ಗದಗ ಜಿಲ್ಲೆಯ ರೋಣ ತಾಲ್ಲೂಕಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಪರಿಶಿಷ್ಟ ಜಾತಿಯ ಮೂರು ಜನರಿಗೆ ಏಳು ಜನರ ಗುಂಪೊಂದು ಅಮಾನವೀಯವಾಗಿ ನಡೆದುಕೊಂಡಿದೆ. ಮೆಣಸಗಿ ಗ್ರಾಮದ ಕಾಂಟ್ರಾಕ್ಟರ್ ಪುಂಡಲೀಕ ಬಸಪ್ಪ ಮಾದರ ಎಂಬಾತ ಗೆಳೆಯರಾದ ಹನಮಂತ ದ್ಯಾಮಪ್ಪ ಮಾದರ ಹಾಗೂ ಗಣೇಶ್ ದುರಗಪ್ಪ ದೇವರಮನಿ ಜೊತೆಗೆ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತುಕೊಂಡಾಗ ಏಕಾಏಕಿ ಎಂಟು ಹತ್ತು ಜನರ ಗುಂಪೊಂದು ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿ ನಿಂದಿಸಿ, ಊರಾಗ ರೌಡಿಸಂ ಮಾಡಾಕತ್ತಿರೇನ ಲೇ… ಮಕ್ಕಳ ಅಂತಾ ಬೈದಾಡುತ್ತಾ ಫಿರ್ಯಾದಿ ಗುತ್ತಿಗೆದಾರ ಪುಂಡಲೀಕ ಮಾದರ ಎಂಬಾತನ ಎದೆ ಮೇಲಿನ ಅಂಗಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಆರೋಪಿ ರಾಜು ಬದಾಮಿ ಎಂಬಾತ ಸೆಗಣಿ ಹಿಡಿದುಕೊಂಡು ಬಂದು ಆರೋಪಿ ಪುಂಡಲೀಕನ ಬಾಯಿಯಲ್ಲಿ ಇಡಲು ಒತ್ತಾಯ ಮಾಡಿದ್ದು, ಹಾಗೂ ಗೆಳೆಯರಾದ ಹನಮಂತ ದ್ಯಾಮಪ್ಪ ಮಾದರ, ಗಣೇಶ್ ದುರಗಪ್ಪ ದೇವರಮನಿ ಎಂಬ ಮೂರು ಜನರ ಅಂಗಿ ಬಿಚ್ಚಿಸಿ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಜೀವ ಸಹಿತ ಸುಟ್ಟು ಬಿಡೋಣ ಎಂದಿದ್ದಲ್ಲದೇ ಲೈಟಿನ ಕಂಬಕ್ಕೆ ಕಟ್ಟಲು ಆರೋಪಿಗಳು ಮುಂದಾಗಿದ್ದರು ಎಂದು ಹೇಳಲಾಗಿದೆ. ನಂತರ ಊರು ಬಿಟ್ಟು ಹೋಗುವಂತೆ ಜೀವ ಬೆದರಿಕೆ ಕೂಡ ಹಾಕಲಾಗಿದೆಯಂತೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ರಾಜು ಸಿದ್ದಪ್ಪ ಬದಾಮಿ ಅಲಿಯಾಸ್ ಗಾಣಿಗೇರ, ಬಸವರಾಜ ಬದಾಮಿ, ಪ್ರವೀಣ್ ಮಲ್ಲಿಕಾರ್ಜುನ ಗುರಮ್ಮನವರ್, ಈರಪ್ಪ ಪತಂಗ, ಪ್ರಕಾಶ್ ಗಾಣಿಗೇರ, ಚಂದ್ರು ಮುದ್ದಪ್ಪ ಬದಾಮಿ ಎಂಬವರ ವಿರುದ್ಧ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಇಡೀ ಪ್ರಕರಣ ನಡೆದಿದ್ದು ಯಾವ ಕಾರಣಕ್ಕಾಗಿ ಎಂಬುದು ಗೊತ್ತಾಗಿಲ್ಲ.
ಪ್ರತಿ ದೂರು ದಾಖಲು
ಫಿರ್ಯಾದಿ ನಿಂಗಪ್ಪ ಶಿವಲಿಂಗಪ್ಪ ಬದಾಮಿ ಮನೆಯಲ್ಲಿ ಇದ್ದಾಗ ಆರೋಪಿಗಳಾದ ಬಸಪ್ಪ ಭರಮಪ್ಪ ಮಾದರ, ಪುಂಡಲೀಕ ಬಸಪ್ಪ ಮಾದರ, ಶೇಕಪ್ಪ ಭರಮಪ್ಪ ಮಾದರ, ಹನಮಪ್ಪ ಶೇಖಪ್ಪ ಮಾದರ, ಭರಮಪ್ಪ ಶೇಖಪ್ಪ ಮಾದರ, ಗಣೇಶ್ ದುರಗಪ್ಪ ದೇವರಮನಿ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಸ್ ಸಿ ಕೇಸ್ ಹಾಕಿಸಿ ಎಲ್ಲರನ್ನೂ ಒಳಗ ಹಾಕಸ್ತೀವಿ ಅಂತ ಬೆದರಿಕೆ ಹಾಕಿದ್ದಲ್ಲದೆ ಕಲ್ಲು ಮತ್ತು ಬಡಿಗೆಗಳಿಂದ ಹೊಡೆಯಲು ಹೋದಾಗ, ಪುಂಡಲೀಕ ಮಾದರ ಎಂಬಾತ ಫಿರ್ಯಾದಿ ನಿಂಗಪ್ಪನಿಗೆ ಕೈಯಿಂದ ಗುದ್ದಿ, ನೂಕಾಡಿದಾಗ ಬಿದ್ದು ಒಳಪೆಟ್ಟು ಆಗಿದ್ದು, ಇದೇ ಸಂದರ್ಭದಲ್ಲಿ ಶರಣಬಸಪ್ಪ ಬದಾಮಿ ಎಂಬುವರು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ಕಾಣಿಸಲಾಗಿದೆ.