ಗದಗ, ಏಪ್ರಿಲ್ 29: ಒಂದೇ ಕುಟುಂಬದ ನಾಲ್ವರು ಬರ್ಬರ ಹತ್ಯೆ ಪ್ರಕರಣಕ್ಕೆ (Gadag Murder Case) ಸಂಬಂಧಿಸಿದಂತೆ ಪೊಲೀಸರಿಂದ ಪ್ರಮುಖ ಆರೋಪಿ ಫೈರೋಜ್ ಕಾಲಿಗೆ ಗುಂಡೇಟು (firing) ನೀಡಲಾಗಿದೆ. ಗದಗ ನಗರದ ನರಗುಂದ ರಸ್ತೆಯಲ್ಲಿ ಘಟನೆ ನಡೆದಿದೆ. ಸ್ಥಳ ಮಹಜರು ವೇಳೆ ಗದಗ ಗ್ರಾಮಾಂತರ ಪಿಎಸ್ಐ ಶಿವಾನಂದ ಪಾಟೀಲ್ ಮೇಲೆಯೇ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ ಹಿನ್ನೆಲೆ ಪ್ರಾಣರಕ್ಷಣೆಗಾಗಿ ಪಿಐ ಧೀರಜ್ ಶಿಂಧೆರಿಂದ ಫೈರೋಜ್ ಕಾಲಿಗೆ ಗುಂಡು ಹಾರಿಸಲಾಗಿದೆ.
ಟಿವಿ9 ಜೊತೆಗೆ ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಗೌಡ ಹೇಳಿಕೆ ನೀಡಿದ್ದು, ನರಗುಂದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿ ಫೈರೋಜ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪಿಎಸ್ಐ ಶಿವಾನಂದ ಪಾಟೀಲ್ ತಲೆಗೆ ಗಂಭೀರ ಗಾಯವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗದಗ ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಕೊಲೆ
ಕೋಟ್ಯಾಧಿಪತಿ ಪ್ರಕಾಶ್ಗೆ ಇಬ್ಬರು ಹೆಂಡತಿಯರು. ರಿಯಲ್ ಎಸ್ಟೇಟ್ ವಿಷ್ಯವಾಗಿ ಮೊದಲ ಹೆಂಡ್ತಿ ಮಗ ವಿನಾಯಕ್ ಜತೆ ಗಲಾಟೆ ಆಗಿತ್ತು. ಆ ಬಳಿಕ ಆಸ್ತಿ ಮಾರಲು ನನ್ನ ಪರ್ಮಿಷನ್ ತಗೋಬೇಕೆಂದು ಪ್ರಕಾಶ್ ಆಜ್ಞೆ ಹೊರಡಿಸಿದ್ದರು. ಇದ್ರಿಂದ ಕೆರಳಿದ್ದ ವಿನಾಯಕ್, ತಂದೆ ಪ್ರಕಾಶ್, ಎರಡನೇ ತಾಯಿ ಸುನಂದಾ, ಸೋದರ ಕಾರ್ತಿಕ್ನ ಹತ್ಯೆಗೆ ಪ್ಲಾನ್ ಮಾಡಿದ್ದ.
ಫೈರೋಜ್ ಖಾಜಿ ಅನ್ನೋನಿಗೆ 65 ಲಕ್ಷಕ್ಕೆ ಡೀಲ್ ಕೊಟ್ಟಿದ್ದ. ಅಂದು ಮನೆಗೆ ನುಗ್ಗಿದ್ದ ಹಂತಕರು ಕಾರ್ತಿಕ್ ಸೇರಿ ಸಂಬಂಧಿ ಪರಶುರಾಮ, ಲಕ್ಷ್ಮಿ ಹಾಗೂ ಆಕಾಂಕ್ಷಾರನ್ನ ಕೊಂದಿದ್ದರು. ಡೋರ್ ಲಾಕ್ ಮಾಡಿದ್ರಿಂದ ಪ್ರಕಾಶ ಹಾಗೂ ಸುನಂದಾ ಬಚಾವ್ ಆಗಿದ್ದರು. ಬಳಿಕ 5 ತಂಡಗಳಾಗಿ ಅಖಾಡಕ್ಕೆ ಇಳಿದಿದ್ದ ಪೊಲೀಸರು 72 ಗಂಟೆಯಲ್ಲಿ, ವಿನಾಯಕ್ ಸೇರಿ 8 ಜನರನ್ನು ಬಂಧಿಸಿದ್ದರು.
ಇದನ್ನೂ ಓದಿ: ಕೊನೆಗೂ ಗದಗ ಕೊಲೆ ಪ್ರಕರಣದ ರಹಸ್ಯ ಭೇದಿಸಿದ ಪೊಲೀಸರು: ಹತ್ಯೆಗಿದೆ ರೋಚಕ ಹಿನ್ನೆಲೆ
65 ಲಕ್ಷಕ್ಕೆ ಕೊಲೆ ಸುಪಾರಿ ಪಡೆದಿದ್ದ ಫೈರೋಜ್, ಮಹಾರಾಷ್ಟ್ರದ ಮಿರಜ್, ಶಾಹಿಲ್, ಸೋಹಿಲ್, ಸುಲ್ತಾನ, ಮಹೇಂದ್ರ, ವಾಹಿದ ಬೇಪಾರಿಗೆ ಕೊಲೆ ಕೆಲಸ ಕೊಟ್ಟಿದ್ದ. ಇತ್ತ ನಾಲ್ವರ ಕೊಲೆ ನಡೀತಿದ್ದಂತೆ ವಿನಾಯಕ ಎಸ್ಕೇಪ್ ಆಗಲು ನೋಡಿದ್ದ. ಕೂಡಲೇ ಪೊಲೀಸರು ಅವನನ್ನ ಲಾಕ್ ಮಾಡಿ ಬೆಂಡೆತ್ತುತ್ತಿದ್ದಂತೆ ಸತ್ಯ ಕಕ್ಕಿದ್ದಾನೆ. ಕೇಸ್ ಬೇಧಿಸಿದ ಪೊಲೀಸರಿಗೆ 5 ಲಕ್ಷ ರೂ. ಬಹುಮಾನವನ್ನೂ ಐಜಿಪಿ ಘೋಷಿಸಿದ್ದರು.
ಹಣ, ಆಸ್ತಿ ಅನ್ನೋದು ಎಂತವ್ರನ್ನೂ ಕಟುಕರನ್ನಾಗಿ ಮಾಡುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ. ಮಾಡಿದ ತಪ್ಪಿಗೆ ವಿನಾಯಕ್ ಅಂಡ್ ಟೀಮ್ ಜೈಲು ಪಾಲಾಗಿತ್ತು. ಮಗನನ್ನ ಕಳ್ಕೊಂಡು ತಂದೆ, ತಾಯಿ ಕಣ್ಣೀರು ಹಾಕಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:05 pm, Mon, 29 April 24