ಗದಗ: ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸತತ ಮೂರು ದಿನಗಳಿಂದ ಚಿರತೆಗಾಗಿ ಶೋಧ ನಡೆಸಿದ್ದರೂ ಚಿರತೆ ಮಾತ್ರ ಪತ್ತೆಯಾಗಿಲ್ಲ. ಈ ಚಿರತೆ ನೋಡಿ ಗದಗ ಜನರು ಸದ್ಯ ಹೌಹಾರಿದ್ದಾರೆ. ಗದಗ ನಗರದ ಹೊಸ ಹುಡ್ಕೋ ಬಡಾವಣೆ ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶ ಇದೆ. ಜೊತೆಗೆ ಹಳ್ಳ ಕೂಡ ಇದೆ. ಹೀಗಾಗಿ ಹಳ್ಳದ ಸರವಿನಲ್ಲಿ ಅಥವಾ ಕಾಡಿನಲ್ಲಿ ಅಡಗಿ ಕುಳಿತುಕೊಂಡಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್ ಕ್ಯಾಮರಾ ಬಳಸಿಕೊಂಡು ಮೂರು ದಿನಗಳಿಂದ ಚಿರತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸದ್ಯ ಗದಗ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದ್ದು, ಇದಕ್ಕೆ ನಗರದ ಹೊಸ ಹುಡ್ಕೋ ಬಡಾವಣೆಯಲ್ಲಿ ಮಾರ್ಚ್ 1 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಹೊಸ ಹುಡ್ಕೋ ಬಡಾವಣೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ನೋಡಿದ ಮಕ್ಕಳು ಪಾಲಕರಿಗೆ ಹೇಳಿದ್ದಾರೆ. ಬಡಾವಣೆಯಲ್ಲಿ ಸುತ್ತಾಡುತ್ತಿರುವ ಚಿರತೆ ನೋಡಿ ಬಡಾವಣೆ ಜನರು ಹೌಹಾರಿದ್ದಾರೆ.
ಗ್ರಾಮಸ್ಥರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಡಾವಣೆಗೆ ದೌಡಾಯಿಸಿದ ಅರಣ್ಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆ ಕಾರ್ಯ ನಡೆಸಿದ್ದಾರೆ. ಆದರೆ ಮೂರು ದಿನಗಳಾದರು ಚಿರತೆ ಮಾತ್ರ ಸಿಕ್ಕಿಲ್ಲ. ಇದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನರಿಗೆ ದೊಡ್ಡ ತಲೆ ನೋವಾಗಿದೆ. ಇನ್ನು ಈ ಪ್ರದೇಶದಲ್ಲಿ ಸಾಕಷ್ಟು ಮುಳ್ಳಿನ ಗಿಡಗಳು ಇರುವುದರಿಂದ ಶೋಧಕ್ಕೆ ಅಡ್ಡಿಯಾಗಿದೆ. ಹೀಗಾಗಿ ಸ್ವತಃ ಡಿಎಫ್ಓ ಸೂರ್ಯಸೇನ್ ಅವರೆ ಈ ಶೋಧ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಚಿರತೆ ಎಲ್ಲೂ ಪ್ರತ್ಯಕ್ಷವಾಗಿಲ್ಲ. ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಇವು ಚಿರತೆಯ ಹೆಜ್ಜೆ ಗುರುತಾ ಅಥವಾ ಬೇರೆ ಪ್ರಾಣಿಯದ್ದಾ ಎಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಚಿರತೆ ಎಲ್ಲಾದರೂ ಕಾಣಿಸಿದರೆ ಸೆರೆ ಹಿಡಿಯಲು ಹಂಪಿ ಝೂನಿಂದ ಅನಸ್ತೇಶಿಯಾ ಇಂಜೆಕ್ಷನ್ ಸಮೇತವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಸನ್ನದ್ಧರಾಗಿದ್ದಾರೆ.
ಜನರು ಭಯ ಪಡುವ ಅಗತ್ಯವಿಲ್ಲ. ಚಿರತೆ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ಶಸ್ತ್ರ ಸಜ್ಜಿತರಾಗಿ ಸಿಬ್ಬಂದಿಗಳು ಚಿರತೆ ಶೋಧ ನಡೆಸಿದ್ದಾರೆ. ಡ್ರೋನ್ ಕ್ಯಾಮರಾ ಮೂಲಕವೂ ಚಿರತೆಯನ್ನು ಹುಡುಕಾಡಿದ್ದೇವೆ ಎಂದು ಗದಗ ಆರ್ಎಫ್ಓ ಚೈತ್ರಾ ಮೆಣಸಿನಕಾಯಿ ಹೇಳಿದ್ದಾರೆ.
ಇನ್ನು ಕಳೆದ ನಾಲ್ಕು ದಿನಗಳಿಂದ ಕಪ್ಪತ್ತಗುಡ್ಡಕ್ಕೆ ನಿರಂತರವಾಗಿ ಬೆಂಕಿ ಬೀಳುತ್ತಿದ್ದು, ಬೆಂಕಿಯಿಂದ ಭಯಗೊಂಡು ನಾಡಿನತ್ತ ಚಿರತೆ ಬಂದಿರುವ ಶಂಕೆ ಕೂಡ ವ್ಯಕ್ತವಾಗಿದೆ. ಕಪ್ಪತ್ತಗುಡ್ಡದಲ್ಲಿ ನಾಲ್ಕೈದು ಚಿರತೆಗಳು ಇವೆ ಎನ್ನಲಾಗಿದೆ. ಹೀಗಾಗಿ ಈಗ ನಾಡಿನ ಕಡೆ ಎಷ್ಟು ಚಿರತೆಗಳು ಬಂದಿವೆ ಎನ್ನುವ ಆತಂಕ, ಭಯ ಗದಗ ಜನರಲ್ಲಿ ಮೂಡಿದೆ.
ಹೊಸ ಹುಡ್ಕೋ ಬಡಾವಣೆ ಜನರು ಈಗ ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಚಿರತೆಯನ್ನು ಪ್ರತ್ಯಕ್ಷವಾಗಿ ಕಂಡ ಮಹಿಳೆಯರು ಮತ್ತು ಮಕ್ಕಳಲ್ಲಿ ಭಯ ಮೂಡಿದೆ. ಮಕ್ಕಳು, ಮಹಿಳೆಯರು, ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಏಕಾಏಕಿ ದಾಳಿ ಮಾಡಿದರೆ ಯಾರು ಹೊಣೆ? ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಮನೆ ಮುಂದೆ ಆಟ ಆಡುತ್ತಿದ್ದ ಮಕ್ಕಳಿಗೆ ದೂರದ ರಸ್ತೆಯಲ್ಲಿ ಚಿರತೆ ಕಂಡಿದೆ. ಹೀಗಾಗಿ ಮಕ್ಕಳು ಓಡಿ ಬಂದು ಅಮ್ಮ ಚಿರತೆ ಬಂದಿದೆ ಎಂದರು. ಆಗ ನಾನು ಹೊರಗಡೆ ಬಂದು ನೋಡಿದೆ. ದೂರ ಇತ್ತು ಆಗ ಕನ್ನಡಕ ಹಾಕಿಕೊಂಡು ನೋಡಿದೆ ಚಿರತೆ ರಸ್ತೆಯಲ್ಲಿ ಹೊರಟಿತ್ತು ಎಂದು ಚಿರತೆ ಕಂಡ ಮಹಿಳೆ ಕರುಣಾ ಹೇಳಿದ್ದಾರೆ.
ಆದರೆ ಚಿರತೆ ಪ್ರತ್ಯಕ್ಷವಾಗಿರುವ ಕುರಿತು ಈವರಿಗೆ ಅರಣ್ಯ ಇಲಾಖೆಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಆದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಡ್ರೋನ್ ಕ್ಯಾಮರಾ ಬಳಸಿಕೊಂಡು ಚಿರತೆ ಪತ್ತೆಯ ಕಾರ್ಯದಲ್ಲಿ ತೊಡಗಿದ್ದಾರೆ. ಚಿರತೆ ಇದೆಯೋ ಅಥವಾ ಜಾಗ ಬದಲಾಯಿಸಿದೆಯೋ ಗೋತ್ತಿಲ್ಲ. ಆದರೆ ಹೊಸ ಹುಡ್ಕೋ ಜನರು ಮಾತ್ರ ಮೂರು ದಿನಗಳಿಂದ ಭಯದಲ್ಲಿಯೇ ಬದುಕುತ್ತಿರುವುದು ಮಾತ್ರ ನಿಜ.
ಇದನ್ನೂ ಓದಿ: ಬೇಟೆ ಬಲೆಗೆ ಚಿರತೆ ಸಿಲುಕಿ ಅಚಾತುರ್ಯ: ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚಿರತೆ ಸಾವು