ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟದ ಕಾಲದಲ್ಲಿ ಉಳ್ಳವರು ಒಂದಿಲ್ಲಾ ಒಂದು ರೀತಿಯಲ್ಲಿ ಜನರ ನೆರವಿಗೆ ನಿಂತ ಅನೇಕ ಸನ್ನವೇಶಗಳ ಬಗ್ಗೆ ನಾವು ಓದಿದ್ದೇವೆ. ಈಗ ಲಾಕ್ಡೌನ್ ಮುಕ್ತಾಯವಾಗಿದೆ. ವ್ಯಾಪಾರ, ವಹಿವಾಟು ಮತ್ತೆ ನಡೆಯುತ್ತಿದೆ. ರೈತರು ಕೂಡ ಉಳಿಮೆಗೆ ಮುಂದಾಗಿದ್ದಾರೆ. ಹೀಗೆ ಉತ್ತಮ ಮಳೆಯನ್ನು ನಂಬಿದ ರೈತರು ಜಮೀನು ಹದ ಮಾಡಿ ಬೆಳೆ ಬೆಳೆಯಲು ಶುರು ಮಾಡಿದ್ದಾರೆ. ಆದರೆ ಕೆಲವು ರೈತರಲ್ಲಿ ಎತ್ತುಗಳು ಇಲ್ಲ, ಇತ್ತ ಟ್ರಾಕ್ಟರ್ಗಳು ಕೈಗೆ ಸಿಗುತ್ತಿಲ್ಲ. ಹೀಗಾಗಿ ಇರುವ ಜಮೀನು ಬಿಟ್ಟು ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಇದನ್ನು ಅರಿತ ವ್ಯಕ್ತಿಯೊಬ್ಬರು ರೈತರ ನೆರವಿಗೆ ದಾವಿಸಿದ್ದು, ತಲಾ ಎರಡು ಎಕರೆ ಜಮೀನನ್ನು ಉಚಿತವಾಗಿ ಟ್ರಾಕ್ಟರ್ಗಳ ಮೂಲಕ, ಉಳುಮೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಈ ಬಾರಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಗಿಂತ ಉತ್ತಮವಾಗಿ ಮಳೆಯಾಗಿದೆ. ಹೀಗಾಗಿ ರೈತರು ಉಳುಮೆಗೆ ಮುಂದಾಗಿದ್ದಾರೆ. ಆದರೆ ಸಣ್ಣ ರೈತರು ಅಂದರೆ ಎರಡು ಎಕರೆ ಜಮೀನು ಹೊಂದಿರುವವರ ಜಮೀನು ಉಳುಮೆಗೆ ಯಾರು ಬರುತ್ತಿಲ್ಲ. ಇಂತಹ ರೈತರ ಸಮಸ್ಯೆ ಅರಿತ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ರೈತ ಹಾಗೂ ಸಮಾಜ ಸೇವಕರಾದ ಕೆಂಪಣ್ಣ, ಉಚಿತವಾಗಿ ರೈತರ ಜಮೀನು ಉಳುಮೆ ಮಾಡಿಕೊಡಲು ಮುಂದೆ ಬಂದಿದ್ದಾರೆ. ಗೌರಿಬಿದನೂರು ತಾಲೂಕಿನ ಸಣ್ಣ ರೈತರು ಎಷ್ಟು ಜನ ಬೇಕಾದರೂ ಕೆಂಪಣ್ಣ ಟ್ರಸ್ಟಿನ ಟ್ರಾಕ್ಟರ್ಗಳನ್ನು ತಲಾ ಎರಡು ಎಕರೆಗೆ ಬಳಸಿಕೊಳ್ಳಬಹುದು.
ಸ್ವಂತ ಟ್ರಸ್ಟ್ ನಡಿ ಕೆಂಪಣ್ಣ ಎನ್ನುವವರು 60 ಟ್ರಾಕ್ಟರ್ಗಳನ್ನು ಗುತ್ತಿಗೆ ಪಡೆದಿದ್ದು, ಪ್ರತಿಯೊಂದು ಗ್ರಾಮ ಪಂಚಾಯತಿಗೆ ಒಬ್ಬರಂತೆ ಟ್ರಸ್ಟ್ನ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ. ರೈತರು ಕೆಂಪಣ್ಣ ಟ್ರಸ್ಟ್ನ ಮೊಬೈಲ್ ಆ್ಯಪ್ನಲ್ಲಿ ಓಲಾ, ಉಬರ್, ಕ್ಯಾಬ್ ಬುಕ್ ಮಾಡುವ ರೀತಿಯಲ್ಲಿ, ತಮ್ಮ ಜಮೀನಿನಲ್ಲಿ ನಿಂತು ಜಮೀನು ಉಳುಮೆಗೆ ಬುಕ್ ಮಾಡಿದರೆ ಸಾಕು, ಟ್ರಸ್ಟ್ನ ಸಿಬ್ಬಂದಿ ಹಾಗೂ ಟ್ರಾಕ್ಟರ್ ಆಗಮಿಸಿ ತಲಾ ರೈತರ ಎರಡು ಎಕರೆ ಜಮೀನನ್ನು ಉಚಿತವಾಗಿ ಉಳುಮೆ ಮಾಡಿ ಹೋಗುತ್ತಾರೆ. ಈ ಸೇವೆಯಿಂದ ನಮಗೆ ತುಂಬಾ ಅನುಕೂಲವಾಗಿದೆ ಎಂದು ಕಾದಲವೇಣಿ ರೈತ ರಾಮು ಸಂತಸ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸಂಕಷ್ಟದ ಮಧ್ಯೆ, ರೈತರು ಇರೊ ಬರೊ ದನ, ಕರು, ಎತ್ತುಗಳನ್ನು ಮಾರಾಟ ಮಾಡಿದ್ದಾರೆ. ಇನ್ನೂ ಇರುವ ಜಮೀನನ್ನು ಸಕಾಲಕ್ಕೆ ಉಳುಮೆ ಮಾಡಲಾಗದೆ, ಕೈಕಟ್ಟಿ ಕುಳಿತಿದ್ದಾರೆ. ಹೀಗಿರುವಾಗ ರೈತರ ನೆರವಿಗೆ ಬಂದ ಕೆಂಪಣ್ಣನವರ ಸಹಾಯ ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ:
ಎತ್ತುಗಳಂತೆ ಉಳುಮೆ ಮಾಡುತ್ತಿದ್ದ ಬಾಲಕಿಯರಿಗೆ ಟ್ರ್ಯಾಕ್ಟರ್ ಗಿಫ್ಟ್ ಕೊಟ್ಟ ಸೋನು ಸೂದ್
Published On - 12:31 pm, Mon, 5 July 21