಯನಾಡ್ ಭೂಕುಸಿತದಿಂದ ಎಚ್ಚೆತ್ತ ಸರ್ಕಾರ, ಪಶ್ಚಿಮ ಘಟ್ಟದಲ್ಲಿನ ಅನಧಿಕೃತ ಹೋಮ್ ಸ್ಟೇ‌, ರೆಸಾರ್ಟ್ ತೆರವಿಗೆ ಸೂಚನೆ

|

Updated on: Aug 02, 2024 | 6:17 PM

ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿಯ ಗುಡ್ಡ ಕುಸಿತ ಹಾಗೂ ಕೇರಳದ ವಯನಾಡ್ ಭೂಕುಸಿತ ದುರಂತದಿಂದ ಹಲವಾರು ಜನರು ಬಲಿಯಾಗಿದ್ದಾರೆ. ಅಲ್ಲದೇ ಶಿರಾಡಿಘಾಟ್​ ಸೇರಿದಂತೆ ಕರ್ನಾಟಕದ ಕೆಲವೆಡೆ ಭೂಕುಸಿತ ಉಂಟಾಗುವ ಭೀತಿ ಶುರುವಾಗಿದೆ. ಇದರಿಂದ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ, ಪಶ್ಚಿಮ ಘಟ್ಟದಲ್ಲಿರುವ ಅನಧಿಕೃತ ಹೋಮ್ ಸ್ಟೇ‌, ರೆಸಾರ್ಟ್ ತೆರವಿಗೆ ಸೂಚನೆ ನೀಡಿದೆ.

ಶಿರೂರು, ವಯನಾಡ್ ಭೂಕುಸಿತದಿಂದ ಎಚ್ಚೆತ್ತ ಸರ್ಕಾರ, ಪಶ್ಚಿಮ ಘಟ್ಟದಲ್ಲಿನ ಅನಧಿಕೃತ ಹೋಮ್ ಸ್ಟೇ‌, ರೆಸಾರ್ಟ್ ತೆರವಿಗೆ ಸೂಚನೆ
ಅರಣ್ಯ ಸಚಿವ ಈಶ್ವರ್ ಖಂಡ್ರೆ
Follow us on

ಬೆಂಗಳೂರು, (ಆಗಸ್ಟ್​ 02): ಶಿರೂರು ಮತ್ತು ಹಾಗೂ ಕೇರಳದ ವಯನಾಡ್ ಭೂಕುಸಿತದಿಂದ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ, ಪಶ್ಚಿಮ ಘಟ್ಟದಲ್ಲಿನ ಅನಧಿಕೃತ ಹೋಮ್ ಸ್ಟೇ‌, ಬಡಾವಣೆ, ರೆಸಾರ್ಟ್ ತೆರವಿಗೆ ಖಡಕ್​ ಸೂಚನೆ ನೀಡಿದೆ. ಈ ಸಂಬಂಧ ಅರಣ್ಯ ಖಾತೆ ಸಚಿವ ಈಶ್ವರ್‌ ಖಂಡ್ರೆ ಅವರು ಸುತ್ತೋಲೆ ಹೊರಡಿಸಿದ್ದು, ಪಶ್ಚಿಮ ಘಟ್ಟದಲ್ಲಿ 2015ರಿಂದ ಈಚೆಗೆ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಅನಧಿಕೃತ ಹೋಮ್‌ ಸ್ಟೇ, ರೆಸಾರ್ಟ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದಲ್ಲಿ 2015 ರಿಂದ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Shiradi Ghat: ಮತ್ತೆ ಮತ್ತೆ ಕುಸಿಯುತ್ತಲೇ ಇದೆ ಶಿರಾಡಿ ಘಾಟ್; ಕೆಸರಿನ ರಾಶಿ ಹರಿದುಬರುತ್ತಿರುವ ವಿಡಿಯೋ ಇಲ್ಲಿದೆ

ಪಶ್ಚಿಮ ಘಟ್ಟದ ಎಲ್ಲ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ, ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರಣ್ಯ ಒತ್ತುವರಿಯನ್ನು ತಕ್ಷಣದಿಂದಲೇ ತೆರವುಗೊಳಿಸಬೇಕು. ಒಂದು ತಿಂಗಳ ಒಳಗಡೆ ಕೈಗೊಂಡ ಕ್ರಮದ ವಿವರದೊಂದಿಗೆ ಕಡತದಲ್ಲಿ ವರದಿ ಸಲ್ಲಿಸಬೇಕೆಂದು ಈಶ್ವರ್​ ಖಂಡ್ರೆ ಸೂಚಿಸಿದ್ದಾರೆ.

ಈಶ್ವರ್ ಖಂಡ್ರೆ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರ್ ಖಂಡ್ರೆ, ಶಿರೂರು, ವಯನಾಡ್ ಭೂಕುಸಿತ ರಾಜ್ಯಕ್ಕೆ ಎಚ್ಚರಿಕೆ ಗಂಟೆ ಆಗಿದ್ದು ಪಶ್ಚಿಮ ಘಟ್ಟದ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರಾಜ್ಯದ ಪಶ್ಚಿಮ ಘಟ್ಟದಲ್ಲಿ 2015 ರಿಂದೀಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಪಶ್ಚಿಮ ಘಟ್ಟದ ಎಲ್ಲ ಗಿರಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಮತ್ತು ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಬಡಾವಣೆ, ತೋಟ, ಹೋಂ ಸ್ಟೇ ಮತ್ತು ರೆಸಾರ್ಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಲ್ಲಿ 11 ಮಂದಿ ಬಲಿಯಾಗಿದ್ದಾರೆ. ನೆರೆ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ ಸಾವಿನ ಸಂಖ್ಯೆ 300 ದಾಟ್ಟಿದ್ದು, ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಇನ್ನು ದುರಂತದಲ್ಲಿ ಹಲವು ಕುಟುಂಬಗಳು ಮನೆ, ಮಠ ಕಳೆದುಕೊಂಡು ಕಂಗಲಾಗಿವೆ.

ಅಲ್ಲದೇ ಈಗಾಗಲೇ ಚಿಕ್ಕಮಗಳೂರು, ಹಾಸನ, ಕೊಡಗು ಭಾಗಗಳಲ್ಲಿ ಭೂಕುಸಿತ, ಗುಡ್ಡಕುಸಿತ ಭೀತಿ ಶುರುವಾಗಿದೆ.  ಇನ್ನು ವಯನಾಡ್​ ದುರಂತ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿತ್ತಿವೆ.  ಗಿಡ-ಮರಗಳನ್ನು ನಾಶ ಮಾಡಿ ಬಡಾವಣೆ, ರೆಸಾರ್ಟ್​, ಹೋಂ ಸ್ಟೇ ನಿರ್ಮಾಣದಿಂದ ಈ ರೀತಿಯ ದುರಂತಗಳು ನಡೆಯುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ