ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಲು ಸಮಂಜಸ ಕಾರಣಗಳೇ ಇಲ್ಲ: ಸದಾನಂದ ಗೌಡ

ಹಿಂದೆ ರಾಜ್ಯದ ಮುಖ್ಯಮಂತ್ರಿಗಳೂ ಆಗಿದ್ದ ಸದಾನಂದ ಗೌಡ ಅವರು, ಯಡಿಯೂರಪ್ಪನರರನ್ನು ಮುಖ್ಯಮಂತ್ರಿಗಳ ಸ್ಥಾನದಿಂದ ಸರಿಸಲು ಸಮಂಜಸವಾದ ಕಾರಣಗಳೇ ಇಲ್ಲ ಮತ್ತು ಅವರು ಕರ್ನಾಟಕದಲ್ಲಿ ಕೊವಿಡ್​ ಪರಿಸ್ಥಿತಿಯನ್ನು ಮತ್ತು ಆಡಳಿತದ ಇತರ ಆಯಾಮಗಳನ್ನು ಅದ್ಭುತವಾಗಿ ನಿರ್ವಹಿಸಿ ಕೇಂದ್ರ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಲು ಸಮಂಜಸ ಕಾರಣಗಳೇ ಇಲ್ಲ: ಸದಾನಂದ ಗೌಡ
ಸದಾನಂದ ಗೌಡ

ಬೆಂಗಳೂರು:  ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಅವರು ರಾಜದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆಯನ್ನು ತಳ್ಳಿಹಾಕಿದರು. ಬುಧವಾರದಂದು ಬೆಂಗಳೂರಿನಲ್ಲಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೋವಿಡ್​ ಸ್ಥಿತಿಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಕೇಂದ್ರ ನಾಯಕತ್ವ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಘಟಕ ಮತ್ತು ಖುದ್ದು ಯಡಿಯೂರಪ್ಪನರು ಈ ವದಂತಿಗಳನ್ನು ತಳ್ಳಿಹಾಕಿದ ನಂತರ ಸದಾನಂದ ಗೌಡ ಹೀಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ‘ಈ ವದಂತಿಗಳಲ್ಲಿ ಮತ್ತು ಇದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಲ್ಲಿ ಯಾವುದೇ ಸತ್ಯಾಂಶವಿಲ್ಲ, ಯಾಕೆಂದರೆ ನಾಯಕತ್ವ ಬದಲಾವಣೆ ಕೇಂದ್ರ ನಾಯಕರ ವಿವೇಚನೆಗೆ ಬಿಟ್ಟ ವಿಷಯವಾಗಿದೆ,’ ಎಂದು ಅವರು ಹೇಳಿದರು.

ಯಡಿಯೂರಪ್ಪನರು ಜುಲೈ 16ರಂದು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮತ್ತು ಮರುದಿನ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದರು. ಅವರೊಂದಿಗೆ ಸಭೆಗಳನ್ನು ನಡೆಸಿದ ನಂತರ ಯಡಿಯೂರಪ್ಪನರು, ರಾಜಿನಾಮೆ ಸಲ್ಲಿಸುವ ವಿಚಾರವನ್ನು ತಳ್ಳಿ ಹಾಕಿದರಲ್ಲದೆ, ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಯಿತು ಎಂದು ಹೇಳಿದ್ದರು. ಆಗಸ್ಟ್ ಮೊದಲ ವಾರದಲ್ಲಿ ಪುನಃ ದೆಹಲಿಗೆ ಭೇಟಿ ನೀಡಿ ನಾಯಕರೊಂದಿಗೆ ಚರ್ಚೆ ನಡೆಸಲಿರುವುದಾಗಿ ಅವರು ಹೇಳಿದರು.

ಹಿಂದೆ ರಾಜ್ಯದ ಮುಖ್ಯಮಂತ್ರಿಗಳೂ ಆಗಿದ್ದ ಸದಾನಂದ ಗೌಡ ಅವರು, ಯಡಿಯೂರಪ್ಪನರರನ್ನು ಮುಖ್ಯಮಂತ್ರಿಗಳ ಸ್ಥಾನದಿಂದ ಸರಿಸಲು ಸಮಂಜಸವಾದ ಕಾರಣಗಳೇ ಇಲ್ಲ ಮತ್ತು ಅವರು ಕರ್ನಾಟಕದಲ್ಲಿ ಕೊವಿಡ್​ ಪರಿಸ್ಥಿತಿಯನ್ನು ಮತ್ತು ಆಡಳಿತದ ಇತರ ಆಯಾಮಗಳನ್ನು ಅದ್ಭುತವಾಗಿ ನಿರ್ವಹಿಸಿ ಕೇಂದ್ರ ನಾಯಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು. ‘ಅವರನ್ನು ಬದಲಲಾಯಿಸುವ ಅಗತ್ಯವೇ ಇಲ್ಲವೆಂದು ನಾನು ಖಚಿತವಾಗಿ ಹೇಳಬಲ್ಲೆ, ದಯವಿಟ್ಟು ಗಾಳಿಸುದ್ದಿಯನ್ನು ನಂಬಬೇಡಿ,’ ಎಂದು ಗೌಡ ಹೇಳಿದರು.

ರಾಜ್ಯದ ವಿವಿಧ ಲಿಂಗಾಯತ ಮಠಗಳ ಶ್ರೀಗಳು ಯಡಿಯೂರಪ್ಪನವರಿಗೆ ಬೆಂಬಲ ಸೂಚಿಸಿರುವುದನ್ನು ಅವರ ಗಮನಕ್ಕೆ ತಂದಾಗ,‘ ನೀವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಜನ ಖಂಡಿತವಾಗಿಯೂ ಪ್ರಶಂಸಿಸುತ್ತಾರೆ. ಅದಕ್ಕಾಗೇ ಮಠಾಧೀಶರು ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ,’ ಎಂದು ಗೌಡ ಹೇಳಿದರು.

‘ವೈಯಕ್ತಿಕವಾಗಿ ನನ್ನನ್ನು ಕೇಳುವುದಾದರೆ, ಯಡಿಯೂರಪ್ಪನವರನ್ನು ಬದಲಿಸುವ ಅಗತ್ಯವೇ ಇಲ್ಲ, ಮಿಕ್ಕಿದ್ದು ರಾಷ್ಟ್ರೀಯ ನಾಯರಿಗೆ ಬಿಟ್ಟಿದ್ದು,’ ಎಂದು ಅವರು ಹೇಳಿದರು.

ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ.

‘ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ, ಅದನ್ನು ಖುದ್ದು ಅವರೇ ಹೇಳಿದ್ದಾರೆ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಸಹ ಇದೇ ಮಾತನ್ನು ಹೇಳಿದ್ದಾರೆ. ಇಂಥ ಗಾಳಿ ಸುದ್ದಿಗಳ ಮೂಲಕ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡುವ ಪ್ರಯತ್ನ ನಡೆದಿದೆ,’ ಎಂದು ಬುಧವಾರ ಪಿಟಿಐ ಜೊತೆ ಮಾತಾಡುತ್ತಾ ಬೊಮ್ಮಾಯಿ ಹೇಳಿದರು.

ಕಳೆದ ತಿಂಗಳು ಬೆಂಗಳೂರಿಗೆ ಭೇಟಿ ನೀಡಿದ್ದ ಅರುಣ್ ಸಿಂಗ್ ಅವರು ರಾಜ್ಯ ಬಿಜೆಪಿ ಘಟಕದ ಎಲ್ಲ ನಾಯಕರನ್ನು ಭೇಟಿಮಾಡಿ ಅವರ ದೂರು ಮತ್ತು ಬೇಡಿಕೆಗಳನ್ನು ಆಲಿಸಿದ್ದರು. ಅದಾದ ನಂತರವೇ ಅವರು ನಾಯಕತ್ವ ಬದಲಾವಣೆ ಮಾತನ್ನು ಅಲ್ಲಗಳೆದಿದ್ದರು. ರಾಜ್ಯ ಬಿಜೆಪಿ ಘಟಕದ ಕೆಲ ನಾಯಕರು ಹಲವಾರು ಸಲ ಯಡಿಯೂರಪ್ಪನವರ ವಿರುದ್ಧ ಅಸಂತೃಪ್ತಿಯನ್ನು ವ್ಯಕ್ತಪಡಿಸಿದ್ದರಿಂದ ನಾಯಕತ್ವ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: BS Yediyurappa: ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಮುಂದುವರಿಕೆ; ಸಿಎಂ ಬದಲಾವಣೆ ಚರ್ಚೆ ಅನಗತ್ಯ: ಬಸವರಾಜ ಬೊಮ್ಮಾಯಿ

Click on your DTH Provider to Add TV9 Kannada