AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ; ರೈತರ ಆತ್ಮಹತ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ. ಕೃಷಿ ಇಲಾಖೆ ಎನ್ನುವುದು ಇದೆಯಾ? ಅದು ಕೃಷಿ ಇಲಾಖೆಯಾ, ಕಸಾಯಿಖಾನೆಯಾ ಎಂದು ಪ್ರಶ್ನಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ 251 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪತ್ರಿಕಾ ವರದಿಯೊಂದರ ತುಣುಕನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ; ರೈತರ ಆತ್ಮಹತ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ
ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ
Ganapathi Sharma
|

Updated on: Sep 16, 2023 | 10:58 AM

Share

ಬೆಂಗಳೂರು, ಸೆಪ್ಟೆಂಬರ್ 16: ರಾಜ್ಯದಲ್ಲಿ ರೈತರ ಆತ್ಮಹತ್ಯೆ (Farmers’ Suicides) ಹೆಚ್ಚುತ್ತಿರುವ ಬಗ್ಗೆ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ತೀವ್ರ ಕಳವಳ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ಹರಿಹಾಯ್ದಿರುವ ಅವರು, ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ. ಕೃಷಿ ಇಲಾಖೆ ಎನ್ನುವುದು ಇದೆಯಾ? ಅದು ಕೃಷಿ ಇಲಾಖೆಯಾ, ಕಸಾಯಿಖಾನೆಯಾ ಎಂದು ಪ್ರಶ್ನಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ 251 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪತ್ರಿಕಾ ವರದಿಯೊಂದರ ತುಣುಕನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ಬೆಳ್ಳಂ ಬೆಳಗ್ಗೆಯೇ ಈ ವರದಿ ಓದಿದಾಕ್ಷಣ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೆ’ ಎಂದು ಎಕ್ಸ್​ ಪೋಸ್ಟ್​​ನಲ್ಲಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರೈತರ ಆತ್ಮಹತ್ಯೆಯೇ ಕರ್ನಾಟಕ ಮಾದರಿಯೇ; ಹೆಚ್​ಡಿಕೆ ಪ್ರಶ್ನೆ

‘ಗ್ಯಾರಂಟಿಗಳನ್ನು ಕೊಟ್ಟೆವೆಂದು ಬೀಗುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ? ಇದೇನಾ ‘ಕರ್ನಾಟಕ ಮಾದರಿ’? ರಾಜ್ಯದಲ್ಲಿ ಕೃಷಿ ಇಲಾಖೆ ಎನ್ನುವುದು ಇದೆಯಾ? ಅದು ಕೃಷಿ ಇಲಾಖೆಯಾ, ಕಸಾಯಿಖಾನೆಯಾ? ಕಂದಾಯಕ್ಕೂ ಆದಾಯದ ಚಿಂತೆಯಾ? ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ! ಇದು ನೈಜಸ್ಥಿತಿ. ಆಗಸ್ಟ್, ಸೆಪ್ಟೆಂಬರ್ ನಲ್ಲಿ ಕೆಲವೆಡೆ ಮಳೆಯಾದರೂ ಪ್ರಯೋಜನವಾಗಿಲ್ಲ. ಆಗ್ಗೆ ಬೆಳೆಗಳು ನಾಶವಾಗಿವೆ. ತುರ್ತಾಗಿ ಕೇಂದ್ರಕ್ಕೆ ಮನವಿ ಮಾಡಬೇಕಿದ್ದ ಸರಕಾರ ಮಾರ್ಗಸೂಚಿ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಕಾಲಹರಣವೂ ಜೀವಹರಣವೂ ಬೇರೆ ಬೇರೆ ಅಲ್ಲ. ತುರ್ತಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣ ಬಿಡುಗಡೆ ಮಾಡಬಹುದಲ್ಲವೇ’ ಎಂದು ಹೆಚ್​ಡಿಕೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಜೊತೆ ಮೈತ್ರಿ ಬೆಳೆಸಲು ಯಡಿಯೂರಪ್ಪ ಅದ್ಯಾವ ನೈತಿಕತೆಯೊಂದಿಗೆ ಮುಂದಾಗಿದ್ದಾರೋ? ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಬೆಳೆ ವಿಮೆಯೂ ಅನ್ನದಾತರ ಆಪತ್ತಿಗೆ ಆಗುತ್ತಿಲ್ಲ, ಅದರ ಬಗ್ಗೆ ಅವರಿಗೆ ವಿಶ್ವಾಸವೇ ಇಲ್ಲ. ಅವರು ಸಾವಿನ ದವಡೆಗೆ ಬೀಳುತ್ತಿದ್ದರೆ ಅಧಿಕಾರಿಗಳು ಅರ್ಹ-ಅನರ್ಹ ಸಾವು ಎಂದು ವಿಭಜಿಸಿ ಲೆಕ್ಕ ಹಾಕಿಕೊಂಡು ಕೂತಿದ್ದಾರೆ. ಸಾವಿನಲ್ಲೂ ಅರ್ಹತೆ, ಅನರ್ಹತೆ ಹುಡುಕುವ ಈ ಕ್ರೂರತೆಗೆ ಏನೆಂದು ಹೇಳುವುದು? ರೈತರ ಸಾವುಗಳೆಂದರೆ ಇವರಿಗೆ ಇಷ್ಟು ಹಗುರವೇ? ನನ್ನ ಮನವಿ ಇಷ್ಟೇ; ರೈತರು ಎದೆಗುಂದಬಾರದು. ನಿಮ್ಮ ದುಡುಕಿನ ನಿರ್ಧಾರ ನಿಮ್ಮ ಕುಟುಂಬವನ್ನು ಅನಾಥಗೊಳಿಸುತ್ತದೆ, ನಿಮ್ಮೊಂದಿಗೆ ನಾನಿದ್ದೇನೆ. ಸರಕಾರ ಇಂಥಹ ಆತ್ಮಹತ್ಯೆ ಪ್ರಕರಣಗಳಿಗೆ ಇತಿಶ್ರೀ ಹಾಡಲೇಬೇಕು. ಶಾಶ್ವತವಾಗಿ ಪರಿಹಾರೋಪಾಯ ಕಂಡುಕೊಳ್ಳಬೇಕು. ಜೀವಬಿಟ್ಟ ರೈತ ಕುಟುಂಬಗಳಿಗೆ ಮಾನವೀಯತೆಯ ನೆರವು ಕೊಡಬೇಕು. ವಿಳಂಬ ಸರಿಯಲ್ಲ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ