ಗದಗ, ಆಗಸ್ಟ್.21: ಗದಗ-ಬೆಟಗೇರಿ (Gadag-Betageri) ನಗರಸಭೆ ಆಸ್ತಿ ಲೀಜ್ ಪ್ರಕರಣ ಅವಳಿ ನಗರದಲ್ಲಿ ಭಾರಿ ಸದ್ದು ಮಾಡಿದೆ. ಸದ್ದಿಲ್ಲದೆ ಖಾಸಗಿ ವ್ಯಕ್ತಿಗಳಿಗೆ ಲೀಜ್ ನೀಡುವ ಮೂಲಕ ಸರ್ಕಾರಿ ಆಸ್ತಿ ನುಂಗುವ ಪ್ಲಾನ್ ಅಂತ ಗದಗ-ಬೆಟಗೇರಿ ಅವಳಿ ನಗರದ ಜನರು ಮಾತಾಡ್ತಾಯಿದ್ದಾರೆ. ಬಿಜೆಪಿ ಭದ್ರಕೋಟೆಯಲ್ಲೇ ಅವಳಿ ನಗರದ ಜನ್ರು ಬಿಜೆಪಿಗೆ ಛೀ.., ಥೂ ಅಂತಿದ್ದಾರೆ. ಬಿಜೆಪಿ (BJP) ನಗರಸಭೆ ಆಡಳಿತದ ಅಂದಿನ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮೂಷಿಗೇರಿ ಅಂಡ್ ಗ್ಯಾಂಗ್ ನಗರಸಭೆ ಅಧಿಕೃತ ಠಾರಾವು ಬುಕ್ ನಲ್ಲಿ ಇಲ್ಲದಿದ್ರೂ ನಕಲಿ ಠರಾವು ಮಾಡಿ ಸಿಕ್ಕಾಕಿಕೊಂಡಿದ್ದಾರೆ.
ಫೆಬ್ರವರಿ, 9 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಠರಾವು ನಂಬರ್ 378ರಲ್ಲಿ ನಗರಸಭೆ ಆಸ್ತಿ ಖಾಸಗಿ ವ್ಯಕ್ತಿಗಳಿಗೆ ಲೀಜ್ ನೀಡಲು ನಕಲಿ ಠರಾವು ಮಾಡಿದ್ದಾರೆ. ಆ ನಕಲಿ ಠರಾವುಗೆ ನಗರಸಭೆ ಪೌರಾಯುಕ್ತರ ಫೋರ್ಜರಿ ಸಹಿ ಮಾಡಿದ್ದಾರಂತೆ. ಈ ಎಲ್ಲ ನಕಲಿ ದಾಖಲೆ ಸೃಷ್ಟಿ ಮಾಡಿ ನಗರಸಭೆಯ ಬಿಜೆಪಿ ಆಡಳಿತ, ಖಾಸಗಿ ವ್ಯಕ್ತಿಯಾದ ವಿಜಯಲಕ್ಷ್ಮೀ ಶಿಗ್ಲಿಮಠ ಹಾಗೂ ಸೆಕ್ರೆಟರಿ ದಿ. ಕಾಟನ್ ಮಾರ್ಕೆಟ್ ವರ್ಕ್ ಓನರ್ಸ್, ಅಸೋಸಿಯೇಷನ್ ಗದಗ ಸಂಸ್ಥೆಗೆ ನೀಡಿದೆ. ಈ ಇಬ್ಬರು ವ್ಯಕ್ತಿಗಳು ನಗರಸಭೆ ನೀಡಿದ ದಾಖಲೆಗಳು ಹೈಕೋರ್ಟ್ ಗೆ ನೀಡಿದ್ದಾರೆ
ನಕಲಿ ಠರಾವು, ಪೌರಾಯುಕ್ತರ ಫೋರ್ಜರಿ ಸಹಿ ಮಾಡಿ ಬಿಜೆಪಿ ಆಡಳಿತ ನೂರಾರು ಕೋಟಿ ಆಸ್ತಿ ಖಾಸಗಿ ವ್ಯಕ್ತಿಗಳಿಗೆ ಲೀಜ್ ನೀಡಿ ಕೋಟ್ಯಾಂತರ ಲೂಟಿ ಮಾಡಿದೆ. ಈ ವಿಷಯ ಗೊತ್ತಾದ ಬಳಿಕ ಅಂದಿನ ಪ್ರಭಾರ ಪೌರಾಯುಕ್ತ ಪ್ರಶಾಂತ್ ವರಗಪ್ಪನವರ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ಹಾಗೂ ವಿಜಯಲಕ್ಷ್ಮೀ ಶಿಗ್ಲಿಮಠ ಹಾಗೂ ಸೆಕ್ರೆಟರಿ ದಿ. ಕಾಟನ್ ಮಾರ್ಕೆಟ್ ವರ್ಕ್ ಓನರ್ಸ್, ಅಸೋಸಿಯೇಷನ್ ಗದಗ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ಈ ವಿಷಯ ಅವಳಿ ನಗರದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕ್ರಿಮಿನಲ್ ಕೇಸ್ ದಾಖಲಾಗಿರುವುದರಿಂದ ವಿಜಯಲಕ್ಷ್ಮೀ ಶಿಗ್ಲಿಮಠ ಹಾಗೂ ಸೆಕ್ರೆಟರಿ ದಿ. ಕಾಟನ್ ಮಾರ್ಕೆಟ್ ವರ್ಕ್ ಓನರ್ಸ್, ಅಸೋಸಿಯೇಷನ್ ಗದಗ ಸಂಸ್ಥೆ ಸದಸ್ಯರು ಹಾಗೂ ಮಾಜಿ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ, ಗೂಳಪ್ಪ ಮುಷಿಗೇರಿ ಬಂಧನದ ಭೀತಿಯಿಂದ ಗದಗ ಜಿಲ್ಲೆಯಿಂದ ಎಸ್ಕೇಪ್ ಆಗಿದ್ದಾರೆ. ಬೇಲ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಬೇಲ್ ಸಿಕ್ಕ ನಂತರವೇ ಗದಗ ನಗರಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಗದಗ-ಬೆಟಗೇರಿ ನಗರಸಭೆ ಆಸ್ತಿ ಲೂಟಿ ಪ್ರಕರಣಕ್ಕೆ ಟ್ವಿಸ್ಟ್; ಸುಳ್ಳು ಆರೋಪ ಮಾಡಿ, ಗದ್ದುಗೆ ಏರಲು ಪ್ಲಾನ್ ಮಾಡಿದೆಯಾ ಕಾಂಗ್ರೆಸ್?
ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗುತ್ತಿದ್ದಂತೆ ಅವಳಿ ನಗರದಿಂದ ಈ ಎಲ್ಲ ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಅವಳಿ ನಗರದಲ್ಲಿ ಸರ್ಕಾರ ಆಸ್ತಿ ಲೀಜ್ ವಿಚಾರ ಭಾರಿ ಚರ್ಚೆ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಹೀಗಾಗಿ ಶನಿವಾರ ಹಾಗೂ ರವಿವಾರ ನಗರಸಭೆ ಕಚೇರಿಗೆ ಬೆಟಗೇರಿ ಸಿಪಿಐ ಧೀರಜ್ ಶಿಂಧೆ ಹಾಗೂ ತಂಡ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳ, ಸಿಬ್ಬಂದಿಗಳ ತೀವ್ರ ವಿಚಾರಣೆ ಮಾಡಿ ವಿವಿರವಾದ ಮಾಹಿತಿ ಪಡೆದಿದ್ದಾರೆ. ಅಷ್ಟೇ ಅಲ್ಲ ಮಹತ್ವದ ದಾಖಲೆಗಳು ಕಲೆ ಹಾಕಿದ್ದಾರೆ. ನ್ಯಾಯಾಲಯದಲ್ಲಿನ ದಾಖಲೆಗಳು ಕೂಡ ಕಲೆ ಹಾಕಲಾಗುತ್ತಿದೆ. ಆದ್ರೆ, ಪ್ರಮುಖ ಆರೋಪಿಗಳಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲು ಮನೆಗೆ ಹೋದ್ರೆ ಸಿಕ್ಕಿಲ್ಲ ಅಂತ ಪೊಲೀಸ್ ಅಧಿಕಾರಿಗಳು ಟಿವಿ9ಗೆ ತಿಳಿಸಿದ್ದಾರೆ. ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ನೋಟಿಸ್ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತೆ. ಒಂದು ವೇಳೆ ಸಿಗದಿದ್ರೆ ಕಾನೂನು ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ ಅಂತ ಟಿವಿ9ಗೆ ಎಸ್ಪಿ ಬಿ ಎಸ್ ನೇಮಿಗೌಡ ಮಾಹಿತಿ ನೀಡಿದ್ದಾರೆ.
ನಕಲಿ ಠರಾವು ಪ್ರತಿ ಕೊಟ್ಟವರು ಯಾರು? ಪೌರಾಯುಕ್ತರ ಸಹಿ ಮಾಡಿದವರು ಯಾರು? ಅನ್ನೋ ಬಗ್ಗೆ ಕೋರ್ಟ್ ಗೆ ದಾಖಲೆ ನೀಡಿದ ಖಾಸಗಿ ವ್ಯಕ್ತಿಗಳ ವಿಚಾರಣೆ ಮಾಡಬೇಕಾಗಿದೆ. ಆದರೆ ಅವರ್ಯಾರು ಸಿಗ್ತಿಲ್ಲ. ಎಲ್ಲರೂ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದು ಪೊಲೀಸ್ ಅಧಿಕಾರಿಗಳ ತನಿಖೆಗೆ ಅಡ್ಡಿಯಾಗುತ್ತಿದೆ. ಪೊಲೀಸ್ರು ಖಾಸಗಿ ವ್ಯಕ್ತಿಗಳು ಹಾಗೂ ಅಧ್ಯಕ್ಷೆ, ಸದಸ್ಯರು ಎಲ್ಲಿದ್ದಾರೆ ಅನ್ನೋ ಪತ್ತೆ ಹಚ್ಚೋ ಕಾರ್ಯ ನಡೆಸಿದ್ದಾರೆ. ತನಿಖೆಗೆ ಸ್ಪಂದಿಸದಿದ್ರೆ ಯಾವುದೇ ಕ್ಷಣದಲ್ಲೂ ಪೊಲೀಸ್ರು ಬಂಧಿಸಲಿದ್ದಾರೆ ಅನ್ನೋ ಮಾತುಗಳು ಪೊಲೀಸ್ ಇಲಾಖೆಯಲ್ಲಿ ಗುಸುಗುಸು ಸದ್ದು ಮಾಡುತ್ತಿದೆ.
2022ರಲ್ಲಿ ಗದಗ-ಬೆಟಗೇರಿ ನಗರಸಭೆ ಅಧಿಕಾರದ ಗದ್ದುಗೆ ಬಿಜೆಪಿ ಏರಿದೆ. ಮೊದಲ ಬಾರಿ ನಗರಸಭೆ ಸದಸ್ಯೆಯಾಗಿ ಆಯ್ಕೆಯಾದ ಉಷಾ ದಾಸರ ಅಧ್ಯಕ್ಷೆ ಗಾದಿಯ ಅದೃಷ್ಟ ಒಲಿದು ಬಂದಿದೆ. ಉಪಾಧ್ಯಕ್ಷೆಯಾಗಿ ಸುನಂದಾ ಬಾಕಳೆ ಆಯ್ಕೆಯಾಗಿದ್ರು. ಆದ್ರೆ, ಆರಂಭದಿಂದಲೂ ಅಧ್ಯಕ್ಷೆ ಉಷಾ ದಾಸರ ಹಾಗೂ ಬಿಜೆಪಿ ಸದಸ್ಯರಲ್ಲಿ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಒಂದಿಲ್ಲೊಂದು ಯಡವಟ್ಟುಗಳ ಮೂಲಕ ಬಿಜೆಪಿ ಆಡಳಿತ ಅಪಖ್ಯಾತಿಗೆ ಕಾರಣವಾಗಿತ್ತು. ಪ್ರತಿಯೊಂದು ಸಾಮಾನ್ಯ ಸಭೆಯಲ್ಲಿ ಗದ್ದಲ, ಗಲಾಟೆ. ಬಿಜೆಪಿ ಆಡಳಿತದಲ್ಲಿ ನಗರಸಭೆಯಲ್ಲಿ ಭಾರಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಅಂತ ಬಿಜೆಪಿ ಸದಸ್ಯರೇ ಪ್ರತಿಭಟನೆ ಮಾಡಿ ತಮ್ಮದೇ ಆಡಳಿತ ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ ಸಾಕಷ್ಟು ಉದಾಹರಣೆಗಳಿವೆ.
ಈ ಹಿಂದೆಯೂ ನಕಲಿ ಠರಾವು ಮಾಡಿ ಕೋಟ್ಯಾಂತರ ಗೋಲ್ಮಾಲ್ ನಡೆದಿತ್ತು. ಆಗ ಬಿಜೆಪಿ ಸದಸ್ಯರೇ ಇದು ನಕಲಿ ಠರಾವು ಮಾಡಿ ನಗರಸಭೆಗೆ ಹಾನಿ ಮಾಡಲಾಗುತ್ತಿದೆ ಅಂತ ಅಧ್ಯಕ್ಷೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ರು. ಅಧ್ಯಕ್ಷೆ ಉಷಾ ದಾಸರ್ ಸರ್ವಾಧಿಕಾರಕ್ಕೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಹಾಗೂ ಸದಸ್ಯರು ಆಕ್ರೋಶ ಹೊರಹಾಕಿದ್ರು. ಉಪಾಧ್ಯಕ್ಷೆ ಸುನಂದಾ ಬಾಕಳೆ ಹಾಗೂ ಬಿಜೆಪಿ ಸದಸ್ಯರ ಜೊತೆ ಚರ್ಚಿಸದೇ ಏಕಾಏಕಿ 2023ಆಗಸ್ಟ್ 30 ರಂದು ಸಾಮಾನ್ಯ ಸಭೆ ಕರೆದಿದ್ರು. ಆದ್ರೆ, ಇದು ನಿಯಮ ಬಾಹಿರ ಸಭೆ ಅಂತ ಅಧ್ಯಕ್ಷೆ ವಿರುದ್ಧ ಉಪಾಧ್ಯಕ್ಷೆ ಸುನಾಂದಾ ಸೇರಿ ಕಾಂಗ್ರೆಸ್, ಬಿಜೆಪಿ ಸದಸ್ಯರು ಸರ್ವಾನುಮತದಿಂದ ವಿರೋಧಿಸಿದ್ರು.
ಅಷ್ಟೇ ಅಲ್ಲ ಉಪಾದ್ಯಕ್ಷೆ ಸುನಂದಾ ಬಾಕಳೆ ಸಭೆ ಬಗ್ಗೆ ಹಾಗೂ ಟೆಂಡರ್‌ನಲ್ಲಾದ ಗೋಲ್ಮಾಲ್ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ರು. ಹೀಗಾಗಿ ಅಂದಿನ ಸಭೆ ರದ್ದಾಗಿತ್ತು. ಆದ್ರೆ, 2023ರ ಆಗಸ್ಟ್ ಒಂದೇ ತಿಂಗಳಲ್ಲೇ ಅಂದಾಜು 9 ಕೋಟಿ ಮೊತ್ತದ ನೂರಕ್ಕೂ ಹೆಚ್ಚು ಕಾಮಗಾರಿಗಳ ಕಾನೂನು ಬಾಹಿರ ಟೆಂಡರ್ ಪ್ರಕ್ರಿಯೆ ನಡೆಸಿದ್ದು, ಬೆಳಕಿಗೆ ಬಂದಿದೆ ಅಂತ ಬಿಜೆಪಿ ಸದಸ್ಯರೇ ಅಧ್ಯಕ್ಷೆ ಕೊಠಡಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ್ರು.
ನಗರಸಭೆ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದಲೂ ಅವಳಿ ನಗರಕ್ಕೆ ಗ್ರಹಣ ಹಿಡಿದಂತಾಗಿದೆ. ಈಗ ನಗರಸಭೆ ನೂರಾರು ಕೋಟಿ ಆಸ್ತಿ ನಕಲಿ ಠರಾವು, ಅಧಿಕಾರಿ ಫೋರ್ಜರಿ ಸಹಿ ಮಾಡಿದ್ದು, ಅವಳಿ ನಗರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆ ಅವಳಿ ನಗರ ಜನರು ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆಯ ನಿಷ್ಪಕ್ಷಪಾತ ತನಿಖೆ ಬಳಿಕವಷ್ಟೇ ಸತ್ಯ ಬಯಲಾಗಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:19 am, Wed, 21 August 24