ವಂಚನೆ ಪ್ರಕರಣ: ಡೀಲ್ ವಿಫಲವಾದ ಬಳಿಕ ಹಣ ಮರು ಪಾವತಿಗೆ ಉದ್ಯಮಿ ಬಳಿ ಸಮಯ ಕೇಳಿದ್ದ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಮತ್ತು ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇನ್ನೂ ಮೂವರು ಆರೋಪಿಗಳು ನಗರದ ಮಂಗಮ್ಮನಪಾಳ್ಯ ಕಚೇರಿಯಲ್ಲಿ ಪೂಜಾರಿ ಅವರನ್ನು ಭೇಟಿಯಾಗಿದ್ದು, ಅವರ ನಡುವಣ ಮಾತುಕತೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಂಟು ಆರೋಪಿಗಳ ಪೈಕಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದು, ಹಾಲಶ್ರೀ ತಲೆಮರೆಸಿಕೊಂಡಿದ್ದಾರೆ.

ವಂಚನೆ ಪ್ರಕರಣ: ಡೀಲ್ ವಿಫಲವಾದ ಬಳಿಕ ಹಣ ಮರು ಪಾವತಿಗೆ ಉದ್ಯಮಿ ಬಳಿ ಸಮಯ ಕೇಳಿದ್ದ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ
Updated By: Ganapathi Sharma

Updated on: Sep 16, 2023 | 10:06 AM

ಬೆಂಗಳೂರು, ಸೆಪ್ಟೆಂಬರ್ 16: ಉದ್ಯಮಿಗೆ 5 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರದ ಆರಂಭದಲ್ಲಿ ಬಂಧನಕ್ಕೊಳಗಾಗಿದ್ದ ಚೈತ್ರಾ ಕುಂದಾಪುರ (Chaitra Kundapur) ಅವರು ಕೇಂದ್ರ ಅಪರಾಧ ವಿಭಾಗದ (CCB) ವಿಚಾರಣೆಗೆ ಮುನ್ನ ಕುಸಿದುಬಿದ್ದ ನಂತರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಉದ್ಯಮಿ ಗೋವಿಂದ್ ಬಾಬು ಎಂಬುವವರಿಗೆ ಬೈಂದೂರಿನ ಬಿಜೆಪಿ ಟಿಕೆಟ್ ಕೊಡಿಸಲು ಹಣ ಕೇಳಿದ್ದ ಆರೋಪವನ್ನು ತಳ್ಳಿ ಚೈತ್ರಾ ಹಾಕಿದ್ದಾರೆ. ಡೀಲ್ ವಿಫಲವಾದ ನಂತರ ಹಣ ಮರುಪಾವತಿಗೆ ಸಮಯಾವಕಾಶ ಕೋರಿ ಬೆಂಗಳೂರಿನ ಅವರ ಕಚೇರಿಯಲ್ಲಿ ದೂರುದಾರರನ್ನು ಚೈತ್ರಾ ಭೇಟಿಯಾಗಿದ್ದರು ಎನ್ನಲಾಗಿದೆ.

ಚೈತ್ರಾ ಕುಂದಾಪುರ ಮತ್ತು ಎಫ್‌ಐಆರ್‌ನಲ್ಲಿ ಹೆಸರಿಸಲಾದ ಇನ್ನೂ ಮೂವರು ಆರೋಪಿಗಳು ನಗರದ ಮಂಗಮ್ಮನಪಾಳ್ಯ ಕಚೇರಿಯಲ್ಲಿ ಪೂಜಾರಿ ಅವರನ್ನು ಭೇಟಿಯಾಗಿದ್ದು, ಅವರ ನಡುವಣ ಮಾತುಕತೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಜಯನಗರ ಜಿಲ್ಲೆಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ, ಚೈತ್ರಾ ಸೇರಿದಂತೆ ಏಳು ಮಂದಿ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿ ಐದು ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.

ಎಂಟು ಆರೋಪಿಗಳ ಪೈಕಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದು, ಹಾಲಶ್ರೀ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಎಂಟನೇ ಆರೋಪಿ ಪ್ರಸಾದ್​ನನ್ನು ಮತ್ತೆ ವಶಕ್ಕೆ ಪಡೆದ ಸಿಸಿಬಿ

ಪ್ರಕರಣದ ಆರೋಪಿ ಸಂಖ್ಯೆ 3 ಎಂದು ಹೆಸರಿಸಲಾದ ಅಭಿನವ ಹಾಲಶ್ರೀ ಸದ್ಯ ತಲೆಮರೆಸಿಕೊಂಡಿದ್ದು, ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಅರ್ಜಿ ಇಂದು ವಿಚಾರಣೆಗೆ ಬರಲಿದೆ.

ವರದಿಗಳ ಪ್ರಕಾರ, ಶ್ರೀಗಳು 8 ಎಕರೆ ಭೂಮಿಯನ್ನು ಖರೀದಿಸಿದ್ದಲ್ಲದೆ, ಉಳಿದ ಹಣದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ಈ ಮಧ್ಯೆ, ಶುಕ್ರವಾರ ಸಿಟಿ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಚೈತ್ರಾ ಕುಸಿದು ಬಿದ್ದ ನಂತರ, ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ