ಬೆಂಗಳೂರು, (ನವೆಂಬರ್ 25): ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಫ್ಎಸ್ಎಲ್ ವರದಿ ಬಂದಿದ್ದು, ಜಾತಿ ನಿಂದನೆ ಮಾಡಿರುವ ಆಡಿಯೋ ಮುನಿರತ್ನ ಅವರದ್ದೇ ಎಂದು ಎಫ್ಎಸ್ಎಲ್ ವರದಿಯಲ್ಲಿ ದೃಢಪಟ್ಟಿದೆ. ಫೋನ್ನಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮುನಿರತ್ನ ವಿರುದ್ಧ ಗುತ್ತಿಗೆದಾರ ವೇಲು ನಾಯ್ಕರ್ ದೂರು ದಾಖಲಿಸಿದ್ದು, ಜೊತೆಗೆ ಅವರು ಪೊಲೀಸರಿಗೆ ನೀಡಿದ್ದ ಆಡಿಯೋ ಕ್ಲಿಪ್ಅನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಆಡಿಯೋದಲ್ಲಿರುವುದು ಮುನಿರತ್ನ ಅವರ ಧ್ವನಿ ಎಂದು ದೃಢವಾಗಿದೆ ಎಂದು ಟಿವಿ9ಗೆ ಸಿಐಡಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಚೆಲುವರಾಜು ಜತೆಗೆ ಮಾತನಾಡುವ ವೇಳೆ ಜೀವ ಬೆದರಿಕೆ, ಜಾತಿ ನಿಂದನೆ ಮಾಡಿದ್ದಾರೆಂದು ಗುತ್ತಿಗೆದಾರ ವೇಲು ನಾಯ್ಕರ್ ಅವರು ಮುನಿರತ್ನ ಅವರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಮುನಿರತ್ನ ನಿಂದನೆ ಮಾಡಿದ್ದ ಆಡಿಯೋವನ್ನು ಸಹ ಪೊಲೀಸರಿಗೆ ನೀಡಿದ್ದರು. ಈ ದೂರಿನ ಮೇರೆಗೆ ಮುನಿರತ್ನ ವಿರುದ್ಧ ಸೆಪ್ಟೆಂಬರ್ 13 ರಂದು ಎಫ್ಐಆರ್ ದಾಖಲಾಗಿತ್ತು.
ಬಳಿಕ ಸೆ.14ರಂದು ಎಸ್ಐಟಿ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದರು. ಆ ವೇಳೆ ಪೆನ್ ಡ್ರೈವ್ ಆಡಿಯೋ ಕ್ಲಿಪ್ ಹಾಗೂ ಬಂಧನ ವೇಳೆ ಪಡೆಯಲಾಗಿದ್ದ ಶಾಸಕ ಮುನಿರತ್ನ ವಾಯ್ಸ್ ಸ್ಯಾಂಪಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಿದರು. ಈಗ ಎಫ್ಎಸ್ಎಲ್ ರಿಪೋರ್ಟ್ ಎಸ್ಐಟಿ ಪೊಲೀಸರ ಕೈಸೇರಿದ್ದು, ಮುನಿರತ್ನ ಜಾತಿ ನಿಂದನೆ ಮಾಡಿದ್ದರು ಎನ್ನಲಾದ ಆಡಿಯೋ ಧ್ವನಿ ಧೃಡವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಮುನಿರತ್ಮಗೆ ಮತ್ತೆಗೆ ಸಂಕಷ್ಟು ಎದುರಾಗುವುದು ಕಟ್ಟಿಟ್ಟ ಬುತ್ತಿ.
ಈ ಜಾತಿ ನಿಂದನೆ ಪ್ರಕರಣದಲ್ಲಿ ಮುನಿರತ್ನ ಅವರು ಜಾಮೀನಿನ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಆಚೆ ಬಂದಿದ್ದರು. ಬಳಿಕ ಅತ್ಯಾಚಾರ ಪ್ರಕರಣದಲ್ಲೂ ಸಹ ಮತ್ತೆ ಜೈಲು ಸೇರಿದ್ದರು. ಬಳಿಕ ಆ ಪ್ರಕರಣದಲ್ಲೂ ಸಹ ಜಾಮೀನನ ಮೇಲೆ ಬಿಡುಗಡೆಯಾಗಿದ್ದಾರೆ. ಇದೀಗ ಮತ್ತೆ ಜಾತಿ ನಿಂದನೆ ಪ್ರಕರಣ ಮುನಿರತ್ನ ಅವರಿಗೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ